Advertisement

ವನಿತೆಯರ ವಿಶ್ವಕಪ್‌ ಮಾನಸಿಕ ತಯಾರಿ ಅಗತ್ಯ

09:55 AM Mar 10, 2020 | sudhir |

5 ಸಲ ವಿಶ್ವಕಪ್‌ ಎತ್ತಿಕೊಂಡಿರುವ ಆಸ್ಟ್ರೇಲಿಯನ್ನರದ್ದು ಚಾಂಪಿಯನ್ನರ ಆಟ. ನಮ್ಮವರು ಲೀಗಿನಲ್ಲಿ ಅಮೋಘವಾಗಿ ಆಡಿದರಾದರೂ ವೈಫ‌ಲ್ಯಗಳನ್ನೆಲ್ಲ ಫೈನಲ್‌ಗೆ ಮೀಸಲಿಟ್ಟಂತೆ ಕಾಣಿಸಿತು. ಫೈನಲ್‌ ಪಂದ್ಯದಲ್ಲಿ ಭಾರತದ ವನಿತೆಯರು ಎಡವಿರಬಹುದು. ಆದರೆ ಒಟ್ಟಾರೆ ನಮ್ಮ ತಂಡದ ಪ್ರದರ್ಶನ ಗಮನಾರ್ಹವಾಗಿತ್ತು.

Advertisement

ವನಿತೆಯರ ಟಿ-20 ವಿಶ್ವಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಪಂದ್ಯದಲ್ಲಿ ಭಾರತದ ವನಿತೆಯರು ಎಡವಿರಬಹುದು. ಆದರೆ ಒಟ್ಟಾರೆಯಾಗಿ ನಮ್ಮ ವನಿತಾ ತಂಡದ ನಿರ್ವಹಣೆ ಚೇತೋಹಾರಿಯಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಕೂಟದ ಉದ್ದಕ್ಕೂ ಅಜೇಯವಾಗಿ ಉಳಿದಿದ್ದ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ತಂಡದ ಮೇಲೆ ಕ್ರಿಕೆಟ್‌ ಪ್ರೇಮಿಗಳು ಭಾರೀ ನಿರೀಕ್ಷೆ ಇರಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಟಿ-20 ಕೂಟದ ಫೈನಲ್‌ ಪ್ರವೇಶಿಸಿದ ತಂಡ ಕಪ್‌ ಗೆದ್ದಿದ್ದರೆ ಮಹಿಳಾ ದಿನದಂದು ದೇಶಕ್ಕೆ ಸ್ಮರಣೀಯ ಕೊಡುಗೆ ನೀಡಿದ ಕೀರ್ತಿಗೆ ಪಾತ್ರವಾಗುತ್ತಿತ್ತು. ಅಲ್ಲದೆ ನಾಯಕಿಯ ಜನ್ಮದಿನದ ಅರ್ಥಪೂರ್ಣ ಉಡುಗೊರೆಯೂ ಆಗುತ್ತಿತ್ತು. ಆದರೆ ಆ ಅದೃಷ್ಟ ತಂಡಕ್ಕೆ ಒದಗಿ ಬರಲಿಲ್ಲ.

ವನಿತೆಯರ ಸೋಲಿಗೆ ಹಲವು ಕಾರಣಗಳಿವೆ. ಮೊದಲಾಗಿ ಟಾಸ್‌ ಗೆಲುವು ಒಲಿಯಲಿಲ್ಲ. ಇದು ಅದೃಷ್ಟಕ್ಕೆ ಬಿಟ್ಟ ವಿಚಾರ. ಆದರೆ ತಂಡ ಫೈನಲ್‌ ಪಂದ್ಯದಲ್ಲಿ ಕೆಲವು ತಪ್ಪುಗಳನ್ನು ಮಾಡಿತು. ಬೆತ್‌ ಮೂನಿ ಮತ್ತು ಅಲಿಸ್ಸ ಹೀಲಿಯ ಕ್ಯಾಚ್‌ಗಳನ್ನು ಆರಂಭದಲ್ಲೇ ಕೈಚೆಲ್ಲಿದ್ದು, ಕಳಪೆ ಕ್ಷೇತ್ರ ರಕ್ಷಣೆ, ಸ್ಪಿನ್ನರ್‌ಗಳ ವೈಫ‌ಲ್ಯ, ಶಫಾಲಿ ವರ್ಮ ಮೇಲೆ ವಿಪರೀತ ಅವಲಂಬನೆ ಹೀಗೆ ವೈಫ‌ಲ್ಯಗಳನ್ನು ಪಟ್ಟಿ ಮಾಡಬಹುದು. ಕೆಲವು ವಿಚಾರಗಳಲ್ಲಿ ಭಾರತದ ಪುರುಷರ ತಂಡದ ಮನಸ್ಥಿತಿಯನ್ನೇ ಮಹಿಳೆಯರ ತಂಡವೂ ಹೊಂದಿರುವುದು ದುರದೃಷ್ಟಕರ. ಇಡೀ ತಂಡ ಒಬ್ಬ ಆಟಗಾರನನ್ನು ಅವಲಂಬಿಸಿರುವುದು, ತಂಡದಲ್ಲಿ ಬಿ ಪ್ಲಾನ್‌ ಇಲ್ಲದೆ ಇರುವುದು, ಫೈನಲ್‌ನಂಥ ಮಹತ್ವದ ಕೂಟಕ್ಕೆ ಮಾನಸಿಕ ತಯಾರಿ ಮಾಡಿಕೊಳ್ಳದೆ
ಇರುವುದು, ಎದುರಾಳಿಗಳ ಆಟ ನೋಡಿ ನರ್ವಸ್‌ ಆಗುವುದು ಇವೆಲ್ಲವನ್ನೂ ಪುರಷ ತಂಡವೂ ಅನೇಕ ಸಲ ಅನುಭವಿಸಿದೆ.

ವನಿತೆಯರ ತಂಡ ಪೂರ್ತಿಯಾಗಿ ಸ್ಪಿನ್ನರ್‌ಗಳನ್ನು ಮತ್ತು ಶಫಾಲಿ ವರ್ಮ ಅವರ ಬ್ಯಾಟಿಂಗ್‌ ಫಾರ್ಮ್ ಅನ್ನು ಮಾತ್ರ ಅವಲಂಬಿಸಿತ್ತು. ಈ ದೌರ್ಬಲ್ಯವನ್ನು ಚೆನ್ನಾಗಿ ತಿಳಿದುಕೊಂಡ ಆಸ್ಟ್ರೇಲಿಯದ ವನಿತೆಯರು ಸ್ಪಿನ್‌ ದಾಳಿಯನ್ನು ಎದುರಿಸುವ ತಂತ್ರಗಾರಿಕೆ ಸಿದ್ಧವಾಗಿಟ್ಟಿದ್ದರು. ಅಂತೆಯೇ ಶಫಾಲಿ ವರ್ಮ ಅವರನ್ನು ಬೇಗನೆ ಪೆವಿಲಿಯನ್‌ಗಟ್ಟುವ ಅವರ ಯೋಜನೆಯೂ ಸಮರ್ಪಕವಾಗಿ ಕಾರ್ಯಗತಗೊಂಡಿತು. ಆದರೆ ಭಾರತದ ವನಿತೆಯರು ಇಂಥ ಯಾವ ಸಿದ್ಧತೆಯನ್ನು ಮಾಡಿಟ್ಟುಕೊಂಡಿರಲಿಲ್ಲ. ಸ್ಪಿನ್‌ ವಿಫ‌ಲಗೊಂಡರೆ ಪರ್ಯಾಯ ಯೋಜನೆ ಅವರ ಬಳಿ ಇರಲಿಲ್ಲ. ಬ್ಯಾಟಿಂಗ್‌ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಯಾರೂ ಮಾನಸಿಕ ತಯಾರಿ ಮಾಡಿಕೊಂಡಿರಲಿಲ್ಲ.ಐದನೇ ಸಲ ವಿಶ್ವಕಪ್‌ ಎತ್ತಿಕೊಂಡಿರುವ ಆಸ್ಟ್ರೇಲಿಯನ್ನರದ್ದು ನಿಜವಾದ ಅರ್ಥದಲ್ಲಿ ಚಾಂಪಿಯನ್ನರ ಆಟ.

ನಮ್ಮವರು ಲೀಗಿನಲ್ಲಿ ಅಮೋಘವಾಗಿ ಆಡಿ ವೈಫ‌ಲ್ಯಗಳನ್ನೆಲ್ಲ ಫೈನಲ್‌ಗೆ ಮೀಸಲಿಟ್ಟಂತೆ ಕಾಣಿಸಿತು. ಕಾಕತಾಳೀಯ ಎಂದರೆ 2003ರ ಪುರುಷರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೂ ಇಂದಿನ ಫೈನಲ್‌ ಪಂದ್ಯಕ್ಕೂ ಇರುವ ಕೆಲವು ಹೋಲಿಕೆಗಳು. ಗಂಗೂಲಿ ನೇತೃತ್ವದ ಅಂದಿನ ಭಾರತ ತಂಡವೂ ಆಸ್ಟ್ರೇಲಿಯನ್ನರ ಭಾರೀ ಮೊತ್ತವನ್ನು ನೋಡಿಯೇ ನರ್ವಸ್‌ ಆಗಿತ್ತು. ಇಂದು ವನಿತೆಯರ ಕೂಡ ದೊಡ್ಡ ಮೊತ್ತ ಕಂಡು ಬೆಚ್ಚಿಬಿದ್ದು ಹೋರಾಟವನ್ನೇ ಮಾಡದೆ ಸೋಲೊಪ್ಪಿಕೊಂಡರು. ನರ್ವಸ್‌ ಸಿಂಡ್ರೋಮ್‌ ಎನ್ನುವುದು ಆಗಿನಿಂದಲೂ ತಂಡವನ್ನು ಕಾಡುತ್ತಾ ಬಂದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದನ್ನು ನಿವಾರಿಸುವಲ್ಲಿ ಕೋಚ್‌ಗಳ ಪಾತ್ರ ಮುಖ್ಯವಾಗುತ್ತದೆ. ಯಾವುದೇ ಸಂದರ್ಭದಲ್ಲೂ ತಾಳ್ಮೆಯಿಂದ ಆಡುವ ಕಲೆಯನ್ನು ಕಲಿತುಕೊಂಡರೆ ಭಾರತದ ವನಿತೆಯರೂ ವಿಶ್ವಕಪ್‌ ಎತ್ತುವ ಅರ್ಹತೆಯನ್ನು ಹೊಂದಿದ್ದಾರೆ. ಈಗ ವನಿತೆಯರ ಕ್ರಿಕೆಟ್‌ ಕೂಟ ಜನರನ್ನು ಆಕರ್ಷಿಸುವ ಆಟವಾಗಿ ಬೆಳೆದಿದೆ ಎನ್ನುವುದಕ್ಕೆ ಮೆಲ್ಬೋರ್ನ್ನಲ್ಲಿ ಇಂದು ನಡೆದ ಫೈನಲ್‌ ಪಂದ್ಯಕ್ಕೆ 86,000ಕ್ಕೂ ಮಿಕ್ಕಿ ಪ್ರೇಕ್ಷಕರಿದ್ದುದೇ ಸಾಕ್ಷಿ.

Advertisement

ಅಂತೆಯೇ ಮಾಧ್ಯಮದ ಪುಟಗಳಲ್ಲೂ ವನಿತೆಯರ ಕ್ರಿಕೆಟಿಗೆ ಈಗ ಹೆಚ್ಚು ಜಾಗ ಸಿಗುತ್ತಿರುವುದು ಒಂದು ಗುಣಾತ್ಮಕವಾದ ಬೆಳವಣಿಗೆ. ವನಿತೆಯರ ಕ್ರಿಕೆಟನ್ನು ತಾತ್ಸಾರದ ದೃಷ್ಟಿಯಿಂದ ನೋಡುವ ಕಾಲವೊಂದಿತ್ತು. ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್‌ ಒಂದು ಸಂದರ್ಭದಲ್ಲಿ ಆಟವನ್ನು ನೋಡುವುದು ಬೇಡ ಕನಿಷ್ಠ ನನ್ನ ಕೆನ್ನೆಯ ಗುಳಿಯನ್ನು ನೋಡಲಾದರೂ ಪ್ರೇಕ್ಷಕರು ಬರುವುದಿಲ್ಲ ಎಂದು ವಿಷಾದದಿಂದ ನುಡಿದಿದ್ದರು.

ಪರಿಸ್ಥಿತಿ ನಿಧಾನವಾಗಿಯಾದರೂ ಬದಲಾಗುತ್ತಿರುವುದು ಕ್ರೀಡೆಗೆ ಆಗಿರುವ ಲಾಭ. ಆ ಮಟ್ಟದ ಸಾಧನೆಯನ್ನು ಮಾಡಿರುವ ಎಲ್ಲ ವನಿತಾ ತಂಡಗಳೂ ಅಭಿನಂದನೆಗೆ ಅರ್ಹವಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next