Advertisement

ಭಾರತಕ್ಕೆ  ಇಂದು ವಿಂಡೀಸ್‌ ಸವಾಲು

03:35 AM Jun 29, 2017 | Team Udayavani |

ಟಾಂಟನ್‌: ಆತಿಥೇಯ ಇಂಗ್ಲೆಂಡ್‌ ತಂಡವನ್ನು ಸೋಲಿಸಿದ ಉತ್ಸಾಹದಲ್ಲಿರುವ ಭಾರತ ತಂಡವು ಐಸಿಸಿ ವನಿತಾ ವಿಶ್ವಕಪ್‌ ಕ್ರಿಕೆಟ್‌ ಕೂಟದ ಗುರುವಾರದ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ತಂಡವನ್ನು ಎದುರಿಸಲಿದ್ದು ಗೆಲ್ಲುವ ವಿಶ್ವಾಸದಲ್ಲಿದೆ. 

Advertisement

ಕೂಟದ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 35 ರನ್ನುಗಳಿಂದ ಸೋಲಿಸಿ ಅಚ್ಚರಿಗೊಳಿಸಿದ ಭಾರತೀಯ ವನಿತೆಯರು ಪಂದ್ಯದ ಪ್ರತಿಯೊಂದು ವಿಭಾಗದಲ್ಲಿ ಗಮನಾರ್ಹ ಪ್ರದ ರ್ಶನ ನೀಡಿ ಗಮನ ಸೆಳೆದಿದ್ದರು. ಇದೇ ವೇಳೆ ಭಾರತದ ಎದುರಾಳಿ  ವೆಸ್ಟ್‌ ಇಂಡೀಸ್‌ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯ ವಿರುದ್ಧ 8 ವಿಕೆಟ್‌ಗಳಿಂದ ಸೋತಿತ್ತು. ಆಸೀಸ್‌ ದಾಳಿಯನ್ನು ಎದುರಿಸಲು ವಿಫ‌ಲವಾದ ವೆಸ್ಟ್‌ಇಂಡೀಸ್‌ 47.5 ಓವರ್‌ಗಳಲ್ಲಿ 204 ರನ್ನಿಗೆ ಆಲೌಟಾಗಿತ್ತು. ಇದಕ್ಕುತ್ತರವಾಗಿ ಆರಂಭಿಕ ಆಟಗಾರ್ತಿಯರಾದ ಬೆಥ್‌ ಮೂನಿ ಮತ್ತು ನಿಕೋಲೆ ಬೋಲ್ಟನ್‌ ಅವರ ಭರ್ಜರಿ ಆಟದಿಂದಾಗಿ ಆಸ್ಟ್ರೇಲಿಯ 38.1 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿ ಜಯಭೇರಿ ಬಾರಿಸಿತ್ತು. ಮೂನಿ 70 ರನ್‌ ಗಳಿಸಿದ್ದರೆ ಶತಕ ಸಿಡಿಸಿದ್ದ ಬೋಲ್ಟನ್‌ 107 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಭಾರತ ಆಲ್‌ರೌಂಡ್‌ ಆಟ
ಇಂಗ್ಲೆಂಡ್‌ ವಿರುದ್ಧ ಭಾರತ ಆಲ್‌ರೌಂಡ್‌ ಪ್ರದರ್ಶನ ನೀಡಿತ್ತು. ಹಾಗಾಗಿ ರೋಚಕ ಗೆಲುವನ್ನು ಒಲಿಸಿಕೊಂಡಿತು. ಅಗ್ರ ಕ್ರಮಾಂಕದ ಮೂವರು ಆಟಗಾರ್ತಿಯರ ಅರ್ಧಶತಕದಿಂದಾಗಿ ಭಾರತ 3 ವಿಕೆಟಿಗೆ 281 ರನ್ನುಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಆಬಳಿಕ ಬಿಗು ದಾಳಿ ಮತ್ತು ಚುರುಕಿನ ಫೀಲ್ಡಿಂಗಿನಿಂದಾಗಿ ಇಂಗ್ಲೆಂಡ್‌ 47.3 ಓವರ್‌ಗಳಲ್ಲಿ 246 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ನಾಲ್ಕು ಆಟಗಾರ್ತಿಯರು ರನೌಟ್‌ ಆಗಿರುವುದು ಭಾರತದ ಉತ್ತಮ ಫೀಲ್ಡಿಂಗ್‌ಗೆ ಸಾಕ್ಷಿಯಾಗಿದೆ.

ಆರಂಭಿಕ ಆಟಗಾರ್ತಿಯರಾದ ಸ್ಮತಿ ಮಂಧನಾ (90), ಪೂನಂ ರಾವತ್‌ (86), ಮಿಥಾಲಿ ರಾಜ್‌ (71) ಮತ್ತು ಹರ್ಮನ್‌ಪ್ರೀತ್‌ ಕೌರ್‌ (ಅಜೇಯ 24) ಅವರ ಉಪಯುಕ್ತ ಆಟದಿಂದಾಗಿ ಭಾರತ ಉತ್ತಮ ಮೊತ್ತ ಪೇರಿಸುವಂತಾಯಿತು. ಬೌಲಿಂಗ್‌ನಲ್ಲಿ ದೀಪ್ತಿ ಶರ್ಮ ಬಿಗು ದಾಳಿ ಸಂಘಟಿಸಿದರು. 47 ರನ್ನಿಗೆ 3 ವಿಕೆಟ್‌ ಕಿತ್ತು ಇಂಗ್ಲೆಂಡಿಗೆ ಹೊಡೆತ ನೀಡಿದರು. ಶಿಖಾ ಪಾಂಡೆ (35ಕ್ಕೆ 2) ಮತ್ತು ಲೆಗ್‌ಸ್ಪಿನ್ನರ್‌ ಪೂನಂ ಯಾದವ್‌ (51ಕ್ಕೆ 1) ಭಾರತದ ಗೆಲುವಿಗಾಗಿ ತಮ್ಮ ಕೊಡುಗೆ ಸಲ್ಲಿಸಿದ್ದರು.

ವಿಂಡೀಸ್‌ ವಿರುದ್ಧದ ಪಂದ್ಯದಲ್ಲೂ ಭಾರತವು ಉತ್ತಮ ನಿರ್ವಹಣೆ ನೀಡಿದಲ್ಲಿ ಗೆಲುವು ಸಾಧಿಸಬಹುದು. ಆದರೆ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ವೆಸ್ಟ್‌ಇಂಡೀಸ್‌ ತೀವ್ರ ಹೋರಾಟ ನಡೆಸುವ ಸಾಧ್ಯತೆಯಿದೆ. ಹಾಗಾಗಿ ಭಾರತ ಎಚ್ಚರಿಕೆಯಿಂದ ಆಡುವುದು ಮುಖ್ಯವಾಗಿದೆ. ನಾಯಕಿ ಮಿಥಾಲಿ ರಾಜ್‌ ಅವರ ಮೊದಲ ಗುರಿ ಭಾರತೀಯ ತಂಡ ಸೆಮಿಫೈನಲಿಗೇರುವುದನ್ನು ಖಚಿತಪಡಿಸುವುದು ಆಗಿದೆ. ಹಾಗಾಗಿ ಭಾರತ ಕೂಡ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುವುದು ಖಚಿತ. ನಾಯಕಿ ರಾಜ್‌ ಪ್ರಚಂಡ ಫಾರ್ಮ್ನಲ್ಲಿರುವುದು ಭಾರತಕ್ಕೆ ಪ್ಲಸ್‌ ಪಾಯಿಂಟ್‌ ಆಗಿದೆ. ಸತತ ಏಳು ಪಂದ್ಯಗಳಲ್ಲಿ ಅರ್ಧಶತಕ ದಾಖಲಿಸಿರುವ ರಾಜ್‌ ವಿಂಡೀಸ್‌ ವಿರುದ್ಧವೂ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸುವ ಸಾಧ್ಯತೆಯಿದೆ.

Advertisement

ಗಾಯದಿಂದ ಮರಳಿದ ಬಳಿಕ ಉತ್ತಮವಾಗಿ ಆಡುತ್ತಿರುವ ಮಂಧನಾ ಇಂಗ್ಲೆಂಡ್‌ ವಿರುದ್ಧ ಕೇವಲ 72 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 90 ರನ್‌ ಹೊಡೆದಿದ್ದರು. ಅವರು ವಿಕೆಟ್‌ ಪಡೆಯದಿದ್ದರೂ ಏಕದಿನ ಇತಿಹಾಸದಲ್ಲಿ ಗರಿಷ್ಠ ವಿಕೆಟ್‌ ಕಿತ್ತಿರುವ ಜೂಲನ್‌ ಗೋಸ್ವಾಮಿ ಭಾರತೀಯ ದಾಳಿಯ ನೇತೃತ್ವ ವಹಿಸಲಿದ್ದಾರೆ.

ಇತ್ತೀಚೆಗಿನ ಫಾರ್ಮ್ ಅನ್ನು ಗಮನಿಸಿದರೆ ಭಾರತವೇ ಬಲಿಷ್ಠ ತಂಡವಾಗಿದೆ. ಕಳೆದ ನಾಲ್ಕು ಏಕದಿನ ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದೆ. ಮೊದಲಿಗೆ ಶ್ರೀಲಂಕಾವನ್ನು ವೈಟ್‌ವಾಶ್‌ ಮೂಲಕ ಉರುಳಿಸಿದ ಭಾರತ ತವರಿನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಗೆಲುವು ಒಲಿಸಿಕೊಂಡಿತ್ತು. ಆಬಳಿಕ ವಿಶ್ವಕಪ್‌ ಅರ್ಹತಾ ಕೂಟ ಮತ್ತು ಚತುಷೊRàಣ ಸರಣಿಯಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಕೆಡಹಿದೆ.

ದಿನದ ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತಂಡವು ಶ್ರೀಲಂಕಾವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡಿಗೆ 9 ವಿಕೆಟ್‌ಗಳಿಂದ ಶರಣಾಗಿದ್ದ ಶ್ರೀಲಂಕಾ ಗೆಲುವಿನ ನಿರೀಕ್ಷೆಯಲ್ಲಿದೆ. ಆಸ್ಟ್ರೇಲಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದೆ.

ಉಭಯ ತಂಡಗಳು
ಭಾರತ: ಮಿಥಾಲಿ ರಾಜ್‌ (ನಾಯಕಿ), ಹರ್ಮನ್‌ಪ್ರೀತ್‌ ಕೌರ್‌, ಸ್ಮತಿ ಮಂಧನಾ, ವೇದಾ ಕೃಷ್ಣಮೂರ್ತಿ, ಮೋನಾ ಮೆಶ್ರಾಮ್‌, ಪೂನಂ ರಾವುತ್‌, ದೀಪ್ತಿ ಶರ್ಮ, ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ, ಏಕ್ತ ಬಿಸ್ತ್, ಸುಷ್ಮಾ ವರ್ಮ, ಮಾನ್ಸಿ ಜೋಶಿ, ರಾಜೇಶ್ವರಿ ಗಾಯಕ್‌ವಾಡ್‌, ಪೂನಂ ಯಾದವ್‌, ನುಝಾತ್‌ ಪರ್ವೀನ್‌.

ವೆಸ್ಟ್‌ಇಂಡೀಸ್‌: ಸ್ಟಫಾನಿ ಟಯ್ಲರ್‌, ಮೆರೀಸ್ಸಾ ಆಗ್ಯುಲೆರಾ, ರೆನೀಸ್‌ ಬಾಯ್ಸ, ಶಮಿಲಿಯಾ ಕಾನೆಲ್‌, ಶಾನೆಲ್‌ ಡಾಲೆ, ದೀಂದ್ರಾ ಡೊಟಿನ್‌, ಆ್ಯಫಿ ಫ್ಲೆಚರ್‌, ಕ್ವಿಯಾನಾ ಜೋಸೆಫ್, ಕಿಸೋನಾ ನೈಟ್‌, ಹೆಲೇ ಮ್ಯಾಥ್ಯೂಸ್‌, ಅನೀಸಾ ಮೊಹಮ್ಮದ್‌, ಚೆದಿಯನ್‌ ನೇಶನ್‌, ಅಕೇರಾ ಪೀಟರ್, ಶಕೆರಾ ಸೆಲ್ಮಾನ್‌, ಫೆಲಿಸಿಯಾ ವಾಲ್ಟರ್.

Advertisement

Udayavani is now on Telegram. Click here to join our channel and stay updated with the latest news.

Next