ಬಾಗಲಕೋಟೆ: ರೈತರ ಸಂಭ್ರಮದ ಹಬ್ಬ ಎಂದೇ ಕರೆಸಿಕೊಳ್ಳುವ ಎಳ್ಳಮಾವಾಸ್ಯೆ ನಿಮಿತ್ತ ಜಿಲ್ಲೆಯ ಬೀಳಗಿ ತಾಲೂಕಿನ ಕೃಷ್ಣೆ-ಘಟಪ್ರಭೆಯ ಸಂಗಮದ ತಾಣ ಚಿಕ್ಕಸಂಗಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಹಿರಿಯ ಅಧಿಕಾರಿಗಳ ಪತ್ನಿಯರು ಹಾಗೂ ಸಚಿವ ಆರ್.ಬಿ. ತಿಮ್ಮಾಪುರ ಅವರ ಪತ್ನಿ, ಸಹೋದರಿ ಸಹಿತ ಹಲವರು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿ, ದೇಶೀಯ ಸಂಸ್ಕೃತಿ ಇಮ್ಮಡಿಗೊಳಿಸಿದರು.
Advertisement
ಮುಧೋಳದ ಸಪ್ತಸ್ವರ ಸಂಗೀತ ಹಾಗೂ ನೃತ್ಯ ಸಾಂಸ್ಕೃತಿಕ ಸಂಸ್ಥೆಯ ಅಡಿಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಚಿಕ್ಕಸಂಗಮದಲ್ಲಿ ಎಳ್ಳಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಇಳಕಲ್ಲ ಸೀರೆ, ಮೂಗುತಿ, ಕೈತುಂಬ ಬಳೆ, ತಲೆಗೆ ಹೂವು ಮುಡಿದ ನಾರಿಮಣಿಗಳು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಚಿಕ್ಕ ಸಂಗಮನಾಥನಿಗೆ ಪೂಜೆ ಸಲ್ಲಿಸಿದ ಮಹಿಳೆಯರು ದಂಡಿಹಾರ ಹಾಕಿ ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಟ್ಟರು. ರೈತ ಕುಟುಂಬದಲ್ಲಿ ನಡೆಯುವಂತೆ ಬೀಸುವ ಕಲ್ಲಿನಿಂದ ಧಾನ್ಯ ಬೀಸಿದ ಜಿಲ್ಲಾಧಿಕಾರಿ ಜಾನಕಿ, ಎಸಿ ಶ್ವೇತಾ ಅವರು, ಮಹಿಳೆಯರಿಗೆ ಹರುಷ ತಂದರು.
Related Articles
Advertisement
ಪೂಜಾ ಕೈಂಕರ್ಯದ ಬಳಿಕ ಉತ್ತರ ಕರ್ನಾಟಕ ಶೈಲಿಯ ಪಕ್ಕಾ ಜವಾರಿ ಊಟವಾದ ಖಡಕ್ ರೊಟ್ಟಿ, ಬದನೆಕಾಯಿ, ಹೆಸರು ಕಾಳು, ಶೇಂಗಾ ಚಟ್ನಿ, ಕೆನೆ ಮೊಸರು, ಶೇಂಗಾ ಹೋಳಿಗೆ, ತುಪ್ಪ, ಉಪ್ಪಿನಕಾಯಿ, ಅನ್ನ ಸಾಂಬರ ಸವಿದರು. ಆಧುನಿಕತೆ ಅಬ್ಬರದಲ್ಲಿ ಮರೆಯಾಗುತ್ತಿರುವ ದೇಶಿ ಹಬ್ಬ ಆಚರಣೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ ಆರು ವರ್ಷಗಳಿಂದ, ಮುಧೋಳದ ಸಪ್ತಸ್ವರ ಸಂಸ್ಥೆಯವರು ಸಂಕ್ರಾಂತಿಗೂ ಮುನ್ನ ಈ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಈ ಬಾರಿ ವಿಶೇಷ ಎನ್ನುವಂತೆ ಮಹಿಳಾ ಅಧಿಕಾರಿಗಳು ಕೆಲಸದ ಒತ್ತಡ ಬದಿಗಿಟ್ಟು, ಇಡೀ ದಿನ ಹಬ್ಬ ಆಚರಿಸಿ, ಸೇರಿದ್ದ ಮಹಿಳೆಯರ ಉತ್ಸಾಹ ಇಮ್ಮಡಿಗೊಳಿಸಿ ತಾವೂ ಖುಷಿ ಪಟ್ಟರು. ಪೂಜೆ ಹಾಗೂ ಭೂರಿ ಭೋಜನದ ಬಳಿಕ ಜಾನಪದ ಗೀತೆ, ಚಿತ್ರಗೀತೆ, ಸುಗ್ಗಿ ಹಾಡುಗಳಿಗೆ ನಾರಿಯರು ಸಖತ್ ಹೆಜ್ಜೆ ಹಾಕಿ ಸಂಭ್ರಮಿಸಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದರು.