Advertisement

ಕಷ್ಟಕಾಲದಲ್ಲಿ ಸ್ತ್ರೀಧನ

06:00 AM Jul 06, 2018 | |

ಲೀಲಕ್ಕನ ಪತಿ ತಲೆಗೆ ಕೈ ಹೊತ್ತು ಕೂತಿದ್ದರು. ಪತ್ನಿ ಕಾರಣ ಕೇಳಿದರೆ ಉತ್ತರವಿಲ್ಲ ; ಊಟಕ್ಕೆ ಕರೆದರೆ ಅಲ್ಲಾಡಲಿಲ್ಲ. ಸಿಟ್ಟು ಮಾಡಿದರೆ ದಯನೀಯವಾಗಿ ಮೂಕನೋಟ ಹಾಯಿಸಿದರಷ್ಟೆ. ಸತತ ಒತ್ತಾಯದ ನಂತರ ನಿಜ ತಿಳಿಯಿತು. ಸತತ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಅತ್ತೆಯನ್ನು ಮಾರನೆ ದಿನ ಡಿಸ್‌ಚಾರ್ಜು ಮಾಡುವುದಾಗಿ ಡಾಕ್ಟರು ಹೇಳಿದ್ದರು. ವಯಸ್ಸಿನ ಕಾರಣದಿಂದ ಆಕೆಗೆ ಆರೋಗ್ಯ ಮರಳುವ ಸೂಚನೆಯಿಲ್ಲ. ಮನೆಗೆ ಕರಕೊಂಡು ಹೋಗಿ ಆರೈಕೆ ಮಾಡಿದರೆ ಸಾಕು ಎಂಬ ಅಭಿಪ್ರಾಯ. ಅದಾಗಲೇ ಆಸ್ಪತ್ರೆ ಬಿಲ್ ವಿಪರೀತವಾಗಿ ಏರಿತ್ತು. ಆ ಟೆಸ್ಟ್‌ ಈ ಟೆಸ್ಟ್‌ ಎಂದು ಹಲವು ಬಗೆಯ ಪರೀಕ್ಷೆಗೆ ಒಳಪಡಿಸಿದ್ದರ ಚಾರ್ಜ್‌. ಮಾರನೆಯ ದಿನ ಡಿಸ್‌ಚಾರ್ಜ್‌ ಮಾಡಿ ಕರಕೊಂಡು ಹೋಗುತ್ತೇನೆ ಎಂದು ಒಪ್ಪಿ ಬಂದಿದ್ದರು. ದೊಡ್ಡ ಆಸ್ಪತ್ರೆಯ ಬಿಲ್ಲೂ ಹಾಗೆಯೇ ಇತ್ತು. ಅರ್ಧಾಂಶ ಮೊತ್ತ ಕೈಲಿತ್ತು. ಉಳಿದಿದ್ದರ ವ್ಯವಸ್ಥೆ ಅವರ ತಲೆ ಕೆಡಿಸಿತ್ತು.

Advertisement

ಅಷ್ಟೇ ತಾನೇ, ಲೀಲಕ್ಕ ಒಳ ಹೋಗಿ ಪುಟ್ಟ ಬಾಕ್ಸ್‌ ತಂದು ಗಂಡನ ಕೈಲಿಟ್ಟರು. ತೆರೆದಾಗ ಸಣ್ಣಪುಟ್ಟ ಒಡವೆಗಳು, ಗೋಲ್ಡ್ ಕಾಯಿನ್‌, ಮಕ್ಕಳು ಎಳೆಯವರಿದ್ದಾಗಿನ ಒಡವೆ, ಲೀಲಕ್ಕನದೇ ಬಳಕೆಯಿಲ್ಲದ ಆಭರಣಗಳು ಫ‌ಳಗುಡುತ್ತಿತ್ತು. “ನಮ್ಮ  ಖಾಯಂನ ಜ್ಯುವೆಲ್ಲರಿಗೆ ಹೋಗಿ ನಗದಾಗಿ ಬದಲಾಯಿಸಿಕೊಳ್ಳಿ. ಆಪತ್ಕಾಲಕ್ಕೆ ಅಂತಲೇ ಇಟ್ಟಿದ್ದು. ಆಸ್ಪತ್ರೆ ಬಿಲ್ ಗೆ ಸಾಕಾಗುತ್ತದೆ. ನಿಮ್ಮ ಕೈಲಿರುವ ಹಣ ಹಾಗೆ ಇರಲಿ’ ಎಂದರು.

ಅದ್ಯಾಕೋ ಅವರ ಕಣ್ಣು ಹನಿಗೂಡಿತು. ಮಡದಿ ಸಂಸಾರಕ್ಕೆ ಬಂದಾಗಿನಿಂದ ಮನೆ ಖರ್ಚಿನಲ್ಲಿ ಉಳಿತಾಯ ಮಾಡಿದ ದುಡ್ಡು ಅದು. ಚಿನ್ನ ತವರಿನವರು ನೀಡಿದ ಸ್ತ್ರೀಧನ. ಹಣ ಹಾಗೆ ಇದ್ದರೆ ಖರ್ಚಾಗುತ್ತದೆ ಎಂದು ಗೋಲ್ಡ… ಕಾಯಿನ್‌ ಖರೀದಿಸಿ ಇಟ್ಟಿದ್ದು, ಮಕ್ಕಳ ಒಡವೆಗಳು, ಅವಳದೇ ತುಂಡಾದ, ಸವೆದ ಆಭರಣಗಳು ಅದರಲ್ಲಿತ್ತು. ಆ ತನಕ ಹೊತ್ತ ಭಾರವೆಲ್ಲ ಇಳಿದು ಹಗುರಾಯಿತು ಮನಸ್ಸು. ಮಡದಿಯ ಕಾಳಜಿಗೆ ಮನಸ್ಸು ತುಂಬಿತು. ಹಿರಿಯಾಕೆ ಆಸ್ಪತ್ರೆಯಿಂದ ಮನೆಗೆ ಬರಲು ಏನೇನೂ ತೊಂದರೆ ಆಗಲಿಲ್ಲ.

ಲೀಲಕ್ಕ ಮಾತ್ರವಲ್ಲ, ಅವರಂತೆ ಹೆಚ್ಚಿನ ಮಹಿಳೆಯರೂ ಆಪದ್ಧನ ಎಂದು ಅಷ್ಟಿಷ್ಟು ಹಣ ಶೇಖರಿಸಿ ಇಟ್ಟೇ ಇಡುತ್ತಾರೆ. ಮೊತ್ತ ದೊಡ್ಡದಿರಲಿ; ಸಣ್ಣದೇ ಆಗಲಿ. ಆಪತ್ಕಾಲದ ಬಂಧುವಾಗಿ  ನೆರವಾಗುತ್ತದೆ.  ಮಗನಿಗೆ ಉನ್ನತ ವಿದ್ಯಾಭ್ಯಾಸಕ್ಕೆ  ಸೀಟು ದೊರೆತೂ  ಆರ್ಥಿಕ ಅನನುಕೂಲತೆ, ಲೋನ್‌ ತೆಗೆಯುವ ಆತಂಕ, ಸಾಲವೆನ್ನುವುದು ಶೂಲ ಎಂಬ ಭೀತಿ, ಅವನ ಹಿಂದೆಯೇ ಇರುವ ತಮ್ಮ, ತಂಗಿಯ ವಿದ್ಯಾಭ್ಯಾಸದ ಖರ್ಚು ಇತ್ಯಾದಿಯಿಂದ ತಂದೆ ಹಿಂಜರಿದರೆ ಅದರಿಂದಾಗಿ ಬೆಳೆದ ಮಗ ಅಸಹಾಯಕತೆಯಿಂದ ಕಣ್ಣೀರಿಡುವ ಅವಸ್ಥೆ.  ತಾಯಿ ತನ್ನ ತವರಿನ ಬಳುವಳಿಯಾಗಿ  ಇದ್ದ ಅಲ್ಪ ಭೂಮಿಯನ್ನು ಮಾರಾಟಕ್ಕಿಟ್ಟು ವಿದ್ಯೆ ಕೊಡಿಸಿದ್ದರು. ಅವನೂ ಅಮ್ಮನ ನಿರೀಕ್ಷೆ ಹುಸಿಯಾಗದಂತೆ ಕೋರ್ಸ್‌ ಮುಗಿಸಿ ಅದರ  ಮೊತ್ತ ಹಿಂದಿರುಗಿಸಿದ್ದನು. ಎಂಥ ಕಠಿಣ ಸ್ಥಿತಿಯಲ್ಲೂ ಮುಟ್ಟದೆ ಇಟ್ಟ ನೆಲ ಆಪದ್ಧನವಾಗಿ ವರವಾಗಿತ್ತು. ಸಂಸಾರ ಎಂದ ಮೇಲೆ ಯಾವ ಹೊತ್ತಿಗೆ  ಏನೂ ಆಗಬಹುದು. ಅದು ಒಳಿತೇ ಅಥವಾ ತೊಂದರೆಯೋ ಇರಬಹುದು ಎಂಬ ಸುಪ್ತ ಅರಿವು ಮಹಿಳೆಯರ ಮನಸ್ಸಿನಲ್ಲಿ  ಸದಾ ಇದ್ದೇ ಇರುತ್ತದೆ. ಲಗ್ನವಾಗಿ ವೈವಾಹಿಕ  ಜೀವನಕ್ಕೆ ಬರುವಾಗ ಸ್ವಂತದ್ದಾಗಿರುವ ಚಿನ್ನಾಭರಣಗಳು ಸ್ತ್ರೀಯ ಧನ. ಸಾಮಾನ್ಯವಾಗಿ ಅದನ್ನು   ಪತಿಯ ಮನೆಯವರು ಮುಟ್ಟಹೋಗುವುದಿಲ್ಲ.  ಅದು ಆಕೆಯ     ಸೊತ್ತು. ತೀರಾ ಕಷ್ಟಕಾಲದಲ್ಲಿ ಆಕೆಯ ನೆರವಿಗಾಗಿ ಆ ಸ್ತ್ರೀ ಧನ. ಕೆಲ ಸಿರಿವಂತ ತಾಯ್ತಂದೆ ಮಗಳ ಹೆಸರಿಗೆ ಭೂಮಿ, ಮನೆ ಕೊಡಬಹುದು. ವೈವಾಹಿಕ ಜೀವನದಲ್ಲಿ ಆ ಉಡುಗೊರೆಯ ನೆರವು ಯಾವ ಗಳಿಗೆಯಲ್ಲೂ ಬೇಕಾಗಬಹುದು.

ಹಿಂದೆ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದ ಹಂತದಲ್ಲಿ ವಿವಾಹ ಸಂಬಂಧ ಹೊಂದಿಬಂದರೆ ಹೆತ್ತವರು ಅದಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದುದುಂಟು. ಮಗಳ ಜವಾಬ್ದಾರಿ ಮುಗಿಸಿಕೊಳ್ಳುವ ತರಾತುರಿಯೂ ಇರಬಹುದು.ಇವತ್ತಿಗೆ ಅದು ತಿರುಗಿ ಬಿದ್ದಿದೆ. ಲಗ್ನಕ್ಕಿಂತ ಮುಖ್ಯವಾಗಿ ವಿದ್ಯಾಭ್ಯಾಸ ಎನ್ನುವ ಅರಿವು ತಾಯ್ತಂದೆಯರಿಗಿದೆ.  ಹೆಣ್ಣುಮಗಳು ಆರ್ಥಿಕ ಸ್ವಾತಂತ್ರ್ಯ ಹೊಂದಿರಬೇಕು. ಗಂಡನೆದುರು ಕೈಚಾಚಿ ನಿಲ್ಲುವ ಪ್ರಸಕ್ತಿ ಬರಬಾರದು. ಈ ಅರಿವು ಆರ್ಥಿಕ ಸ್ವಾವಲಂಬನೆಯ ಮೂಲಕ ಸ್ತ್ರೀಧನ  ಅತ್ಯಾವಶ್ಯಕ ಅಂತ ಬೊಟ್ಟುಮಾಡುತ್ತಿದೆ. ಹೆತ್ತವರು ಲಗ್ನಕಾಲದಲ್ಲಿ ಕೊಡುವ ನೆಲ, ಬಂಗಾರ, ಹಣ ಅಲ್ಪಸಮಯಕ್ಕೆ ಉಳಿಯಬಹುದು; ಬದಲಿಗೆ ಆಕೆಯೇ ಸಂಪಾದಿಸಿದರೆ ಕೌಟುಂಬಿಕ ಜವಾಬ್ದಾರಿಗಳಲ್ಲಿ ಗಂಡನ ಜೊತೆಗೆ ಹೆಗಲಿಗೆ ಹೆಗಲು ಕೊಡಲು ಸಾಧ್ಯ.  ದುಬಾರಿ ವೆಚ್ಚದ ದಿನಗಳಲ್ಲಿ  ಸ್ವಂತ ಸಂಪಾದನೆಯ ದುಡ್ಡು ಯಾವ ಕ್ಷಣದಲ್ಲೂ ಮನೆಯ ಆವಶ್ಯಕತೆ, ಏರುತ್ತಿರುವ ಖರ್ಚು, ವೆಚ್ಚ, ಮಕ್ಕಳ ವಿದ್ಯೆ, ಕುಟುಂಬದ ಉಸ್ತುವಾರಿ, ಆರೋಗ್ಯ, ಆಪತ್ಕಾಲದ  ಆಪತ್ತುಗಳ ನಿಭಾವಣೆ ಯಾವುದುಂಟು; ಯಾವುದಿಲ್ಲವೆನ್ನುವಂತಿಲ್ಲ.

Advertisement

ಹೆತ್ತವರು ಮಗಳಿಗಾಗಿ ಕೊಡುತ್ತಿದ್ದ ಸ್ತ್ರೀಧನ ಬಂಗಾರ, ಭೂಮಿ, ಮನೆ, ಇಂಥ ದೀರ್ಘ‌ಕಾಲ ಉಳಿಯುವ ವಸ್ತು, ಒಡವೆಗಳಾಗಿ ಅದು ಆಕೆಯದೇ ಆದ ಅನ್ಯರಿಗೆ ಹಕ್ಕಿಲ್ಲದ ಆಪದ್ಧನ. ಇಂದಿನ ಮಹಿಳೆಯರು ಹಲವಾರು ವಿದ್ಯೆ, ಅವಕಾಶ ಇದ್ದರೂ ಉದ್ಯೋಗರಂಗಕ್ಕೆ  ಕಾಲಿಡಲಾಗದೆ ಇದ್ದರೂ ಸ್ತ್ರೀಧನವನ್ನು ಜೋಪಾನವಾಗಿರಿಸುತ್ತಾರೆ. ಪತಿ, ಆತನ ಕುಟುಂಬ ಅದೆಷ್ಟೇ  ಐಶ್ವರ್ಯದ ಹೊರೆ ಹೊರಿಸಿದರೂ ತವರಿನ  ಉಡುಗೊರೆಯ ತೂಕ ಜಾಸ್ತಿ. ಪ್ರೋತ್ಸಾಹ, ಬುದ್ಧಿಮತ್ತೆ, ಅವಕಾಶ ಇದ್ದ ಮಹಿಳೆಯರು ತಮ್ಮ ನೌಕರಿ, ಸ್ವೂದ್ಯೋಗದ ಮೂಲಕ ತಮ್ಮ ತಮ್ಮ ಮನೆಯ, ಅದರ ಸದಸ್ಯರ ಅಭಿವೃದ್ಧಿಗೆ, ಅನಿರೀಕ್ಷಿತ ಖರ್ಚು-ವೆಚ್ಚಗಳಿಗೆ, ವಿದ್ಯೆ, ಉದ್ಯೋಗದ ಮೂಲಕ ಶಾಶ್ವತ ಸ್ತ್ರೀಧನ ಅಥವಾ ಆಪದ್ಧನವನ್ನು ಉಳಿಸಿ ಬೆಳೆಸಿ ಭುಜಕ್ಕೆ ಭುಜ ಕೊಟ್ಟು ಆತ್ಮವಿಶ್ವಾಸದ ನಗೆ ಬೀರುತ್ತಾರೆ.

ಕೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next