Advertisement

Women’s Hockey : ಸಂಗೀತಾ ಹ್ಯಾಟ್ರಿಕ್‌; ಸಿಂಗಾಪುರ ವಿರುದ್ಧ 13-0 ಗೆಲುವು

11:40 PM Sep 27, 2023 | Team Udayavani |

ಹ್ಯಾಂಗ್‌ಝೂ: ಯುವ ಸ್ಟ್ರೈಕರ್‌ ಸಂಗೀತಾ ಕುಮಾರಿ ಅವರ ಹ್ಯಾಟ್ರಿಕ್‌ ಹಾಗೂ ಇತರ ಆಟಗಾರ್ತಿಯರ ಅಮೋಘ ಪ್ರದರ್ಶನದ ನೆರವಿನಿಂದ ಏಷ್ಯಾಡ್‌ ವನಿತಾ ಹಾಕಿ ಪಂದ್ಯಾವಳಿಯ ತನ್ನ ಮೊದಲ ಮುಖಾಮುಖೀಯಲ್ಲಿ ಭಾರತ 13-0 ಗೋಲುಗಳಿಂದ ಸಿಂಗಾಪುರವನ್ನು ಕೆಡವಿತು.

Advertisement

ಭಾರತ ಮೊದಲೆರಡು ಕ್ವಾರ್ಟರ್‌ಗಳಲ್ಲೇ 8 ಗೋಲು ಸಿಡಿಸಿ ತಾಕತ್ತು ತೋರಿತು. ಅರ್ಧ ಹಾದಿಯ ಬಳಿಕ ಸಿಂಗಾಪುರ ಒಂದಿಷ್ಟು ಚೇತರಿಕೆ ಕಂಡಿತಾದರೂ ಒಂದೇ ಒಂದು ಗೋಲು ಬಾರಿಸಲು ಸಾಧ್ಯವಾಗಲಿಲ್ಲ.

ಸಂಗೀತಾ ಕುಮಾರಿ ಪಂದ್ಯದ 23ನೇ, 47ನೇ ಹಾಗೂ 56ನೇ ನಿಮಿಷದಲ್ಲಿ ಗೋಲು ಬಾರಿಸಿದರು. ನವನೀತ್‌ ಕೌರ್‌ 14ನೇ ನಿಮಿಷದಲ್ಲಿ ಬಡಬಡನೆ 2 ಗೋಲು ಸಿಡಿಸಿದರು. ಉಳಿದಂತೆ ಉದಿತಾ (6ನೇ ನಿಮಿಷ), ಸುಶೀಲಾ ಚಾನು (8ನೇ ನಿಮಿಷ), ದೀಪಿಕಾ (11ನೇ ನಿಮಿಷ), ದೀಪ್‌ ಗ್ರೇಸ್‌ ಎಕ್ಕಾ (17ನೇ ನಿಮಿಷ), ನೇಹಾ (19ನೇ ನಿಮಿಷ), ಸಲೀಮಾ ಟೇಟೆ (35ನೇ ನಿಮಿಷ), ಮೋನಿಕಾ (52ನೇ ನಿಮಿಷ) ಮತ್ತು ವಂದನಾ ಕಟಾರಿಯಾ (56ನೇ ನಿಮಿಷ) ಒಂದೊಂದು ಗೋಲು ಹೊಡೆದರು.

“ಎ’ ವಿಭಾಗದಲ್ಲಿರುವ ಭಾರತ ತನ್ನ ಮುಂದಿನ ಪಂದ್ಯವನ್ನು ಶುಕ್ರವಾರ ಮಲೇಷ್ಯಾ ವಿರುದ್ಧ ಆಡಲಿದೆ.

ಬಾಸ್ಕೆಟ್‌ಬಾಲ್‌ : ಭಾರತ ಕ್ವಾರ್ಟರ್‌ ಫೈನಲ್‌ಗೆ

Advertisement

ಹ್ಯಾಂಗ್‌ಝೂ: ಭಾರತದ ಪುರುಷರ ತಂಡ 3/3 ಬಾಸ್ಕೆಟ್‌ಬಾಲ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ತಲುಪಿದೆ. ಬುಧವಾರ ನಡೆದ “ಸಿ’ ವಿಭಾಗದ ಪಂದ್ಯದಲ್ಲಿ ಮಕಾವೊ ವಿರುದ್ಧ ಭಾರತ 21-12 ಅಂತರದ ಗೆಲುವು ಸಾಧಿಸಿತು.ಸಹೇಜ್‌ ಪ್ರತಾಪ್‌ ಸಿಂಗ್‌ ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 10 ಅಂಕ ಗಳಿಸಿದರು. ಮಕಾವೊ ಪರ ಹೌ ಇನ್‌ ಹೊ 5 ಅಂಕ ಗಳಿಸಿ ಕೊಟ್ಟರು. ಭಾರತ ಮೊದಲ ಪಂದ್ಯದಲ್ಲಿ ಮಲೇಷ್ಯಾವನ್ನು ಮಣಿಸಿತ್ತು. ಆದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಹಾಗೂ ಆತಿಥೇಯ ಚೀನದ ಕಠಿನ ಸವಾಲು ಭಾರತಕ್ಕೆ ಎದುರಾಗಲಿದೆ.

ಟೆನಿಸ್‌: ಸುಮಿತ್‌, ಅಂಕಿತಾ ಪರಾಭವ
ಹ್ಯಾಂಗ್‌ಝೂ: ಏಷ್ಯಾಡ್‌ ಟೆನಿಸ್‌ ಸಿಂಗಲ್ಸ್‌ನಲ್ಲಿ ಭಾರತ ಪದಕರಹಿತ ಸ್ಥಿತಿಯನ್ನು ತಂದುಕೊಂಡಿದೆ. ನೆಚ್ಚಿನ ಆಟಗಾರರಾದ ಸುಮಿತ್‌ ನಾಗಲ್‌, ಅಂಕಿತಾ ರೈನಾ ಇಬ್ಬರೂ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದರು.

ಸುಮಿತ್‌ ನಾಗಲ್‌ ಅವರನ್ನು ಚೀನದ ಜೀಜೆನ್‌ ಜಾಂಗ್‌ 6-7 (3), 6-1, 6-2ರಿಂದ ಮಣಿಸಿದರು. ಕಳೆದ ಸಲ ಕಂಚಿನ ಪದಕ ಜಯಿಸಿದ್ದ ಅಂಕಿತಾ ರೈನಾ ಜಪಾನ್‌ನ ಹಾರುಕಾ ರಾಜಿ ವಿರುದ್ಧ 3 ಸೆಟ್‌ಗಳ ಹೋರಾಟದ ಬಳಿಕ 6-3, 4-6, 4-6ರಿಂದ ಪರಾಭವಗೊಂಡರು.
ಇದಕ್ಕೂ ಮುನ್ನ ರಾಮ್‌ಕುಮಾರ್‌ ರಾಮನಾಥನ್‌ ಮತ್ತು ಋತುಜಾ ಭೋಂಸ್ಲೆ ಕ್ರಮವಾಗಿ 3ನೇ ಹಾಗೂ 2ನೇ ಸುತ್ತಿನಲ್ಲಿ ಪರಾಭವಗೊಂಡಿದ್ದರು.

ಪದಕವೊಂದು ಖಾತ್ರಿ
ಸುಮಿತ್‌, ಅಂಕಿತಾ ನಿರ್ಗಮನದ ಹೊರತಾಗಿಯೂ ಭಾರತಕ್ಕೆ ಟೆನಿಸ್‌ ಪದಕವೊಂದು ಖಾತ್ರಿಯಾಗಿದೆ. ರಾಮ್‌ಕುಮಾರ್‌ ರಾಮನಾಥನ್‌-ಸಾಕೇತ್‌ ಮೈನೆನಿ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದ್ದು, ಯಾವ ಪದಕ ತರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ದ್ವಿತೀಯ ಶ್ರೇಯಾಂಕದ ಭಾರತೀಯ ಜೋಡಿ ಕ್ವಾರ್ಟರ್‌ ಫೈನಲ್‌ನಲ್ಲಿ ಚೀನದ ಜಿಜೆನ್‌ ಜಾಂಗ್‌-ಯಿಬಿಂಗ್‌ ವು ವಿರುದ್ಧ 6-1, 7-6 (8) ಅಂತರದ ಗೆಲುವು ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next