ಮುಂಬಯಿ: ವನಿತಾ ಪ್ರೀಮಿಯರ್ ಲೀಗ್ ಏಕಪಕ್ಷೀಯವಾಗಿ ಸಾಗುತ್ತಿದೆ ಎಂಬ ಸಂಗತಿ ಈ ಪಂದ್ಯಾವಳಿಯ ಆಸಕ್ತಿಯನ್ನು ಅಷ್ಟರ ಮಟ್ಟಿಗೆ ಕಡಿಮೆ ಮಾಡಿದೆ ಎಂಬುದನ್ನು ಒಪ್ಪಲೇಬೇಕು. ಗೆದ್ದವರು ಗೆಲ್ಲುತ್ತ ಹೋಗುತ್ತಿದ್ದಾರೆ, ಸೋತವರು ಸೋಲುತ್ತ ಹೋಗುತ್ತಿದ್ದಾರೆ. ಐದನ್ನೂ ಗೆದ್ದ ಮುಂಬೈ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರ ವಾಗಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ವೆನಿಸಿದೆ. ಇನ್ನೊಂದೆಡೆ ಆರ್ಸಿಬಿ ಮೊದಲ 5 ಪಂದ್ಯಗಳನ್ನು ಸೋತು ಕೂಟದಿಂದ ಬಹುತೇಕ ನಿರ್ಗಮಿಸಿದೆ.
ಅಲ್ಲಿಗೆ ಪ್ಲೇ ಆಫ್ ಸುತ್ತಿನ ಉಳಿದೆರಡು ತಂಡಗಳನ್ನು ನಿರ್ಧರಿ ಸಲು ಮೂರೇ ತಂಡಗಳು ಉಳಿದಂತಾಯಿತು. ಇಲ್ಲಿ ಡೆಲ್ಲಿಯ ಮುನ್ನಡೆ ಖಾತ್ರಿ. 3ನೇ ಸ್ಥಾನ ಯುಪಿ ವಾರಿಯರ್ಗೆ ಮೀಸಲು, ಗುಜರಾತ್ಗೆ ತೆರೆದಿದೆ ನಿರ್ಗಮನ ಬಾಗಿಲು ಎಂಬುದು ಈಗಿನ ಲೆಕ್ಕಾಚಾರ. ಇರಲಿ… ಈವರೆಗಿನ ಫಲಿತಾಂಶಗಳನ್ನು ಸೂಕ್ಷ್ಮವಾಗಿ ಅವಲೋಕಿಸುವಾಗ ಮುಂಬೈ ತಂಡದ ಅಜೇಯ ಓಟ ಹಾಗೂ ಸ್ಟಾರ್ ಆಟಗಾರ್ತಿಯರನ್ನು ಹೊಂದಿ ರುವ ಆರ್ಸಿಬಿಯ ಪರ ದಾಟ… ಎರಡೂ ಅಚ್ಚರಿಯಾಗಿ ಕಾಣುತ್ತದೆ.
ಮುಂಬೈ ಸಾಂಘಿಕ ಆಟ
ಮುಂಬೈ ಓಟಕ್ಕೆ ಮುಖ್ಯ ಕಾರಣ ಸಾಂಘಿಕ ಆಟ. ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ಎಲ್ಲೂ ಲೋಪವಾಗದ ರೀತಿ ಯಲ್ಲಿ ಆಡುತ್ತಿದ್ದಾರೆ. ಮುಂಚೂಣಿಯಲ್ಲಿ ನಿಂತು ತಾನೂ ಬ್ಯಾಟ್ ಬೀಸುತ್ತ, ಉಳಿದವರನ್ನೂ ಹುರಿದುಂಬಿಸುತ್ತ ಸಾಗುವ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ದಿಟ್ಟ ಪ್ರದರ್ಶನದ ಪಾಲು ದೊಡ್ಡ ಮಟ್ಟದ್ದು.
ಇನ್ನೊಂದು ಮುಖ್ಯ ಕಾರಣವನ್ನು ಇಲ್ಲಿ ಉಲ್ಲೇಖೀಸಲೇಬೇಕು, ಅದು ತವರಿನ ವೀಕ್ಷಕರ ಅಮೋಘ ಬೆಂಬಲ. ತಂಡದ ಯುವ ಆಸ್ಟ್ರೇಲಿಯನ್ ಆಲ್ರೌಂಡರ್ ಅಮೇಲಿಯಾ ಕೆರ್ ಮುಂಬಯಿ ವೀಕ್ಷಕರ ಬೆಂಬಲವನ್ನು ಪ್ರಶಂಸಿಸಿದವರಲ್ಲಿ ಪ್ರಮುಖರು.
Related Articles
“ನಮ್ಮದೊಂದು ವೈವಿಧ್ಯಮಯ ತಂಡ. ಎಲ್ಲರ ಸಾಮರ್ಥ್ಯ ಮತ್ತು ಕ್ರಿಕೆಟ್ ಪ್ರೀತಿ ಎನ್ನುವುದು ತಂಡವನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಇಲ್ಲಿನ ವೀಕ್ಷಕರು, ಇವರು ನೀಡುವ ಪ್ರೋತ್ಸಾಹ ವಂತೂ ಅಮೋಘ. ಇಂಥ ದೊಂದು ಜನಸ್ತೋಮದ ಮುಂದೆ ಆಡುವುದೇ ಒಂದು ವಿಶೇಷ ಅನುಭವ’ ಎಂಬುದಾಗಿ ಕೆರ್ ಹೇಳಿದರು.
“ನಾಯಕಿ ಕೌರ್ ಓರ್ವ ಗ್ರೇಟ್ ಲೀಡರ್. ಯುವ ಆಟಗಾರ್ತಿಯರಿಗೆಲ್ಲ ಅವರೀಗ ಮಾದರಿಯಾಗಿದ್ದಾರೆ. ಡ್ರೆಸ್ಸಿಂಗ್ ರೂಮ್ ವಾತಾವರಣ ಉಲ್ಲಾಸದಾಯಕ. ಕೌರ್ ಆಟ ಅದ್ಭುತ. ಇದನ್ನು ಇನ್ನೊಂದು ತುದಿಯಲ್ಲಿ ನಿಂತು ವೀಕ್ಷಿಸುವುದೇ ಖುಷಿಯ ಸಂಗತಿ. ಇನ್ನೊಬ್ಬರ ಸಾಧನೆಯನ್ನು ನಾವೆಲ್ಲರೂ ಸೇರಿ ಸಂಭ್ರಮಿಸುತ್ತೇವೆ. ನಾವು ಗೆಲ್ಲುತ್ತ ಹೋದಂತೆ ಅದೊಂದು ಹವ್ಯಾಸವೇ ಆಗಿಬಿಡುತ್ತದೆ’ ಎಂದು ಕೆರ್ ಹೇಳಿದರು.
ಒಬ್ಬರನ್ನೇ ಅವಲಂಬಿಸಿಲ್ಲ
ಮುಂಬೈ ಓರ್ವ ಆಟಗಾರ್ತಿಯನ್ನೇ ಅವಲಂಬಿಸಿಲ್ಲ. ಆದರೂ ಹ್ಯಾಲಿ ಮ್ಯಾಥ್ಯೂಸ್, ನ್ಯಾಟ್ ಸ್ಕಿವರ್ ಬ್ರಂಟ್, ಸೈಕಾ ಇಶಾಖ್ ಅವರೆಲ್ಲ ಏಕಾಂಗಿಯಾಗಿ ನಿಂತು ತಂಡವನ್ನು ಗೆಲ್ಲಿಸಿಕೊಡುವ ಮಟ್ಟಕ್ಕೆ ಏರಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವುದಿರಲಿ, ಅವರನ್ನು ಸೋಲಿನ ಸನಿಹಕ್ಕೂ ತಂದು ನಿಲ್ಲಿಸಲು ಉಳಿದ ತಂಡಗಳಿಂದ ಸಾಧ್ಯವಾಗಿಲ್ಲ. ಕೌರ್ ಪಡೆಯದ್ದೆಲ್ಲ ಅಧಿಕಾರಯುತ ಗೆಲುವುಗಳೇ ಆಗಿವೆ. ಇನ್ನೊಂದು ಬಲಿಷ್ಠ ತಂಡವಾದ ಡೆಲ್ಲಿ ಎದುರಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಮುಂಬೈ ಇಲ್ಲಿಯೂ ತನ್ನ ಪ್ರಭುತ್ವ ಸ್ಥಾಪಿಸಿತು. ಡೆಲ್ಲಿ 105ಕ್ಕೆ ಕುಸಿದು ಶರಣಾಗತಿ ಸಾರಿತು.
ಮುಂಬೈಯನ್ನು ಸೋಲಿಸಿದವರಿಗೆ ಚೊಚ್ಚಲ ಡಬ್ಲ್ಯುಪಿಎಲ್ ಟ್ರೋಫಿ ಎನ್ನುವುದು ಹೆಚ್ಚು ಸೂಕ್ತ!