ಹೊಸದಿಲ್ಲಿ:ಇಂಗ್ಲೆಂಡಿನ ನಾಯಕಿ ಹೀತರ್ ನೈಟ್, ವಿಶ್ವದ ನಂಬರ್ ವನ್ ಬೌಲರ್ ಸೋಫಿ ಎಕ್ಲೇಸ್ಟೋನ್ ಮತ್ತು ಆಸ್ಟ್ರೇಲಿಯದ ಲೆಗ್‌ಸ್ಪಿನ್ನರ್ ಅಲನಾ ಕಿಂಗ್ ಸೇರಿದಂತೆ 12 ಮಂದಿ ವಿದೇಶಿ ಆಟಗಾರ್ತಿಯರು ಮೇ 23ರಿಂದ ಪುಣೆಯಲ್ಲಿ ಆರಂಭವಾಗುವ ವನಿತೆಯರ ಟಿ20 ಚಾಲೆಂಜ್ ಕೂಟದಲ್ಲಿ ಭಾಗವಹಿಸಲಿದ್ದಾರೆ.
ನ್ಯೂಜಿಲ್ಯಾಂಡಿನಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಅಲನಾ ಕಿಂಗ್ ಅವರು ಈ ಪ್ರದರ್ಶನ ಕೂಟದಲ್ಲಿ ಕಾಣಿಸಿಕೊಳ್ಳಲಿರುವ ಆಸ್ಟ್ರೇಲಿಯದ ಏಕೈಕ ಆಟಗಾರ್ತಿ ಆಗಿದ್ದಾರೆ. ಈ ಕೂಟದಲ್ಲಿ ಮೂರು ತಂಡಗಳು ಇದ್ದು ನಾಲ್ಕು ಪಂದ್ಯಗಳು ನಡೆಯಲಿವೆ.
ನೈಟ್ ಎಕ್ಲೇಸ್ಟೋನ್ ಅವರಲ್ಲದೇ ಸೋಫಿಯಾ ಡಂಕ್ಲೆ ಮತ್ತು ಡ್ಯಾನಿ ವೈಟ್ ಅವರು ಈ ಸ್ಪರ್ಧೆಗೆ ಸಹಿ ಹಾಕಿದ ಇತರ ಇಂಗ್ಲೆಂಡಿನ ಆಟಗಾರ್ತಿಯರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿ ಲಾರಾ ವೊಲ್ವಾಡ್‌ಮತ್ತು ಮಾರಿಝಾನೆ ಕ್ಯಾಪ್ ಅವರ ಸಹಿತ ವೆಸ್ಟ್‌ಇಂಡೀಸ್‌ನ ದೀಂದ್ರ ಡೊಟಿನ್ ಮತ್ತು ಹೇಲೆ ಮ್ಯಾಥೂ ಭಾಗವಹಿಸಲಿದ್ದಾರೆ.
ಭಾರತೀಯ ಆಟಗಾರ್ತಿಯರನ್ನು ಶೀಘ್ರವೇ ಆಯ್ಕೆ ಮಾಡಲಾಗುತ್ತದೆ. ಇತ್ತೀಚೆಗೆ ಮುಗಿದ ದೇಶೀಯ ಟಿ20 ಕೂಟದಲ್ಲಿ ನೀಡಿದ ನಿರ್ವಹಣೆಯ ಆಧಾರದಲ್ಲಿ ಆಟಗಾರ್ತಿಯರನ್ನು ಆಯ್ಕೆ ಮಾಡಲಾಗುತ್ತದೆ.