Advertisement

ಶಕ್ತಿ ಯೋಜನೆಗೆ ನಾರಿಶಕ್ತಿ “ಬಹುಪರಾಕ್‌”- “ಶಕ್ತಿ” ಬಗ್ಗೆ ಹೆಂಗಳೆಯರ “ಮನ್‌ ಕಿ ಬಾತ್‌”

10:32 PM Jun 11, 2023 | Team Udayavani |

ಬೆಂಗಳೂರು: “ಸರ್‌, ಆಧಾರ್‌ ಕಾರ್ಡ್‌ ತಂದಿಲ್ಲ. ಇವತ್ತೂಂದಿನ ಅಡ್ಜಸ್ಟ್‌ ಮಾಡಿಕೊಳ್ಳಿ,” “ಗುರುತಿನ ಚೀಟಿ ಮೊಬೈಲಲ್ಲಿ ತೋರಿಸಿದ್ರೆ ಸಾಕಾ ಸರ್‌”, “ಕಂಡಕ್ಟರೇ, ಹೆಂಗಸರಿಗೆ ಫ್ರೀ ಅಂದ್ರಲ್ಲ, ಮತ್ಯಾಕೆ ಟಿಕೆಟ್‌ ಕೊಡ್ತಾ ಇದ್ದೀರಾ?…”

Advertisement

ಭಾನುವಾರ ಎಲ್ಲಿ ಹತ್ತಿ, ಎಲ್ಲಿ ಇಳಿದರೂ ಬಿಎಂಟಿಸಿ ಬಸ್ಸುಗಳಲ್ಲಿ ಕೇಳಿಬರುತ್ತಿದ್ದ ಮಾತುಗಳಿವು. ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ “ಶಕ್ತಿ’ ಯೋಜನೆಗೆ ಚಾಲನೆ ಸಿಕ್ಕ ಬೆನ್ನಲ್ಲೇ, ಅಂದರೆ ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಸಾರಿಗೆ ಬಸ್ಸುಗಳಲ್ಲಿ ನಾರಿಯರ ಸಂಭ್ರಮವೋ ಸಂಭ್ರಮ.

ಬಸ್ಸು ಹತ್ತಿದ ಹೆಣ್ಣುಮಕ್ಕಳೆಲ್ಲರ ಮೊಗದಲ್ಲೂ ನಗು ನಗು… ಬಹುತೇಕ ಮಂದಿ ಆಧಾರ್‌ ಕಾರ್ಡ್‌ ಅನ್ನು ಬ್ಯಾಗಿಗೆ ಇಳಿಸಿಕೊಂಡೇ ಮನೆ ಬಿಟ್ಟಿದ್ದರು. ಹಾಗಾಗಿ ಬಸ್ಸು ಹತ್ತುವ ಮೊದಲೇ ಬ್ಯಾಗುಗಳಲ್ಲಿದ್ದ ಕಾರ್ಡ್‌ಗಳು ಕೈಗೆ ಬಂದಿದ್ದವು. ಕಂಡಕ್ಟರ್‌ ಹತ್ತಿರ ಬರುವ ಮುಂಚೆಯೇ ಆಧಾರ್‌ ಕಾರ್ಡ್‌ ತೋರಿಸಲಾರಂಭಿಸಿದರು. ವಿದ್ಯಾರ್ಥಿನಿಯರು ಸೇರಿದಂತೆ ಕೆಲವು ಯುವತಿಯರು ಮೊಬೈಲ್‌ನಲ್ಲಿದ್ದ ಆಧಾರ್‌ನ ಸಾಫ್ಟ್ಕಾಪಿಯನ್ನು ತೋರಿಸಿ ಫ್ರೀ ಪ್ರಯಾಣ ಮಾಡಿದರು.

ಒಂದೆರಡು ಕಡೆ ಬಸ್‌ ನಿರ್ವಾಹಕರು “ಸಾಫ್ಟ್ ಕಾಪಿ’ಯನ್ನು ಒಪ್ಪಿಕೊಂಡು ಟಿಕೆಟ್‌ ಕೊಟ್ಟರೆ, ಕೆಲವು ಕಂಡಕ್ಟರ್‌ಗಳು “ಹಾರ್ಡ್‌ ಕಾಪಿ’ಯೇ ಬೇಕು ಎಂದು ಹೇಳಿ ಹಣ ಪಡೆದರು. ಜನದಟ್ಟಣೆ ಹೆಚ್ಚಿದ್ದಂಥ ಬಸ್ಸುಗಳಲ್ಲಿ ಆಧಾರ್‌ ಕಾರ್ಡ್‌ ನೋಡಲೂ ಪುರುಸೊತ್ತು ಸಿಗದೇ ನಿರ್ವಾಹಕರು “ನೀವೆಲ್ಲ ಕರ್ನಾಟಕದವರೇ ತಾನೇ? ನಂಬಿಕೆ ಮೇಲೆ ಟಿಕೆಟ್‌ ಕೊಡ್ತಿದ್ದೇನೆ’ ಎನ್ನುತ್ತಾ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದೂ ಕಂಡುಬಂತು.

ಕೆಲವು ಗೃಹಿಣಿಯರು, ಹಿರಿಯ ನಾಗರಿಕರು ಗುರುತಿನ ಚೀಟಿ ಇಲ್ಲದೇ ಬಂದಿದ್ದ ಕಾರಣ ಅವರು “ಉಚಿತ ಪ್ರಯಾಣ’ದಿಂದ ವಂಚಿತರಾದರು. ಇವತ್ತೂಂದು ದಿನ ಅಡ್ಜಸ್ಟ್‌ ಮಾಡಿಕೊಳ್ಳಿ ಸರ್‌, ನಾಳೆಯಿಂದ ಆಧಾರ್‌ ಕಾರ್ಡ್‌ ತಗೊಂಡೇ ಬರುತ್ತೇವೆ ಎನ್ನುತ್ತಾ ನಿರ್ವಾಹಕರಲ್ಲಿ ಅವಲತ್ತುಕೊಂಡರು. ಕೆಲವು ಹೆಂಗಳೆಯರು ತಮ್ಮ ಗೆಳತಿಯರಿಗೆ ಕರೆ ಮಾಡಿ, “ನಮಗೆ ಫ್ರೀ ಕಣೇ. ನಿಮಗೂ ಫ್ರೀ ಇರುತ್ತೆ ಕೇಳ್ಕೊ ಎನ್ನುತ್ತಾ ಉಚಿತ ಪ್ರಯಾಣ ಯೋಜನೆ ಜಾರಿಯಾಗಿರುವ ವಿಚಾರವನ್ನು ಪ್ರೀತಿಪಾತ್ರರಿಗೆ ತಿಳಿಸುತ್ತಿದ್ದುದು ಕಂಡುಬಂತು.

Advertisement

ಚೀಟಿ ಹರಿದು ಕೊಡುವಂಥ ಟಿಕೆಟ್‌ಗಳಲ್ಲಿ “ಮಹಿಳೆಯರಿಗೆ ಉಚಿತ’ ಎಂದು ಸೀಲ್‌ ಹಾಕಲಾಗಿತ್ತು. ಮಷೀನ್‌ ಮೂಲಕ ನೀಡುವ ಟಿಕೆಟ್‌ಗಳಲ್ಲಿ “ಶೂನ್ಯ’ ಮೊತ್ತ ಎಂದು ಮುದ್ರಿಸಲಾಗಿತ್ತು. ಕಾಲೇಜು ವಿದ್ಯಾರ್ಥಿನಿಯರು ಟಿಕೆಟ್‌ಗಳನ್ನು ಹಿಡಿದು ಸೆಲ್ಫಿಗೆ ಪೋಸ್‌ ಕೊಡುತ್ತಿದ್ದರೆ, ಗೃಹಿಣಿಯರ ಮೊಗದಲ್ಲಿ ಖರ್ಚಿಲ್ಲದೇ ಓಡಾಡುತ್ತಿದ್ದೇವೆ ಎಂಬ ಖುಷಿ ಇಣುಕುತ್ತಿತ್ತು.

ನಮ್‌ ಕಷ್ಟ ಅರ್ಥ ಮಾಡ್ಕೊಳ್ಳಿ

ಮಹಿಳೆಯರಿಗೆ ಉಚಿತದ ಟಿಕೆಟ್‌ ನೀಡುವ ಭರದಲ್ಲಿ ನಿರ್ವಾಹಕರೊಬ್ಬರು, “ಇನ್ನು ಮುಂದೆ ನಿಮ್‌ ಹವಾ. ಪ್ರವಾಸ, ತೀರ್ಥಯಾತ್ರೆ ಶುರು ಮಾಡಿ” ಎಂದು ಕಿಚಾಯಿಸಿದಾಗ, ಸುತ್ತಲಿದ್ದವರೆಲ್ಲ ಜೋರಾಗಿ ನಕ್ಕರು. ಆದರೆ, ಕೆಲವು ಮಹಿಳೆಯರು ಆ ಕಂಡಕ್ಟರನ್ನೇ ತರಾಟೆಗೆ ತೆಗೆದುಕೊಂಡು, “ನಾವೇನು ಫ್ರೀ ಅಂತ ದಿನಾ ತೀರ್ಥಯಾತ್ರೆ ಮಾಡೋಕಾಗುತ್ತಾ? ನಮ್‌ ಕಷ್ಟಾನೂ ಅರ್ಥ ಮಾಡ್ಕೊಳಿ. ಏನೋ ಒಂಚೂರು ದುಡ್ಡು ಉಳಿದ್ರೆ, ಅದೂ ಇದೂ ಖರ್ಚಿಗೆ ಆಗುತ್ತೆ. ಯಾಕ್ರೀ ಹಾಗೆ ಹೇಳ್ತೀರಾ” ಎಂದು ದಬಾಯಿಸಿದರು. ಕೊನೆಗೆ ಬಸ್‌ ನಿರ್ವಾಹಕ, “ಮನಸ್ಸಿಗೆ ಹಚ್ಕೋಬೇಡ್ರಮ್ಮ. ಸುಮ್ಮನೆ ತಮಾಷೆಗೆ ಅಂದೆ’ ಎಂದು ಹೇಳಿ ವಿವಾದಕ್ಕೆ ತೆರೆ ಎಳೆದರು. ಈ ವಾಗ್ವಾದದ  ನಡುವೆಯೇ ಅಜ್ಜಿಯೊಬ್ಬರು, “ಏನಪ್ಪಾ, ಎಷ್ಟು ವರ್ಷ ಹಿಂಗೆ ಫ್ರೀ ಇರುತ್ತೆ” ಎಂದು ಕೇಳಿದಾಗ ಮತ್ತೂಮ್ಮೆ ಎಲ್ಲರೂ ನಗೆಗಡಲಲ್ಲಿ ತೇಲಿದರು.

ಚಿಲ್ಲರೆ ಸಮಸ್ಯೆಗೆ ಮುಕ್ತಿ

“ಚಿಲ್ಲರೆ ಇಲ್ಲ ಅಂತ ಎಷ್ಟೋ ಬಾರಿ ಅರ್ಧದಲ್ಲೇ ಬಸ್ಸಿಂದ ಇಳಿದಿದ್ದಿದೆ. ಪ್ರತಿ ದಿನ ಚಿಲ್ಲರೆ ಎಲ್ಲಿಂದ ತರೋದು? ಈಗ ಬಸ್‌ ಪ್ರಯಾಣ ಫ್ರೀ ಆಗಿರೋದ್ರಿಂದ ನನ್ನ “ಚಿಲ್ಲರೆ ಸಮಸ್ಯೆ’ಗೆ ಶಾಶ್ವತ ಮುಕ್ತಿ ಸಿಕ್ತು” ಎನ್ನುತ್ತಾ ನಕ್ಕರು ವಿಜಯನಗರದ ಮೆಟ್ರೋ ಸಿಬ್ಬಂದಿ.

“ಇವತ್ತು ಬೆಳಗ್ಗೆ ನರಸೀಪುರದಿಂದ ಬೆಂಗಳೂರು ತನಕ ಹಣ ಕೊಟ್ಟೇ ಬಂದೆ. ಬೆಂಗಳೂರು ತಲುಪಿದ ಮೇಲೆ ಇಲ್ಲಿ ಬಸ್ಸಲ್ಲಿ ಹಣ ತಗೊಂಡಿಲ್ಲ. ತುಂಬಾ ಉಪಕಾರ ಆಯಿತು. ಗ್ಯಾರಂಟಿ ಎಲ್ಲ ಎಲೆಕ್ಷನ್‌ಗೆ ಮುಂಚೆ ಘೋಷಿಸಿದ್ದು. ಯಾವುದೂ ಮಾಡಲ್ಲ ಅಂತ ಹೇಳ್ತಿದ್ರು. ಆದರೆ, ಮಾಡಿದ್ರಲ್ಲ ಅಷ್ಟು ಸಾಕು. ಊರಿಂದ ಹೋಗಿ ಬರೋಕೆ ಏನಿಲ್ಲ ಅಂದ್ರೂ 300 ರೂ. ಬೇಕಿತ್ತು. ಈಗ ಅದು ಉಳೀತು’ ಎಂದು ನರಸೀಪುರದಿಂದ ಬಂದಿದ್ದ ಚಂದ್ರಮ್ಮ ಎಂಬ ವೃದ್ಧೆ ಹೇಳಿದರು.

ವಿನುತಾ ಎಂಬ ಗೃಹಿಣಿ ಮಾತನಾಡಿ, “ಈ ಯೋಜನೆಯಿಂದ ನಿಜಕ್ಕೂ ಮಹಿಳೆಯರಿಗೆ ಶಕ್ತಿ ಬಂದಿದೆ. ಬಡ, ಮಧ್ಯಮ ವರ್ಗದವರಿಗೆ ಬಹಳ ಅನುಕೂಲ ಆಗುತ್ತೆ. ಬಸ್ಸಿಗೆ ಖರ್ಚಾಗುತ್ತಿದ್ದ ಹಣವನ್ನು ಯಾವುದಾದರೂ ಉಳಿತಾಯ ಖಾತೆಗೆ ಹಾಕಬಹುದು. ಏನಿಲ್ಲ ಅಂದ್ರೂ, ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನಾದರೂ ತಂದುಕೊಡೋಕೆ ಬಳಕೆ ಆಗಬಹುದು’ ಎಂದರು. ಜತೆಗೆ, ಮಹಿಳೆಯರಿಗೆ ಮಾತ್ರ ಉಚಿತ ಕೊಡುವ ಬದಲು, ಬಸ್‌ ಪ್ರಯಾಣ ದರವನ್ನೇ ಇಳಿಸಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬಹುದಿತ್ತು ಎಂದೂ ಅವರು ಅಭಿಪ್ರಾಯಪಟ್ಟರು.

ನಮಗೂ ಫ್ರೀ ಇರಬೇಕಿತ್ತು

“ಕರ್ನಾಟಕದವರಿಗೆ ಮಾತ್ರ ಫ್ರೀಯಂತೆ. ನಾವು ಉತ್ತರಾಖಂಡದವರು. ನಮ್ಮಲ್ಲಿ ಇಲ್ಲಿನ ಆಧಾರ್‌ ಇಲ್ಲ. ಆದರೆ, ನಾವು ಇಲ್ಲೇ ಕೆಲಸ ಮಾಡೋರು. 12ರಿಂದ 15 ಸಾವಿರ ರೂ. ವೇತನ ಬರುತ್ತೆ. ನಮಗೂ ಉಚಿತದ ಲಾಭ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು’ ಎಂದರು ಸಿಲಿಕಾನ್‌ ಸಿಟಿಯಲ್ಲಿ ದುಡಿಯುತ್ತಿರುವ ನೇಹಾ ಎಂಬ ಯುವತಿ.

ಇನ್ನೇನು ಹೆಚ್ಚು ಮಾಡ್ತಾರೋ?

ಇವತ್ತೇನೋ ಉಚಿತ ಅಂತ ಕೊಡ್ತಾರೆ. ಆದರೆ, ಆ ಕಡೆ ಕರೆಂಟು ಬಿಲ್‌, ಎಲ್‌ಪಿಜಿ ಸಿಲಿಂಡರ್‌ ರೇಟ್‌ ಜಾಸ್ತಿ ಮಾಡುತ್ತಾರೆ. ಒಂದು ಫ್ರೀ ಕೊಟ್ಟು, ಮತ್ತೂಂದರಲ್ಲಿ ಕಿತ್ತುಕೊಳ್ತಾರೆ. ಹೀಗಾದರೆ ಏನೂ ಅನುಕೂಲ ಆಗುವುದಿಲ್ಲ ಎಂದು ಅನೇಕ ಮಹಿಳೆಯರು ಕಳವಳ ವ್ಯಕ್ತಪಡಿಸಿದ್ದು ಕಂಡುಬಂತು.

*ಹಲೀಮತ್‌ ಸಅದಿಯಾ

Advertisement

Udayavani is now on Telegram. Click here to join our channel and stay updated with the latest news.

Next