ಪುಣೆ: ಸ್ಮೃತಿ ಮಂಧನಾ ನಾಯಕತ್ವದ ಟ್ರೈಯಲ್ ಬ್ಲೇಜರ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸೋಲನುಭವಿಸಿದರೂ ವೆಲಾಸಿಟಿ ತಂಡ ಮಹಿಳಾ ಟಿ20 ಚಾಲೆಂಜ್ ಕೂಟದ ಫೈನಲ್ ತಲುಪಿದೆ. ಕಳಪೆ ರನ್ ರೇಟ್ ಕಾರಣದಿಂದ ಮಂಧನಾ ಪಡೆ ಕೂಟದಿಂದ ಹೊರಬಿದ್ದಿದೆ.
ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬಾಟಿಂಗ್ ಮಾಡಿದ ಟ್ರೈಯಲ್ ಬ್ಲೇಜರ್ಸ್ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದರೆ, ವೆಲಾಸಿಟಿ ತಂಡ 9 ವಿಕೆಟ್ ಕಳೆದುಕೊಂಡು 174 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಫೈನಲ್ ತಲುಪಬೇಕಾದರೆ ಟ್ರೈಯಲ್ ಬ್ಲೇಜರ್ಸ್ ತಂಡವು ವೆಲಾಸಿಟಿ ತಂಡವನ್ನು 158 ರನ್ ಗೆ ನಿಯಂತ್ರಿಸಬೇಕಿತ್ತು. ಆದರೆ ದೀಪ್ತಿ ಶರ್ಮಾ ನಾಯಕತ್ವದ ವೆಲಾಸಿಟಿ 174 ರನ್ ಗಳಿಸಿ ರನ್ ರೇಟ್ ಉತ್ತಮ ಪಡಿಸಿಕೊಂಡಿತು. ಹೀಗಾಗಿ ಪಂದ್ಯ ಗೆದ್ದರೂ ಮಂಧನಾ ಪಡೆಗೆ ಫೈನಲ್ ಟಿಕೆಟ್ ದೊರಕಲಿಲ್ಲ.
ಇದನ್ನೂ ಓದಿ:2 ವರ್ಷಗಳಲ್ಲೇ ಪ್ರತ್ಯಕ್ಷವಾಗಲಿದ್ದಾನೆ “ರಸ್ತೆಗಳ ರಾಜ’ : ಅಂಬಾಸಿಡರ್ 2.0
ಮೊದಲು ಬ್ಯಾಟಿಂಗ್ ಮಾಡಿದ ಟ್ರೈಯಲ್ ಬ್ಲೇಜರ್ಸ್ ತಂಡಕ್ಕೆ ಮೇಘನಾ ಮತ್ತು ಜೆಮಿಮಾ ನೆರವಾದರು. ಮೇಘನಾ 73 ರನ್ ಗಳಿಸಿದರೆ, ಜೆಮಿಮಾ 66 ರನ್ ಕಲೆಹಾಕಿದರು. ಹೀಲಿ ಮ್ಯಾಥ್ಯುಸ್ 27 ರನ್ ಮತ್ತು ಡಂಕ್ಲಿ 8 ಎಸೆತದಲ್ಲಿ 19 ರನ್ ಗಳಿಸಿದರು.
ವೆಲಾಸಿಟಿ ಪರವಾಗಿ ಕಿರಣ್ ನಾವ್ಗಿರೆ ಕೇವಲ 34 ಎಸೆತಗಳಲ್ಲಿ 69 ರನ್ ಚಚ್ಚಿದರು. ಶಫಾಲಿ ವರ್ಮಾ 29 ರನ್ ಗಳಿಸಿದರು.
ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ನಾಯತ್ವದ ಸೂಪರ್ ನೋವಾ ತಂಡವನ್ನು ವೆಲಾಸಿಟಿ ಎದುರಿಸಲಿದೆ.