ಮಂಡ್ಯ/ತುಮಕೂರು/ಚಾಮರಾಜನಗರ: ಮೊದಲನೇ ಹಂತದ ಲೋಕಸಭೆ ಚುನಾವಣಾ ರಣೋತ್ಸವ ಮುಗಿದಿದ್ದು ಇನ್ನೆನ್ನಿದ್ದರೂ ಅಭ್ಯರ್ಥಿಗಳ ಪರ-ವಿರೋಧ ಕಾರ್ಯಕರ್ತರು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಚುನಾವಣೆ ಬಳಿಕ ಬೆಟ್ಟಿಂಗ್ ಭರಾಟೆಯೂ ಜೋರಾಗಿ ನಡೆದಿದೆ.
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲ್ಲುವ ವಿಶ್ವಾಸದೊಂದಿಗೆ ಅಭಿಮಾನಿಯೊಬ್ಬ 2 ಎಕರೆ ಜಮೀನನ್ನೇ ಪಣಕ್ಕಿಟ್ಟಿದ್ದಾನೆ. ಜೆಡಿಎಸ್ ಪರ ಒಬ್ಬರು ಬೈಕ್, 5 ಲಕ್ಷ ಹಣ ಕಟ್ಟುವುದಕ್ಕೂ ಸಿದ್ಧ ಎಂದು ಸವಾಲು ಹಾಕುತ್ತಿದ್ದಾರೆ.
ಲೋಕಸಭೆಯ ಚುನಾವಣೆಯ ಸಮೀಕ್ಷೆ ನಡೆಸಿರುವ ಯುವ ಪಡೆಯೊಂದು ಸುಮಲತಾ ಸುಮಾರು 1.90 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಜಾತಿ ಮತಗಳ ಲೆಕ್ಕಾಚಾರದೊಂದಿಗೆ ಸಮೀಕ್ಷೆ ನಡೆಸಿ ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದು, ಇದಕ್ಕೆ ಪ್ರತಿಯಾಗಿ ನಿಖೀಲ್ ಗೆದ್ದೇ ಗೆಲ್ಲುತ್ತಾರೆ ಎಂದು ನಿಖೀಲ್ ಅಭಿಮಾನಿಗಳೂ ಸಹ ಬೆಟ್ಟಿಂಗ್ ಕಟ್ಟುತ್ತಾ ಗೆಲುವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಧ್ರುವನಾರಾಯಣ್ ಹಾಗೂ ಬಿಜೆಪಿಯ ವಿ.ಶ್ರೀನಿವಾಸ್ ಪ್ರಸಾದ್ ಬೆಂಬಲಿಗರ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಕಾಂಗ್ರೆಸ್ ಮುಖಂಡರು ಆರ್.ಧ್ರುವನಾರಾಯಣ 3ನೇ ಬಾರಿಗೆ ಆಯ್ಕೆಯಾಗುತ್ತಾರೆಂದು ಬಾಜಿಗೆ ಇಳಿದಿದ್ದಾರೆ.
ವಿ.ಶ್ರೀನಿವಾಸ್ ಪ್ರಸಾದ್ ಪರ ಬಿಜೆಪಿ ಮುಖಂಡರೂ ತೆರೆ ಮೆರೆಯಲ್ಲಿ ಬಾಜಿಗೆ ಆಹ್ವಾನಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಬಸವರಾಜು ಪರ ಭರ್ಜರಿ ಬೆಟ್ಟಿಂಗ್ ನಡೆಯುತ್ತಿದೆ. ಕೋಲಾರದ ಗ್ರಾಮೀಣ ಪ್ರದೇಶಗಳಲ್ಲೂ ಸೋಲು-ಗೆಲುವಿನ ಕೌತುಕ ಮನೆ ಮಾಡಿದ್ದು, ಬಾಜಿ ಭರಾಟೆ ಜೋರಾಗಿದೆ.