ಯಲ್ಲಾಪುರ: ಬೇಸಿಗೆಯ ತೀವೃತೆ ಹೆಚ್ಚಿದ್ದು, ತಾಲೂಕಿನ ಗ್ರಾಮೀಣ ಭಾಗಗಳಲ್ಲಿಯೂ ಕುಡಿಯುವ ನೀರು ಸೇರಿದಂತೆ ಅಡಕೆ, ಬಾಳೆ ತೋಟಗಳು ನೀರಿಲ್ಲದೇ ಒಣಗಿ ರೈತರಲ್ಲಿ ಆತಂಕ ಮೂಡಿಸಿದೆ. ತೆರೆದ ಬಾವಿ ಕೆರೆಗಳಲ್ಲಿ ನೀರು ಆರಿದ್ದು, ಒಂದು ಕೊಡ ನೀರು ಎತ್ತಲು ಪರದಾಡುವಂತಾಗಿದೆ.
ಮೇ ತಿಂಗಳು ಬರುತ್ತಿದ್ದಂತೆ ಒಮ್ಮೆಗೆ ಬಾವಿ ಕೆರೆಗಳು ಬತ್ತಲಾರಂಬಿಸಿದೆ. ತಾಪಮಾನ 38ರಿಂದ 42 ಸೆಲ್ಸಿಯ್ಸನಷ್ಟು ಸರಾಸರಿ ಈ ವರ್ಷ ಏಪ್ರಿಲ್ ಮೇದಲ್ಲಿ ಕಾಣಿಸಿಕೊಂಡಿದೆ. ಕುಡಿಯುವ ನೀರಿಗೆ ಇಲಾಖೆಗಳು ಈಗ ಹೂಳು ತೆಗೆಯಲು ಮುಂದಾಗಿದೆ. ಯೋಜನೆ ರೂಪಿಸತೊಡಗಿದೆ. ಯೋಜನೆ ಕಾರ್ಯಗತವಾಗುವುದರೊಳಗೆ ಮಳೆ ಆರಂಭವಾಗುತ್ತದೆ. ಪ್ರತಿವರ್ಷವೂ ಮೇ ದಲ್ಲಿ ಟಾಸ್ಕ್ಪೋರ್ಸ್ ಸಭೆಗಳು ನಡೆದು ಬಳಿಕ ನೀರಿನ ಕುರಿತು ಯೋಚಿಸುತ್ತಾರೆ. ಮುಂಚಿತವಾಗಿ ಕುಡಿಯುವ ನೀರಿನ ಅಭಾವವಾಗುವ ಪ್ರದೇಶಗಳ ಮಹಿತಿಯಿದ್ದರೂ ಗಮನ ಹರಿಸುತ್ತಿಲ್ಲ ಎಂಬ ಆರೋಪವಿದೆ. ನಂತರ ಕಾಮಗಾರಿ ಕಾಟಚಾರದ್ದಾಗುತ್ತದೆ ಎಂಬ ಆರೋಪವೂ ಇದೆ. ತಾಲೂಕಿಗೆ ಕುಡಿಯುವ ನೀರಿಗೆ ಸಾಕಷ್ಟು ಅನುದಾನ ಬಂದಿದೆ. ಆದರೆ ಅಡಿಕೆ ಬೆಳೆ ರಕ್ಷಣೆ ಮಾಡುವ ಕಾರ್ಯ ಮಾತ್ರ ಯಾರಿಂದಲೂ ಆಗುತ್ತಿಲ್ಲ. ಬರುವ ದಿನದಲ್ಲಿ ತೋಟಿಗನ ಸ್ಥಿತಿ ಆತಂಕದಾಯಕವಾಗಲಿದೆ.
ತಾಲೂಕಿನ ವಿವಿಧ ಗ್ರಾಪಂ ಮತ್ತು ಪಪಂ ವ್ಯಾಪ್ತಿಯ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಾಗಿ ಸರ್ಕಾರದ ಸೂಚನೆ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕಾಮಗಾರಿ ಕೈಗೆತ್ತಿಕೊಂಡಿರುವುದು ಕಂಡುಬಂದಿದೆ.
ಕಿರವತ್ತಿ ಹಾಗೂ ಕಣ್ಣೀಗೇರಿ ಗ್ರಾಪಂಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕೈಗೊಂಡ ಕ್ರಮಗಳ ಪರಿಶೀಲನೆ ನಡೆಸಿ ಮಾಹಿತಿ ನೀಡುತ್ತಿದ್ದರು. ಕಣ್ಣೀಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 115 ಹಿಂದುಳಿದ ವರ್ಗದ ಕುಟುಂಬಗಳು ವಾಸವಾಗಿದ್ದು, ಗ್ರಾ.ಪಂ ವ್ಯಾಪ್ತಿಯಲ್ಲಿ ಸರ್ಕಾರದ 82 ಕೊಳವೆ ಬಾವಿಗಳು ಸುಸ್ಥಿತಿಯಲ್ಲಿದ್ದರೂ ಅವುಗಳ ನಿರ್ವಹಣೆ ಗ್ರಾ.ಪಂಗೆ ಕಷ್ಟಸಾಧ್ಯವಾಗಿದೆ.
Advertisement
ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಸಲಿನ ತೀವ್ರತೆಗೆ ಅಡಕೆ ತೋಟಗಳು ಒಣಗುತ್ತಿವೆ. ಅಡಕೆಯ ಹೆಡೆಗಳು ಬಿಸಿಲಿನ ಬೇಗೆಗೆ ಒಣಗಿ ಹಳದಿ ಬಣ್ಣಕ್ಕೆ ತಿರುಗಿವೆ. ಮರದ ಚೆಂಡು ಕಳಚಿ ಬೀಳುವಂತಾಗಿದೆ. ಇದೇ ರೀತಿಯ ಬಿಸಿಲು ಮುಂದುವರಿದರೆ ಅಡಕೆ ತೋಟಗಳು ಸಂಪೂರ್ಣ ಒಣಗಿ ಹೋಗಬಹುದೆಂಬ ಆತಂಕ ಬೆಳೆಗಾರರಲ್ಲಿ ಮನೆ ಮಾಡಿದೆ. ಇದು ಅಡಕೆ ಬೆಳೆಯನ್ನೇ ನಂಬಿರುವ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಈ ಬರಗಾಲದಿಂದ ಬರುವ ವರ್ಷದ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದೆಂಬ ಆತಂಕ ಮೂಡಿಸಿದೆ. ಕೇವಲ ಅಡಕೆಯೇ ಜೀವನಾಧಾರವಾಗಿರುವಾಗ ಬೆಳೆ ಇಲ್ಲವಾದರೆ ಜೀವನ ನಿರ್ವಹಣೆ ಕಷ್ಟ ಎಂಬುದು ರೈತರ ಅಳಲು.
Related Articles
Advertisement
ಚಿಕ್ಕಮಾವಳ್ಳಿ, ಕಣ್ಣೀಗೇರಿ, ಹಿಟ್ಟಿನಬೈಲ್ ಹಾಗೂ ಕೊಡಸೆಯ ಬಿಡಿ ಮನೆಗಳಿಗೆ ಕುಡಿಯುವ ನೀರು ಇಲ್ಲದೇ ತೊಂದರೆಯಾಗಿದೆ. ಇದನ್ನರಿತ ಗ್ರಾಪಂ ಆಡಳಿತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿರುವ ಅರಣ್ಯ ಇಲಾಖೆಯ ಸುಮಾರು 10 ಕೆರೆಗಳಲ್ಲಿರುವ ನೀರು ವನ್ಯಪ್ರಾಣಿಗಳಿಗೆ ನೀರಿನ ಆಸರೆಯಾಗಿದ್ದು, ಈ ಪ್ರದೇಶದ ಬತ್ತಿಹೋದ ಐದು ಕೆರೆಗಳ ಹೂಳೆತ್ತಲು ಈಗಾಗಲೇ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ನೀಡಿದೆ.
ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರಿನ ತುಟಾಗ್ರತೆ ಮಿತಿಮೀರಿದ್ದು, ಇಲ್ಲಿನ ಜಯಂತಿ ನಗರ ಮತ್ತು ಬೈಲಂದೂರು ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆ ನೀಗಲು ಗ್ರಾ.ಪಂ ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಲಾಗಿದೆ.
ಗ್ರಾ.ಪಂ ವ್ಯಾಪ್ತಿಯ ಖಾರೆವಾಡದಲ್ಲಿ 35 ಕುಟುಂಬಗಳಿದ್ದು, ಇಲ್ಲಿ ಕುಡಿಯುವ ನೀರಿನ ತತ್ವಾರ ಎದುರಾಗಿದ್ದು, ಕಿರವತ್ತಿ, ಕಂಚನಳ್ಳಿ, ಹೊಸಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೀರಿನ ಕೊರತೆ ಕಂಡುಬಂದಿಲ್ಲ.
ಗ್ರಾ.ಪಂ ಸಮೀಪದ ಹೊಲಗಟ್ಟಿ ಕೆರೆಯ ಹೂಳೆತ್ತಲು ಉದ್ಯೋಗ ಖಾತ್ರಿ ಯೋಜನೆಯಡಿ 9 ಲಕ್ಷ ರೂ.ಗಳ ಕಾಮಗಾರಿ ಆರಂಭಗೊಂಡಿದ್ದು, ಕೆಲಸ ನಡೆಯುತ್ತಿದೆ.
ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ದೊಡ್ಡಯಲವಳ್ಳಿ, ಸಣ್ಣಯಲವಳ್ಳಿ, ಸಾತೀಕಟ್ಟಾಗಳಲ್ಲಿ ವನ್ಯಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸಲೆಂದು ಶಾಶ್ವತ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಗಡಿಭಾಗದಲ್ಲಿರುವ ಅತ್ತಿವೇರಿ ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದು, ಅಲ್ಲಿ ಸಾಕಷ್ಟು ವನ್ಯಪ್ರಾಣಿಗಳು ತಮ್ಮ ಜಲದಾಹವನ್ನು ಇಂಗಿಸಿಕೊಳ್ಳುತ್ತಿವೆ.
ಅಡಕೆ ಬೆಳೆಗಾರರಿಗೆ ನೆರವು ನೀಡಿ:
ಬಹುತೇಕ ಅಡಕೆ ತೋಟಗಳು ನೀರಿಲ್ಲದೇ ಒಣಗಿವೆ. ಅಡಕೆಯ ಸಿಂಗಾರಗಳು ಒಣಗಲಾರಂಭಿಸಿವೆ. ಮುಂದಿನ ವರ್ಷ ಬೆಳೆಯ ಪ್ರಮಾಣ ಗಣನೀಯವಾಗಿ ಕುಸಿತ ಕಾಣಲಿದೆ. ಸಂಬಂಧಪಟ್ಟ ಇಲಾಖೆ ಅಡಕೆ ಬೆಳೆಗಾರರಿಗೆ ನೆರವು ನೀಡುವ ಕೆಲಸ ಮಾಡಬೇಕು ಎಂಬುದು ಅಡಿಕೆ ಬೆಳೆಗಾರರು ಆಗ್ರಹವಾಗಿದೆ.
•ನರಸಿಂಹ ಸಾತೊಡ್ಡಿ