ಕೊರಟಗೆರೆ: ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆ ಗ್ರಾಮಸ್ಥರು ಹಾಗೂ ಮಹಿಳೆಯರು ಅವಾಚ್ಯ ಶಬ್ದಗಳಿಂದ ನಿಂದಿಸಿರದಲ್ಲದೆ ದಾಳಿಯ ವಿರುದ್ಧ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದವರ ವಿರುದ್ಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಎಲೆರಾಂಪುರ ಗ್ರಾಮದಲ್ಲಿ ಊರಿನ ಮಧ್ಯ ಭಾಗದಲ್ಲಿ ಅದರಲ್ಲೂ ಆಸ್ಪತ್ರೆಯ ಹಿಂಭಾಗ ಇಸ್ಪೀಟ್ ಆಡುತ್ತಿರುವ ಮಾಹಿತಿ ಅರಿತು ಕೋಳಾಲ ಪೊಲೀಸ್ ತಂಡ ದಾಳಿ ನಡೆಸಿ ಆರು ಜನ ಆರೋಪಿಗಳು ಸೇರಿದಂತೆ ಪಣಕ್ಕಿಟ್ಟಿದ್ದ 15000 ಹಣ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಕೆಲವು ಮಹಿಳೆಯರು ಪೊಲೀಸರ ವಿರುದ್ಧ ಹರಿ ಹಾಯ್ದು, ಹಲ್ಲೆಗೆ ಯತ್ನಿಸಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ನಿಖರ ಮಾಹಿತಿ ಮೇರೆಗೆ ಕೋಳಾಲ ಪಿಎಸ್ಐ ಮಹಾಲಕ್ಷ್ಮಮ್ಮ ಅವರ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ 6 ಜನ ಆರೋಪಿಗಳನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಅಲ್ಲಿನ ಮುಖಂಡ ಹನುಮಂತರಾಜು ಹಾಗೂ ರುದ್ರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಅವರ ಹೆಂಡತಿ ಮಕ್ಕಳು ಸೇರಿದಂತೆ ಹಲವು ಮಹಿಳೆಯರು ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆಗೆ ಮುಂದಾದಾಗ ಮೇಲಿನ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ಸಿಪಿಐ ಕೆ ಸುರೇಶ್ ಸ್ಥಳಕ್ಕೆ ಧಾವಿಸಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಅವರ ಮಾರ್ಗದರ್ಶನದಂತೆ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ.ಸುರೇಶ್ ಹಾಗೂ ಪಿಎಸ್ಐ ಮಹಾಲಕ್ಷ್ಮಮ್ಮ ಕೇಸು ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಆರೋಪಿ ಭೀಮೇಶ್ ಹಾಗೂ ಇತರ ಐವರನ್ನು 4 ಬೈಕ್ ಗಳ ಸಮೇತ ವಶಕ್ಕೆ ಪಡೆಯಲಾಗಿದೆ.