ತುಮಕೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಮತ್ತು ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತೆಯರು ನಗರದ ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕಮಲಾ ಮಾತನಾಡಿ, ಸಮಾಜದ ಅರ್ಧದಷ್ಟು ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆತಿಲ್ಲ. ಸ್ವಾತಂತ್ರ್ಯ ಬಂದು 7 ದಶಕ ಪೂರೈಸಿದರೂ ಮಹಿಳೆ ಮೇಲಿನ ಅತ್ಯಾಚಾರ, ದೌರ್ಜನ್ಯ ನಿಂತಿಲ್ಲ ಎಂದು ದೂರಿದರು.
ಕಾರ್ಮಿಕ ಕಾನೂನು ಬದಲಿಸಿ 8 ಗಂಟೆ ಕೆಲಸ ಮತ್ತು ಮೂಲ ವೇತನದ ಹಕ್ಕು ನಿರಾಕರಿಸುತ್ತಿದೆ. ದುಡಿಯುವ ಮಹಿಳೆಯರ ಸಂಖ್ಯೆ ಕುಸಿಯುತ್ತಿದೆ. ವೇತನ ಇಲ್ಲದೆ ದುಡಿಯುವಂತಾಗಿದೆ ಎಂದು ಆರೋಪಿಸಿದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಭಾನು ಮಾತನಾಡಿ, ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯ ಕರ್ತೆಯರನ್ನು ಕಾರ್ಮಿಕರೆಂದು ಗುರುತಿಸುತ್ತಿಲ್ಲ. ಕನಿಷ್ಠ ಕೂಲಿ ನೀಡುತ್ತಿಲ್ಲ ಎಂದು ದೂರಿದರು. ಅಂಗನವಾಡಿ ನೌಕರರ ಸಂಟನೆಯ ಖಜಾಂಚಿ ಅನಸೂಯ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಸಿಐಟಿಯು ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಹಿಂಪಡೆಯಬೇಕು. ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಅನುಷ್ಠಾನಗೊಳಿಸಬಾರದು. ದೌರ್ಜನ್ಯ, ದಬ್ಟಾಳಿಕೆ ವಿಚಾರಣೆಗೆ ಸರ್ಕಾರತೇರ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕಾರ್ಯಕರ್ತೆಯರಾದ ಗಂಗಾ, ಗೌರಮ್ಮ, ಜಬೀನಾ, ಅನಸೂಯ, ವನಜಾಕ್ಷಿ, ಪದ್ಮಾ, ಮಂಜುಳಾ, ಶಾಂತಮ್ಮ ನಾಗರತ್ನಾ, ಶೈಲಾ ಇದ್ದರು. ಪ್ರತಿಭಟನೆ ನಂತರ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪಗೆ ಮನವಿ ಸಲ್ಲಿಸಿದರು.