ತುಮಕೂರು : ರಾಜ್ಯದಲ್ಲಿಯೇ ಮೊದಲ ಮಹಿಳಾ ಕಾರಾಗೃಹವಾಗಿರುವ ತುಮಕೂರು ಮಹಿಳಾ ಕೇಂದ್ರ ಕಾರಾಗೃಹವನ್ನು ತುಮಕೂರಿನಿಂದ ಶಿವಮೊಗ್ಗಕ್ಕೆ ಸ್ಥಳಾಂತರಿಸಲು ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚಿಂತನೆಗಳು ನಡೆದಿದೆ ಎಂದು ತಿಳಿದು ಬಂದಿದೆ.
2013ರಲ್ಲಿ ಆರಂಭ: ರಾಜಧಾನಿ ಬೆಂಗಳೂರಿಗೆ ಹತ್ತಿರವಾಗಿರುವ ತುಮಕೂರಿನಲ್ಲಿ ಕೇಂದ್ರ ಕಾರಾಗೃಹವನ್ನು ಪ್ರಾರಂಭ ಮಾಡಬೇಕೆಂದು ಅಂದಿನ ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಣೆ ಮಾಡಿ ಜಿಲ್ಲೆಗೆ ಕೊಡುಗೆಯಾಗಿ ಮಹಿಳಾ ಕಾರಾಗೃಹವನ್ನು ನೀಡಿತ್ತು.
ಈ ಕಾರಾಗೃಹ ನಗರದಲ್ಲಿ 2013 ಏ.28 ರಂದು ರಾಜ್ಯದ ಮೊದಲ ಮಹಿಳಾ ಕೇಂದ್ರ ಕಾರಾಗೃಹವಾಗಿ ಪ್ರಾರಂಭವಾಗಿತ್ತು. ಆರಂಭದಲ್ಲಿ 74 ಮಹಿಳಾ ಶಿಕ್ಷಾ ಬಂಧಿಗಳು ಈ ಬಂಧೀಖಾನೆಯಲ್ಲಿ ಇದ್ದರು. ಈಗ 80ಕ್ಕೂ ಹೆಚ್ಚು ಮಹಿಳಾ ಖೈದಿಗಳು ಇಲ್ಲಿದ್ದಾರೆ ವಿವಿಧ ಕಾರಣಗಳಿಂದ ಶಿಕ್ಷೆಗೆ ಒಳಪಟ್ಟು ಇಲ್ಲಿ ಶಿಕ್ಷೆ ಪಡೆಯುತ್ತಿದ್ದಾರೆ.
ತುಮಕೂರಿನಲ್ಲಿದ್ದ ಕಾರಾಗೃಹವನ್ನು ಊರುಕೆರೆ ಭೋವಿ ಪಾಳ್ಯಕ್ಕೆ ಸ್ಥಳಾಂತರ ಮಾಡಿದ ಮೇಳೆ ತುಮಕೂರಿಗೆ ಮಹಿಳಾ ಕಾರಾಗೃಹ ಮಂಜೂರಾಗಿತ್ತು ಈ ವೇಳೆಯಲ್ಲಿ ಮಹಿಳಾ ಕಾರಾಗೃಹವನ್ನು ಪ್ರಾಂಭಿಸಲು ಸೂಕ್ತವಾದ ಕಟ್ಟಡ ಇಲ್ಲದ ಕಾರಣದಿಂದ ಹಳೆಯ ಕಾರಾಗೃಹದಲ್ಲಿಯೇ ಮಹಿಳಾ ಕಾರಾಗೃಹವನ್ನು ಆರಂಭ ಮಾಡಿದರು. ಈ ಕಾರಾಗೃಹದಲ್ಲಿ ಬಳ್ಳಾರಿ, ಮೈಸೂರು, ರಾಮನಗರ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ವಿಚಾರಣಾಧೀನ ಮಹಿಳಾ ಕೈದಿಗಳು ಇದ್ದಾರೆ.
ಕೈದಿಗಳಿಗೆ ಉದ್ಯೋಗ ತರಬೇತಿ: ತುಮಕೂರು ನಗರದ ಹೃದಯ ಭಾಗದಲ್ಲಿ ಇರುವ ಈ ಮಹಿಳಾ ಕಾರಾಗೃಹ ನವೀಕರಣದ ಕಾಮಗಾರಿಗಳು ಈಗ ನಡೆಯುತ್ತಿವೆ ಇದರ ಜೊತೆಗೆ ಈ ಕಾರಾಗೃಹದಲ್ಲಿ ಇರುವ ಮಹಿಳಾ ಕೈದಿಗಳು ಜೈಲಿನಿಂದ ಹೊರ ಬಂದ ಮೇಲೆ ಸ್ವಾಭಿಮಾನಿ ಬದುಕು ನಡೆಸಲು ಇಲ್ಲಿ ಹಲವು ತರಬೇತಿಗಳನ್ನು ನೀಡಲಾಗುತ್ತಿದೆ ಇಂತಹ ಮಹಿಳಾ ಕಾರಾಗೃಹವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ತುಮಕೂರಿನಲ್ಲಿರುವ ಈ ಮಹಿಳಾ ಕಾರಾಗೃಹಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಕೆ.ಪಿ. ಮೋಹನ್ ರಾಜ್ ಅವರು ಸೂಕ್ತ ಜಾಗವನ್ನು ನೀಡಲು ಪರಿಶೀಲನೆ ಮಾಡುತ್ತಿದ್ದಾರೆ ಕೈದಿಗಳ ಸಂಬಂಧಿಕರು ಬಂದು ಹೋಗಲು ಇದು ಸೂಕ್ತವಾದ ನಗರ ಇದಾಗಿದೆ ಮತ್ತು ಕೈದಿಗಳಿಗೆ ಈ ಪರಿಸರ ಹೊಂದಿಕೊಂಡಿದೆ, ತುಮಕೂರಿಗೆ ಸರ್ಕಾರದಿಂದ ಮಂಜೂರಾಗಿ ಕಾರ್ಯಾರಂಭ ಮಾಡುತ್ತಿರುವ ಈ ಕಾರಾಗೃಹವನ್ನು ಬೇರೆ ಭಾಗಕ್ಕೆ ಸ್ಥಳಾಂತರಿಸದಂತೆ ಸಂಬಂಧಿಸಿದ ಜನ ಪ್ರತಿನಿಧಿಗಳು ತುಮಕೂರಿನ ಮಹಿಳಾ ಕಾರಾಗೃಹವನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಬಿಡುವುದಿಲ್ಲ. ಮಹಿಳಾ ಕಾರಾಗೃಹಕ್ಕೆ ಅಗತ್ಯವಾಗಿರುವ
ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈ ಮಹಿಳಾ ಕೇಂದ್ರ ಕಾರಾಗೃಹ ಸ್ಥಳಾಂತರದ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಅಂತಹ ಸಂದರ್ಭ ಬಂದರೆ ಗೃಹ ಸಚಿವರೊಂದಿಗೂ ಮಾತನಾಡಿ ಇದು ಸ್ಥಳಾಂತರವಾಗದಂತೆ ಎಚ್ಚರವಹಿಸುತ್ತೇನೆ.
ಡಾ. ಎಸ್. ರಫಿಕ್ ಅಹಮದ್, ಶಾಸಕ