Advertisement
ಭಾಗವತ ಸತೀಶ್ ಶೆಟ್ಟಿ ಬೋಂದೆಲ್ ಸಂಯೋಜನೆಯಲ್ಲಿ ಮಂಗಳೂರಿನ ಪುರಭವನದಲ್ಲಿ ಜಾಂಬವತಿ – ವೀರಮಣಿ ಎಂಬೆರಡು ಆಖ್ಯಾನಗಳು ಅದ್ಧೂರಿಯಾಗಿ ಮೂಡಿಬಂತು. ಪೂರ್ಣಿಮ ಯತೀಶ್ ರೈ ಇವರ ನಿರ್ದೇಶನದಲ್ಲಿ ಸಂಪೂರ್ಣ ಮಹಿಳಾ ಕಲಾವಿದರಿಂದಲೇ ಜರಗಿದ ಜಾಂಬವತಿ ಕಲ್ಯಾಣ ಕುಣಿತ ನಾಟ್ಯದಲ್ಲೂ ಮಾತುಗಾರಿಕೆಯಲ್ಲೂ ಯಾವುದೇ ವೃತ್ತಿಪರ ಪುರುಷಕಲಾವಿದರಿಗಿಂತ ಕಮ್ಮಿ ಇಲ್ಲದಂತೆ ಮೂಡಿಬಂತು.
Related Articles
Advertisement
ಸತ್ರಾಜಿತನಾಗಿ ಕು|ಛಾಯಾಲಕ್ಷ್ಮೀ, ಪ್ರಸೇನನಾಗಿ ಕು| ಕೃತಿ ವಿ.ರಾವ್, ವನಪಾಲಕರಾಗಿ ರೇವತಿ ನವೀನ್ , ಕು| ಪ್ರತಿಷ್ಠಾ ಎಸ್.ರೈ, ಕು| ವೈಷ್ಣವಿ ರಾವ್, ಕು|ಜಿತಾಶ್ರೀ ಜಿ.ಡಿ. ಗಮನಸೆಳೆದರು.
ಹಿಮ್ಮೇಳದಲ್ಲಿ ದೇವಿಪ್ರಸಾದ ಆಳ್ವ, ಭಾಸ್ಕರ ಕಟೀಲು, ಜಯರಾಮ ಆಚಾರ್ಯ, ಜಯಪ್ರಕಾಶ ಮರ್ಕಂಜಸಹಕರಿಸಿದರು.
ಅನಂತರ ಜರುಗಿದ ವೀರಮಣಿ ಕಾಳಗದಲ್ಲಿ ವೀರಮಣಿಯಾಗಿ ಜಯಪ್ರಕಾಶ ಪೆರ್ಮುದೆಯವರು ಎಲ್ಲೂ ರಾಮನನ್ನು ವಿರೋಧಿಸದೇ ಕೇವಲ ಹರನನ್ನೇ ಸಮರ್ಥಿಸುತ್ತಾ ಹರನೇ ಬ್ರಹ್ಮಾಂಡ ಎಂದುಸಾಧಿಸುವಲ್ಲಿ ಸಫಲರಾದರು.ಹನುಮಂತನಾಗಿ ದೀಪಕ್ ರಾವ್ ಪೇಜಾವರ ಈಶ್ವರನನ್ನು ವಿರೋಧಿಸದೆ ಕೇವಲ ರಾಮನೇ ಸರ್ವಸ್ವ ಎಂದು ಸಮರ್ಥಿಸುತ್ತಾ ಭರ್ಜರಿ ವಾಗ್ವಾದಗಳಾಗಿ ಜತೆಗೆ ಅತ್ಯುತ್ತಮ ಶಿಸ್ತುಬದ್ಧ ಕುಣಿತದಿಂದಲೂ ಪ್ರಸಂಗ ಕಾವೇರುವಂತೆ ಮಾಡಿದರು.
ಶತ್ರುಘ್ನನಾಗಿ ಸರಪಾಡಿ ಅಶೋಕ ಶೆಟ್ಟಿಯವರು ತಮ್ಮ ಎಂದಿನ ಗತ್ತುಗಾರಿಕೆಯಲ್ಲಿ ರಾಮನ ಸೇವೆಗೆ ಈಗಲಾದರೂ ಅವಕಾಶ ದೊರಕಿತಲ್ಲಾ ಎಂದು ರಾಮಾಯಣದಲ್ಲಿ ಶತ್ರುಘ್ನನ ಪಾತ್ರವನ್ನು ಸೂಚ್ಯವಾಗಿ ಹೇಳಿದರು. ರುಕಾ¾ಂಗನಾಗಿ ವೇಣೂರು ಸದಾಶಿವ ಕುಲಾಲ…, ಶುಭಾಂಗನಾಗಿ ರವಿ ಮುಂಡಾಜೆ ರಂಗದಲ್ಲಿ ಹುಡಿಹಾರಿಸಿದರೂ ಯಾಗದ ಕುದುರೆ ಕಟ್ಟುವಲ್ಲಿವರೆಗೆ ಮಾತ್ರ ಅಭಿನಯಿಸಿ ಶತ್ರುಘ್ನನೊಡನೆ ವಾದ, ಯುದ್ಧ ವಂಚಿತರಾದದ್ದು ಪ್ರೇಕ್ಷಕರಿಗೆ ನಿರಾಶೆಯಾಯಿತು.
ಪುರಭವನದ ಸಮಯದ ಬಿಗಿ ನಿಯಮದಿಂದಾಗಿ ದಮನ ಪುಷ್ಕಳ ವೇಷಹಾಕಿದ್ದರೂ ಪ್ರವೇಶವಾಗದಿದ್ದುದು ಆ ಬಾಲಕಲಾವಿದರಿಗೆ ನಿರಾಶೆಯಾಯ್ತು.ಈಶ್ವರನಾಗಿ ಲಕ್ಷ್ಮಣ ಮರಕಡರವರು ಸಿಕ್ಕಿದ ಸಣ್ಣ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.ಶ್ರೀರಾಮನಾಗಿ ಅನಂತಕೃಷ್ಣ ಅಜ್ಜಕಾನ ಹನೂಮನಿಗೆ ದರುಶನವಿತ್ತು ರಾಮಸೇನೆಯಲ್ಲೂ ಶಿವಸೇನೆಯಲ್ಲೂ ತಾರತಮ್ಯ ಎಸಗದೆ ತಂದಿರುವ ಸಂಜೀವಿನಿಯಿಂದ ಎರಡೂ ಕಡೆಯವರನ್ನು ಬದುಕಿಸು ಎಂದು ಹೇಳಿ ಪ್ರಕರಣ ಸುಖಾಂತ್ಯ ಗೊಳಿಸಿದರು.
ಹಿಮ್ಮೇಳದಲ್ಲಿ ಪ್ರಸಾದ ಬಲಿಪರು, ಗಿರೀಶ್ ರೈ ಯವರು ಅಮೋಘ ನಿರ್ವಹಣೆಯಿಂದ ಯಕ್ಷಾಭಿಮಾನಿಗಳನ್ನು ರೋಮಾಂಚನಗೊಳಿಸಿದರು.ಚಂಡೆಮದ್ಧಳೆಯಲ್ಲಿ ಮುರಾರಿ ಕಡಂಬಳಿತ್ತಾಯ , ದಯಾನಂದ ಮಿಜಾರು, ಚಕ್ರತಾಳದಲ್ಲಿ ಭರತೇಶ ಶೆಟ್ಟಿಗಾರ್ ಸಹಕರಿಸಿದರು. ಒಟ್ಟಂದದಲ್ಲಿ ಆಷಾಡದ ಆಶ್ಲೇಷಾ ಮಳೆಯಬ್ಬರದಲ್ಲಿ ಕೆಲಕಾಲ ನೆನಪಲ್ಲುಳಿಯುವ ಕಾರ್ಯಕ್ರಮ ವಾಗಿ ಮೂಡಿಬಂತು. ಸದಾಶಿವ ನೆಲ್ಲಿಮಾರ್