Advertisement

ಬಹುವಚನಂನಲ್ಲಿ ಅದ್ಭುತ ನೃತ್ಯ ಪ್ರಸ್ತುತಿ

11:24 AM Mar 06, 2020 | mahesh |

ರೌದ್ರ ರಸಕ್ಕೆ ವೀರಭದ್ರ ಜನನ, ಭರತ ಖಂಡದ ಉದ್ದಗಲಕ್ಕೂ ರುದ್ರಾವೇಶದಿಂದ ರುದ್ರ ಎಸೆದ ದಾಕ್ಷಾಯಣಿಯ ದೇಹದ ಅರೆಬೆಂದ ಚೂರುಗಳು ಒಂದರೆಕ್ಷಣ ಉಸಿರನ್ನೇ ನಿಲ್ಲಿಸಿತೇನೋ ಎಂಬ ಅನುಭಾವ….

Advertisement

ಇತ್ತೀಚೆಗೆ ಪುತ್ತೂರಿನ “ಬಹುವಚನಂ’ನಲ್ಲಿ ನಡೆದ ವಿ|ಮಂಜುಳಾ ಸುಬ್ರಹ್ಮಣ್ಯ ಅವರ ನಿರ್ದೇಶನದ ರಸ ನಿಷ್ಪತ್ತಿ…ನವರಸಾಭಿನಯಗಳ ವಿಸ್ತಾರ ಪ್ರಸ್ತುತಿ ಅಬಾಲ ವೃದ್ಧರಾದಿಯಾಗಿ ಎಲ್ಲ ಪ್ರೇಕ್ಷಕರನ್ನು ಸುಮಾರು ಒಂದೂ ವರೆ ತಾಸು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.

ಈ ಕಾರ್ಯಕ್ರಮ ಪ್ರಸ್ತುತಿಯಾದುದು ಕರುಣಾರಸಕ್ಕೇ ನಿಷ್ಪತ್ತಿಯಾದ ಸೀತಾದೇವಿಯ ಜನ್ಮದಿನದಂದು ಎಂಬುದು ವಿಶೇಷ. ಶೃಂಗಾರ ರಸಾಭಿನಯಕ್ಕೆ ವಿ| ಮಂಜುಳಾ ಸುಬ್ರಹ್ಮಣ್ಯ ಅವರು ಆಯ್ಕೆ ಮಾಡಿಕೊಂಡಿದ್ದು ಜಯದೇವನ ಅಷ್ಟಪದಿಯನ್ನು. ಪ್ರಿಯೇ…ಚಾರುಶೀಲೇ…ಎಂಬ ಅಭಿವ್ಯಕ್ತಿ ಸಮರ್ಥವಾಗಿ ಪ್ರೇಕ್ಷಕರ ಹೃದಯದಲ್ಲಿ ಅಭಿವ್ಯಕ್ತವಾಗುವಂತಹ ಸಮರ್ಥ ಅಭಿನಯ. ಹಾಸ್ಯಕ್ಕೆ ಆಯ್ದುಕೊಂಡ ಶಿವನ ರೂಪ, ಇರವನ್ನು ವಿಡಂಬಿಸುವ. ಜಿ. ಎಸ್‌. ಶಿವರುದ್ರಪ್ಪನವರ “ಹೌದೇನೇ ಉಮಾ’ದ ಭಾಗದಲ್ಲಿ ಶಿವನ ನಾಗಾಭರಣ, ಪುಲಿದೊಗಲು, ಮಸಣದ ಬೂದಿ, ತಿರಿದುಂಬುವ ಪರಿಗೆ ಮೊಗದಲ್ಲಿ ಮಂದಹಾಸ.

ರೌದ್ರ ರಸಕ್ಕೆ ವೀರಭದ್ರ ಜನನ, ಭರತ ಖಂಡದ ಉದ್ದಗಲಕ್ಕೂ ರುದ್ರಾವೇಶದಿಂದ ರುದ್ರ ಎಸೆದ ದಾಕ್ಷಾಯಣಿಯ ದೇಹದ ಅರೆಬೆಂದ ಚೂರುಗಳು ಒಂದರೆಕ್ಷಣ ಉಸಿರನ್ನೇ ನಿಲ್ಲಿಸಿತೇನೋ ಎಂಬ ಅನುಭಾವ.ಕರುಣಾರಸದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಭಾಗ. ಪತಿಗಳೈವರು ಇದ್ದರೇನು…ಎಂಬ ನರ್ತಕಿಯ ವಿಲಪನೆ ಪ್ರೇಕ್ಷಕನೊಳಗೊಂದು ಅನುಕಂಪದ ಅಲೆಯ ಅನುಭೂತಿಯನ್ನೇ ಸೃಷ್ಟಿಸಿತು. ವೀರರಸದಲ್ಲಿ ರಾವಣ ಕೈಲಾಸವನ್ನು ಎತ್ತುವ ಅಭಿನಯವನ್ನು ವೀಕ್ಷಿಸಿದ ಪ್ರೇಕ್ಷಕ “ಭಳಿರೇ’ ಎಂದು ಉದ್ಗರಿಸಿದ್ದು ಅಭಿವ್ಯಕ್ತಗೊಂಡ ವೀರರಸಕ್ಕೂ ಹೌದು, ನರ್ತಕಿಯ ಸಮರ್ಥ ಅಭಿವ್ಯಕ್ತಿಗೂ ಹೌದು.

ಅದ್ಭುತ ರಸಕ್ಕೆ ಮೂರು ಹೆಜ್ಜೆ ದಾನ ಬೇಡಿ ತ್ರಿವಿಕ್ರಮನಾಗಿ ಬೆಳೆದ ವಾಮನ ಹುಬ್ಬೇರಿಸಿದರೆ, ಭೀಭತ್ಸ ಕ್ಕೆ ನರಸಿಂಹಾವತಾರದಲ್ಲಿ ಹಿರಣ್ಯ ಕಶಿಪುವಿನ ಕರುಳು ಬಗೆದ ನರಸಿಂಹ ವಿಜೃಂಭಿಸಿದ. ಭಯಾ ನಕದಲ್ಲಿ ರಕ್ತರಾತ್ರಿಯ ದುರ್ಯೋಧನನನ್ನು ಪ್ರೇಕ್ಷಕರ ಎದುರು ತಂದ ನರ್ತಕಿ ಶಾಂತರಸದಲ್ಲಿ ಆಧ್ಯಾತ್ಮಿಕ ಧ್ಯಾನದಿಂದ ಆನಂದ ಎಂಬ ಭಾವದಲ್ಲಿ ರಾಮ, ಸೀತೆ , ಲಕ್ಷ್ಮಣ, ಜೊತೆಗೊಬ್ಬ ಹನುಮಂತ, ಸುತ್ತಲಿನ ವಾನರ ಗಡಣ, ಅಲ್ಲೊಬ್ಬ ಸುಗ್ರೀವ, ಇಕ್ಕೆಲದ ಭರತ ಶತ್ರುಘ್ನರ ಜೊತೆಯ ಶಾಂತ ಮೂರ್ತಿ ಶ್ರೀರಾಮ ಸಾಕ್ಷಿಯಾದ.

Advertisement

ಪ್ರಸ್ತುತಿಯ ಕೊನೆಯಲ್ಲಿದ್ದ ಸಂವಾದದಲ್ಲಿ ವಿದ್ವಾಂಸರೊಬ್ಬರು ಈ ರಸಗಳನ್ನು ಸಮಕಾಲೀನವಾಗಿ – ಪುರಾಣ ಪಾತ್ರಗಳ ಹೊರತಾಗಿ ತರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮುಂದಿನ ಐದೇ ಐದು ನಿಮಿಷಗಳಲ್ಲಿ ಹಿಮ್ಮೇಳದಲ್ಲಿ ತನ್ನ ಮೃದಂಗದ ಜೊತೆ ನುಡಿಯುತ್ತಿದ್ದ ವಿ| ಬಾಲಕೃಷ್ಣ ಭಟ್‌ ಹಾಗೂ ವಿ| ಮಂಜುಳಾ ಸುಬ್ರಹ್ಮಣ್ಯ ಅವರು ಸಂವಾದಿಸಿ ನಿಶ್ಚಯಿಸಿ ಅಭಿವ್ಯಕ್ತಗೊಂಡದ್ದು ಮಾತ್ರ ಎಲ್ಲ ರಸಗಳ ಜೊತೆಗಿನ ಒಂದು ಅತ್ಯದ್ಭುತ ರಸ. ರೈತನ ಬವಣೆಯಲ್ಲಿ , ಮಾರವಾಡಿಯ ಲಾಭಬಡುಕತನದಲ್ಲಿ ಕರುಣ, ಅದ್ಭುತ, ಹಾಸ್ಯ ಭಯಾನಕ ರೌದ್ರಗಳ ಸಮ್ಮಿಶ್ರಣವಿತ್ತು. ಆದರೆ ಅದ್ಭುತವಿದ್ದದ್ದು ನರ್ತ ಕಿಯ ಅಭಿನಯ ಕೌಶಲ್ಯದಲ್ಲಿ. ಸದಾ ಹೊಸತನ್ನೇ ಹುಡುಕುವ ಕ್ರಿಯಾಶೀಲೆ ಮಂಜುಳಾ ಸುಬ್ರಹ್ಮಣ್ಯ ಅವರ ಅಭಿನಯ ಬಹಳಷ್ಟು ಕಾಲ ಪ್ರೇಕ್ಷಕರನ್ನು ಕಾಡುವುದಂತೂ ನಿಜ.ಮೃದಂಗದಲ್ಲಿ ವಿ| ಬಾಲಕೃಷ್ಣ ಭಟ್‌ , ಹಾಡುಗಾರಿಕೆಯಲ್ಲಿ ಶಿವಶಂಕರ ಮಯ್ಯ, ಹಾಗೂ ನಟುವಾಂಗದಲ್ಲಿ ಕು| ಭವ್ಯಾಶ್ರೀ ಬಾಡೂರು, ರಸೋತ್ಪತ್ತಿಯ ವಿವರಣಾ ನಿರೂಪಣೆಯಲ್ಲಿ ಕು| ರಚನಾ ನರಿಯೂರು ಅವರುಗಳ ಸಹಕಾರದಿಂದ ಕಾರ್ಯಕ್ರಮದ ವರ್ಚಸ್ಸು ಇನ್ನಷ್ಟು ಹೆಚ್ಚಾಗಿತ್ತು.

ಜಯಶ್ರೀ ಭಟ್‌, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next