ರಾಜ್ಯದಲ್ಲಿ ಈ “ಆಪರೇಷನ್’ ಎಂಬ ಪದ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಗೊತ್ತೇ ಇದೆ. ರಾಜಕೀಯ ವಲಯದಲ್ಲಂತೂ “ಆಪರೇಷನ್ ಕಮಲ’, “ಆಪರೇಷನ್ ಕಾಂಗ್ರೆಸ್’ ಈ ಪದಗಳು ಆಗಾಗ ಜೋರು ಸುದ್ದಿ ಮಾಡಿದ್ದುಂಟು. ರಾಜಕೀಯವಷ್ಟೇ ಅಲ್ಲ, ಚಿತ್ರರಂಗದಲ್ಲೂ “ಆಪರೇಷನ್’ ಹಾವಳಿಗೆ ಲೆಕ್ಕವಿಲ್ಲ. ಅಣ್ಣಾವ್ರ “ಆಪರೇಷನ್ ಡೈಮೆಂಡ್ ರಾಕೆಟ್’ ಯಾರಿಗೆ ಗೊತ್ತಿಲ್ಲ ಹೇಳಿ? “ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999′, “ಆಪರೇಷನ್ ಅಂತ’ ಹೀಗೆ ಈ ಎಲ್ಲಾ “ಆಪರೇಷನ್’ಗಳು ಕೂಡ ಸದ್ದು ಮಾಡಿವೆ. ಈಗ ಹೊಸಬರ ತಂಡವೊಂದು ಹೊಸ “ಆಪರೇಷನ್ ‘ಗೆ ಕೈ ಹಾಕಿದೆ. ಹೌದು, “ಆಪರೇಷನ್ ನಕ್ಷತ್ರ’ ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದೆ. ಶೀರ್ಷಿಕೆಯೇ ಹೇಳುವಂತೆ, ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ. ಈ ಚಿತ್ರದ ಮೂಲಕ ಮಧುಸೂದನ್ ನಿರ್ದೇಶಕರಾಗಿದ್ದಾರೆ. ತಮ್ಮ ಚಿತ್ರದ ಬಗ್ಗೆ ಹೇಳಿಕೊಳ್ಳುವ ಅವರು, “ನಾನು ಕಾನ್ಫಿಡಾದಲ್ಲಿ ನಿರ್ದೇಶನದ ಕೋರ್ಸ್ ಮುಗಿಸಿದಾಗ, ಕನ್ನಡದಲ್ಲೊಂದು ವಿಭಿನ್ನ ಕಥೆ ಹೆಣೆದು, ಆ ಮೂಲಕ ಗುರುತಿಸಿಕೊಳ್ಳಬೇಕು ಅಂದುಕೊಂಡಿದ್ದೆ. ಅದೀಗ ಈ “ಆಪರೇಷನ್ ನಕ್ಷತ್ರ’ ಚಿತ್ರದ ಮೂಲಕ ಈಡೇರಿದೆ. ಇದು ಸಸ್ಪೆನ್ಸ್-ಥ್ರಿಲ್ಲರ್ ಕಥಾ ಹಂದರ ಹೊಂದಿದೆ. ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಕಥೆಗಳು ಬಂದಿದ್ದರೂ, ಇಲ್ಲಿ ಮೈಂಡ್‌ಗೆàಮ್ ಜೊತೆಗೊಂದು ವಿಶೇಷ ಅನುಭವ ಆಗುವಂತಹ ತಿರುವುಗಳಿವೆ. ಅವು ಚಿತ್ರದ ಜೀವಾಳ. ಇಲ್ಲಿ ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ. ಏಳೆಂಟು ತಿರುವುಗಳು ಕಥೆಯ ದಿಕ್ಕನ್ನೇ ಬದಲಿಸುತ್ತವೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ಕಾಣಬೇಕು. ಸಿನಿಮಾಗೆ ಏನೆಲ್ಲಾ ಅಗತ್ಯವಿತ್ತೋ ಎಲ್ಲವನ್ನೂ ನಿರ್ಮಾಪಕರು ಪೂರೈಸಿದ್ದರಿಂದ ಚಿತ್ರ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ’ ಎಂದು ವಿವರಿಸಿದರು ನಿರ್ದೇಶಕ ಮಧುಸೂದನ್.
ನಾಯಕ ನಿರಂಜನ್ ಒಡೆಯರ್, “ನನಗೆ ಸಿಕ್ಕ ಒಳ್ಳೆಯ ಅವಕಾಶ ಇದು. ಇಲ್ಲಿ ಕಥೆ ಮತ್ತು ಹಿನ್ನೆಲೆ ಸಂಗೀತವೇ ಹೀರೋ. ಕಥೆ ಬಗ್ಗೆ ಹೇಳುವುದಾದರೆ, ನಿಸ್ವಾರ್ಥ ಮುಖವಾಡಗಳ ಹಿಂದೆ ಸ್ವಾರ್ಥ ಮುಖವಾಡ ಹೇಗಿರುತ್ತೆ ಎಂಬುದರ ಅರ್ಥ ಇಲ್ಲಿದೆ. ಮನುಷ್ಯ ಹಣದ ಹಿಂದೆ ಹೋದಾಗ, ಏನಾಗುತ್ತೆ ಎಂಬುದನ್ನು ಸೂಕ್ಷ್ಮವಾಗಿ, ಸಖತ್ ಥ್ರಿಲ್ ಎನಿಸುವಂತೆ ಕಟ್ಟಿಕೊಡಲಾಗಿದೆ. ಇಲ್ಲಿ ಬರುವ ಟ್ವಿಸ್ಟ್‌ಗಳೇ ಚಿತ್ರದ ಹೈಲೈಟ್. ನಾನಿಲ್ಲಿ ಜಿಮ್‌ವೊಂದರ ತರಬೇತುದಾರನಾಗಿ ಕಾಣಿಸಿಕೊಂಡಿದ್ದೇನೆ’ಎಂದರು ನಿರಂಜನ್ ಒಡೆಯರ್.
ನಾಯಕಿ ಅದಿತಿ ಪ್ರಭುದೇವ ಅವರಿಗೆ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳೆಂದರೆ ಇಷ್ಟವಂತೆ. “ಇಲ್ಲಿ ಚಾಲೆಂಜ್ ಪಾತ್ರ ಸಿಕ್ಕಿದ್ದು, ರೋಶನಿ ಎಂಬ ರಿಚ್ ಹುಡುಗಿಯ ಪಾತ್ರದಲ್ಲಿ ತನ್ನದೇ ಆದ ಎಥಿಕ್ಸ್ ಹೊಂದಿರುವ ಹುಡುಗಿಯಾಗಿ ಕಾಣಸಿಕೊಂಡಿದ್ದೇನೆ. ಒಂದೊಳ್ಳೆಯ ಅನುಭವ ಇಲ್ಲಾಗಿದೆ. “ಆಪರೇಷನ್ ನಕ್ಷತ್ರ’ ನನ್ನ ಅದೃಷ್ಟ ಎಂದೇ ಭಾವಿಸುತ್ತೇನೆ. ಈ ಸಿನಿಮಾ ಒಪ್ಪಿದ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಹಾಗಾಗಿ ಇದು ನನ್ನ ಲಕ್ಕಿ ಸಿನಿಮಾ’ ಎಂದರು ಅದಿತಿ
ನಾಯಕಿ ಯಜ್ಞಾಶೆಟ್ಟಿ ಅವರಿಗೆ ಇಲ್ಲೊಂದು ವಿಭಿನ್ನ ಪಾತ್ರ ಸಿಕ್ಕಿದೆಯಂತೆ. “ನಾನು ಇದುವರೆಗೆ ಮಾಡದೇ ಇರುವಂತಹ ಪಾತ್ರ ಇಲ್ಲಿ ಮಾಡಿದ್ದೇನೆ. ಈಗಾಗಲೇ ಹಾಡು, ಟೀಸರ್ ಎಲ್ಲರಿಗೂ ಮೆಚ್ಚುಗೆಯಾಗಿದೆ.ಥ್ರಿಲ್ಲರ್ ಜಾನರ್ ನನಗೂ ಇಷ್ಟ. ಇಲ್ಲಿ ಹೀಗೆ ಆಗಬಹುದು ಅಂದುಕೊಂಡರೆ ಅಲ್ಲೊಂದು ಟ್ವಿಸ್ಟ್ ಇದೆ. ಅಲ್ಲಿ ಹಾಗೆ ಆಗುತ್ತೆ ಅಂದರೆ ಅಲ್ಲೂ ಇನ್ನೊಂದು ಟ್ವಿಸ್ಟ್ ಬರುತ್ತೆ. ಹೀಗೆ ಟ್ವಿಸ್ಟ್‌ಗಳ ಮೂಲಕ ನೋಡುಗರಲ್ಲಿ ಹೊಸ ಕುತೂಹಲ ಹುಟ್ಟಿಸುವ ಚಿತ್ರವಿದು. ಮೊದಲ ಸಲ ಇಲ್ಲಿ ಹೊಸ ಅಟೆಂಪ್ಟ್ ಮಾಡಿದ್ದೇನೆ’ ಎಂಬುದು ಯಜ್ಞಾಶೆಟ್ಟಿ ಮಾತು.
ಮತ್ತೂಬ್ಬ ನಾಯಕ ಲಿಖೀತ್‌ಸೂರ್ಯ , ಇದೊಂದು ಹೊಸ ಪ್ರಯೋಗಾತ್ಮಕ ಚಿತ್ರ ಎನ್ನಲ್ಲಡ್ಡಿಯಿಲ್ಲ. ಒಳ್ಳೆಯ ಚಿತ್ರದಲ್ಲಿ ನಾನಿದ್ದೇನೆ ಎಂಬ ಖುಷಿ ನನ್ನದು ಎಂದರು. ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಇಲ್ಲಿ ಎರಡು ಹಾಡುಗಳನ್ನು ಕೊಟ್ಟಿದ್ದಾರೆ. “ನನಗೆ ಇದು ಹೊಸ ಅನುಭವ ಕಟ್ಟಿಕೊಟ್ಟ ಚಿತ್ರ. ಇಲ್ಲಿ ಎರಡು ಹಾಡು ಇದ್ದರೂ, ಹಿನ್ನೆಲೆ ಸಂಗೀತ ಹೈಲೈಟ್. ಏಳೆಂಟು ಥೀಮ್ ಮ್ಯೂಸಿಕ್ ಇಲ್ಲಿ ಬಳಸಿರುವುದು ಪ್ಲಸ್. ಅದಿಲ್ಲಿ ವಕೌìಟ್ ಆಗಿದೆ.ಇನ್ನು, ಜಾಜ್ ಶೈಲಿಯ ಹಾಡು ಪ್ರಯೋಗ ಮಾಡಲಾಗಿದೆ’ಎಂದರು.
ನಿರ್ಮಾಪಕರಾದ ನಂದಕುಮಾರ್, ಅರವಿಂದ ಮೂರ್ತಿ, ರಾಧಕೃಷ್ಣ, ಕಿಶೋರ್ ಮೇಗಳಮನೆ,
ಹಾಸ್ಯನಟ ಗೋವಿಂದೇಗೌಡ,ಪ್ರಶಾಂತ್ ನಟನಾ ತಮ್ಮ “ಆಪರೇಷನ್ ‘ ಬಗ್ಗೆ ಮಾತನಾಡಿದರು. ಲಹರಿ
ಸಂಸ್ಥೆಯ ಆನಂದ್ ಇದ್ದರು.
ವಿಜಯ್ ಭರಮಸಾಗರ