ಕೊರಟಗೆರೆ: ಕಳೆದ 2 ತಿಂಗಳಿಂದ ಸರಿಯಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಬೇಸತ್ತ ಮಹಿಳೆಯರು ಹಾಗೂ ಸ್ಥಳೀಯರು ಸೇರಿ ಗ್ರಾಪಂಗೆ ಮುಂದೆ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ಮಾಡಿರುವ ಘಟನೆ ಹೊಳವನಹಳ್ಳಿ ಯಲ್ಲಿ ನಡೆದಿದೆ.
ತಾಲೂಕಿನ ಹೊಳವನಹಳ್ಳಿ ಗ್ರಾಪಂ ವ್ಯಾಪ್ತಿಯ ಇಂದಿರಾಕಾಲೋನಿ ಬಡವಾಣೆಯಲ್ಲಿ ಸುಮಾರು 3 ತಿಂಗಳಿನಿಂದ ಸರಿಯಾಗಿ ನೀರು ಬರುತ್ತಿಲ್ಲ. ಇಂದಿರಾ ಕಾಲೋನಿ ಮನೆಗಳಲ್ಲಿ ಹನಿ ನೀರಿಗೂ ಹಾಹಾಕಾರ ಉಂಟಾಗಿದೆ. ನೀರಿನ ಸಮಸ್ಯೆ ಬಗೆ ಹರಿಸುವಂತೆ ಹಲವಾರು ಬಾರಿ ಗ್ರಾಪಂ ಅಧಿ ಕಾರಿಗಳಿಗೆ ಹಾಗೂ ಸದಸ್ಯರಿಗೆ ತಿಳಿಸಿದರೂ ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ದೂರಿದರು.
ಗ್ರಾಪಂ ಮಾಜಿ ಸದಸ್ಯ ಹನುಮಂತರಾಜು ಮಾತನಾಡಿ, ನಮ್ಮ ಇಂದಿರಾ ಕಾಲೋನಿಯಲ್ಲಿ ಇರುವ ಓವರ್ ಟ್ಯಾಂಕ್‌ಗೆ ನೀರು ಹರಿಸಲಾಗುತ್ತದೆ. ಈ ನೀರು ಕೆಲವು ಮನೆಗಳಿಗೆ ಮಾತ್ರ ಸಿಮೀತ ವಾಗಿದೆ. ಕಳೆದ 3 ತಿಂಗಳಿಂದ ನಮ್ಮ ಕಾಲೋನಿಗೆ ಸರಿಯಾಗಿ ನೀರು ಬಂದಿಲ್ಲ ಎಂದು ಹೇಳಿದರು.
ಗ್ರಾಮಸ್ಥ ಮಹಮದ್ ಖಲಿಂವುಲ್ಲಾ, ವಾರಕ್ಕೆ 3ಬಾರಿ ನೀರು ಬಿಡುತ್ತಾರೆ. ಆ ಕೆಲವು ಮನೆಯವರು ಮೋಟರ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಅಂತಹ ಮನೆಗಳಿಗೆ ಮಾತ್ರ ನೀರು ಹೋಗುತ್ತಿದೆ. ಇದರಿಂದ ನಮಗೆ ಕುಡಿಯುವ ನೀರು ಬಹಳಷ್ಟು ತೊಂದರೆಯಾಗಿದೆ ಎಂದರು.
ಸ್ಪಷ್ಟನೆ: ಹೊಳವನಹಳ್ಳಿ ಗ್ರಾಪಂ ಪಿಡಿಒ ಚಲುವ ರಾಜು ಮಾತನಾಡಿ, ನಾವು ಈಗಾಗಲೇ ಹೊಳವನಹಳ್ಳಿ ಗ್ರಾಪಂನಲ್ಲಿ 10ಕ್ಕೂ ಹೆಚ್ಚು ಹೊಸ ಕೊಳವೆ ಬಾವಿ ಕೊರೆಸಿದ್ದೇವೆ. ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರು ಸಿಗುತ್ತಿಲ್ಲ. ಕೆಲವು ಮನೆಗಳಲ್ಲಿ ಮೋಟಾರ್ ಅಳವಡಿಸಿ ನೀರು ಹೊಡೆ ಯುತ್ತಿದ್ದಾರೆ ಎಂದು ಮಾಹಿತಿ ಬಂದಿದ್ದು, ಮೋಟರ್‌ನಿಂದ ನೀರು ಹೊಡೆಯುತ್ತಿರುವವರ ಮನೆ ನಲ್ಲಿ ಸಂಪರ್ಕ ಕಡಿತಗೊಳಿಸಲಾಗುವುದು, ಹಾಗೆಯೇ ಇಂದಿರಾ ಕಾಲೋನಿಗೆ ಭೇಟಿ ಕೊಟ್ಟು ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ. ಅಸ್ಲಾಂ ಪಾಷಾ, ಇರ್ಫಾನ್, ಲಾಲು, ನಜೀರ್, ಸಾವಿತ್ರಮ್ಮ, ಅಸೀನಾ, ಲಕ್ಷ್ಮಮ್ಮ ಮಮತಾಜ್ ಬೇಗಂ, ನರಸಿಂಹರಾಜು, ರಾಮ ಕೃಷ್ಣಯ್ಯ, ಹನುಮಂತರಾಜು, ಗೋವಿಂದರಾಜು ಮತ್ತಿತರರಿದ್ದರು.