Advertisement

ಮಹಿಳಾ ಆರೋಗ್ಯವೇ ಆಕೆಯ ಸಬಲೀಕರಣದ ಸೂತ್ರ

04:35 AM Jul 08, 2018 | Harsha Rao |

ವಿಶಿಷ್ಟ ಸಂಗತಿಯೆಂದರೆ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಜನನ ನಿಯಂತ್ರಣ ವಿಧಾನಗಳನ್ನು ಬಳಸುವವರ ಪ್ರಮಾಣ ನಗರ ಪ್ರಮಾಣಕ್ಕಿಂತಲೂ ಹೆಚ್ಚಿಗೆ ಇರುವ ಬಗ್ಗೆ ಸಮೀಕ್ಷೆಯಲ್ಲಿ ಬಯಲಾಗಿದೆ. ರಾಜ್ಯದ ಗ್ರಾಮೀಣ ಭಾಗದ 54.5 ಪ್ರತಿಶತ ಮಹಿಳೆಯರು ಜನನ ನಿಯಂತ್ರಣ ವಿಧಾನಗಳನ್ನು ಬಳಸಿದರೆ, ನಗರವಾಸಿಗಳು 48 ಪ್ರತಿಶತದಷ್ಟು ಜನನ ನಿಯಂತ್ರಣ ವಿಧಾನಗಳನ್ನು ಬಳಸುವದಿದೆ. 

Advertisement

ಮಹಿಳೆಯ ಆರೋಗ್ಯದ ಸ್ಥಿತಿಗತಿಗಳು ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಸಾಕಷ್ಟು ಮಹಿಳೆಯರು ಆರೋಗ್ಯದ ಬಗೆಗಿನ ತಿಳಿವಳಿಕೆಯ ಕೊರತೆಯಿಂದ ಮತ್ತು ಸೌಲಭ್ಯಗಳ ಅಭಾವದಿಂದ ಅನೇಕ ತೊಂದರೆಗಳಿಂದ ಬಳಲುವಂತಾಗಿದೆ. ಹಲವಾರು ಬಗೆಯ ಸಾಂಕ್ರಾಮಿಕ ಲೈಂಗಿಕ ರೋಗಗಳಿಂದ ಪೀಡಿತರಾಗುತ್ತಿ ದ್ದಾರೆ. ಅವರಿಗೆ ಲಭ್ಯವಿರುವ ಸುರಕ್ಷತಾ ವಿಧಾನಗಳ ಬಗ್ಗೆಯೂ ಸಮರ್ಪಕವಾದ ರೀತಿಯ ತಿಳಿವಳಿಕೆ ನೀಡುವ ಕೆಲಸವೂ ನಡೆದಿಲ್ಲ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪ್ರತಿವರ್ಷ ಸುಮಾರು 200 ಮಿಲಿಯನ್‌ಗಿಂತಲೂ ಹೆಚ್ಚಿನ ಮಹಿಳೆಯರು ಗರ್ಭಪಾತ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಇವರು ಮೊದಲೇ ಜನನ ನಿಯಂಂತ್ರಣ ವಿಧಾನಗಳನ್ನು ಬಳಸುವ ಬಗ್ಗೆ ಆಲೋಚಿಸುವುದಿಲ್ಲ. ಇಂಥವರಿಗೆ ಜನನ ನಿಯಂತ್ರಣ ವಿಧಾನಗಳನ್ನು ಬಳಸುವ ಬಗ್ಗೆ ತಿಳಿಸಿಕೊಡುವ ಜೊತೆಗೆ, ಅವುಗಳನ್ನು ಒದಗಿಸಿಕೊಡುವ ಕೆಲಸಗಳೂ ನಡೆಯಬೇಕಿದೆ. 

ಕೆಲವು ದೇಶಗಳು ಗರ್ಭಪಾತಕ್ಕೆ ಶಾಸನಾತ್ಮಕವಾಗಿ ಅನುಮತಿ ನೀಡಿವೆಯಾದರೂ ದಂಡಸಂಹಿತೆಯಲ್ಲಿಯ ನಿಯಮಾವಳಿಗಳು ಬದಲಾಗದ ಕಾರಣ ವೈದ್ಯರು ಗರ್ಭಪಾತಕ್ಕೆ ನೆರವಾಗುವುದಿಲ್ಲ. ಉದಾಹರಣೆಗೆ ಕೆನ್ಯಾದಲಿ 2010ರಲ್ಲಿಯೇ ಕೆಲವು ಸಂದರ್ಭಗಳನ್ನು ಆಧರಿಸಿ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿಕೊಡುವ ಬಗ್ಗೆ ಕಾನೂನು ಜಾರಿಗೆ ಬಂದರೂ ಪ್ರಯೋಜನವಾಗಿಲ್ಲ. 2012ರ ಸಂದರ್ಭದಲ್ಲಿ ಕೆನ್ಯಾದಲ್ಲಿ ಸುಮಾರು ಅರ್ಧ ಮಿಲಿಯನ್‌ನಷ್ಟು ಗರ್ಭಪಾತಗಳು ಆಗಿರುವುದು ಮಾತ್ರವಲ್ಲದೇ ಸುಮಾರು 1 ಲಕ್ಷದಷ್ಟು ಮಹಿಳೆಯರು ತೊಂದರೆಗೆ ಸಿಲುಕಬೇಕಾಯಿತು. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪುರುಷನಾದವನು ಮಹಿಳೆಯ ಜೈವಿಕ ಹಕ್ಕಿನ ಮೇಲೆಯೂ ಸವಾರಿ ಮಾಡುವುದಿದೆ.

ಮಹಿಳೆ ತನ್ನ ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಮಕ್ಕಳಿಗೆ ಜನ್ಮ ನೀಡುವುದು ಆಕೆಯ ಹಕ್ಕು ಎಂದು ಪಿತೃಪ್ರಧಾನ ಸಮಾಜಗಳು ಇಂದಿಗೂ ಪರಿಭಾವಿಸಿರುವುದಿಲ್ಲ. ಮಹಿಳೆಗೆ ಆಕೆಯ ಆರೋಗ್ಯ ಮತ್ತು ಲೈಂಗಿಕ ಸುರಕ್ಷತೆಯ ಬಗ್ಗೆ ಸಾಕಷ್ಟು ಪ್ರಮಾಣದಲ್ಲಿ ತಿಳಿಸಿಕೊಡಬೇಕಿದೆ. ಭಾರತ ಮತ್ತು ಆಫ್ರಿಕಾ ಒಳಗೊಂಡು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇಂದಿಗೂ ಸುಮಾರು 30 ಮಿಲಿಯನ್‌ನಷ್ಟು ಮಹಿಳೆಯರು ಅಸುರಕ್ಷಿತವಾದ, ಅವೈಜ್ಞಾನಿಕವಾದ ಸ್ಥಿತಿಯಲ್ಲಿಯೇ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ವಿಶ್ವದಲ್ಲಿ ಸುಮಾರು 45 ಮಿಲಿಯನ್‌ಗಿಂತಲೂ ಹೆಚ್ಚಿನ ಪ್ರಮಾಣದ ಮಹಿಳೆಯರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸುಮಾರು 200 ಮಿಲಿಯನ್‌ನಷ್ಟು ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಲು ಇಷ್ಟಪಟ್ಟರೂ ಅವರಿಗೆ ಆ ದಿಶೆಯಲ್ಲಿ ಮಾರ್ಗದರ್ಶನ ಮತ್ತು ಸೌಕರ್ಯಗಳ ಕೊರತೆಯ ಜೊತೆಗೆ ಕಾನೂನಿನ ತೊಡಕುಗಳೂ ಇವೆ. ಮಹಿಳೆಯರ ಲೈಂಗಿಕ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ 2016ರಲ್ಲಿ ಜಾಗತಿಕ ಮಟ್ಟದಲ್ಲಿ ಗಟ್‌ ಮ್ಯಾಶರ್‌ ಮತ್ತು ಲ್ಯಾನ್ಸೆಟ್‌ ಎನ್ನುವ ಸಮಿತಿಯೊಂದನ್ನು ರಚಿಸಲಾಗಿತ್ತು. ಅದು ತನ್ನ ವರದಿಯಲ್ಲಿ ಸ್ಪಷ್ಟವಾಗಿ ಇಲ್ಲಿಯವರೆಗಿನ ಮಹಿಳೆಯ ಲೈಂಗಿಕ ಸುರಕ್ಷತೆ ಮತ್ತು ಆರೋಗ್ಯದ ವಿಷಯವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳು ಬಹುತೇಕವಾಗಿ ಯಾವುದೋ ಒಂದು ಕಾರ್ಯಕ್ರಮದ ನಕಲಿನಂತೆ ಇಲ್ಲವೇ ಅಸಮರ್ಥವಾಗಿರುವಂತೆ ತೋರುತ್ತವೆ ಎಂದು ಸ್ಪಷ್ಟಪಡಿಸಿದೆ. ಅತ್ಯಂತ ಸಮರ್ಪಕ ಮತ್ತು ವಿಭಿನ್ನ ನೆಲೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ, ನಿರಂತರವಾಗಿ ಅವುಗಳನ್ನು ಕಾರ್ಯಾಚರಣೆಗೆ ತರಲು ಪ್ರಯತ್ನಿಸಿದರೆ 2030ರ ವೇಳೆಗೆ ಈ ವಲಯದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಘೋಷಿಸಲಾಗಿದೆ. 

ಗಟ್‌ ಮ್ಯಾಶರ್‌ ಮತ್ತು ಲ್ಯಾನ್ಸೆಟ್‌ ಸಮಿತಿ ಅತಿ ಮುಖ್ಯವಾಗಿ ಮಹಿಳೆಯ ಲೈಂಗಿಕ ಆರೋಗ್ಯ, ಜನನ ನಿಯಂತ್ರಣ ವಿಧಾನಗಳ ಬಗ್ಗೆ ತಿಳುವಳಿಕೆ ಮತ್ತು ಪೂರೈಕೆ. ನವಜಾತ ಶಿಶುವಿನ ಆರೈಕೆ, ಏಡ್ಸ್‌ನಂತಹ ಲೈಂಗಿಕ ರೋಗಗಳಿಗೆ ಚಿಕಿತ್ಸೆ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ಇವುಗಳ ಜೊತೆಗೆ ಲೈಂಗಿಕ ಶಿಕ್ಷಣ, ಸುರಕ್ಷಿತ ಗರ್ಭಪಾತ, ಸಾಂಕ್ರಮಿಕ ಲೈಂಗಿಕ ರೋಗಗಳ ನಿಯಂತ್ರಣ, ಲೈಂಗಿಕ ಆರೋಗ್ಯದ ಬಗ್ಗೆ ಆಪ್ತ ಸಮಾಲೋಚನೆ, ಲಿಂಗಾಧಾರಿತ ತಾರತಮ್ಯಗಳ ನಿವಾರಣೆ, ಬಂಜೆತನ ಮುಂತಾದವುಗಳ ಬಗ್ಗೆ ಗಮನ ಹರಿಸಲು ಸೂಚಿಸಿತು. ವಿಶ್ವದ ಬಹುತೇಕ ಕಡೆಗಳಲ್ಲಿ ಮಹಿಳೆಯ ಸ್ಥಿತಿಗತಿ ಈಗಲೂ ಅಷ್ಟೊಂದು ಹಿತಕರವಾಗಿಲ್ಲ. ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ದೇಶಗಳಲ್ಲಿಯ ಸ್ಥಿತಿ ಇನ್ನಷ್ಟು ಸಂಕೀರ್ಣವಾಗಿದೆ. ನಮ್ಮ ದೇಶದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-16ರ ಕೆಲವು ಅಂಕಿ ಅಂಶಗಳನ್ನು ಗಮನಿಸಿದರೆ ನಮಗೆ ನಮ್ಮ ದೇಶ ಮತ್ತು ರಾಜ್ಯದ ಮಹಿಳೆಯರ ಅರೋಗ್ಯದ ಸ್ಥಿತಿಗತಿಯ ಬಗ್ಗೆ ಮನದಟ್ಟಾಗುವುದು. ಮಹಿಳೆ ಎಲ್ಲ ವಲಯಗಳಲ್ಲಿ ತನ್ನ ಸಾಧನೆಯನ್ನು ತೋರಿದ್ದರೂ ಸಾಕ್ಷರತೆಯ ವಿಷಯವಾಗಿ ಈಗಲೂ ಅಲ್ಲೊಂದು ಅಂತರ ಇದ್ದೇ ಇದೆ. ಈ ಸಮೀಕ್ಷೆಯ ಪ್ರಕಾರ ಗ್ರಾಮೀಣ ಭಾಗಗಳಲ್ಲಿ ಈಗಲೂ ಪುರುಷ ಮತ್ತು ಮಹಿಳೆಯರ ಸಾಕ್ಷರತಾ ಪ್ರಮಾಣದಲ್ಲಿ ಶೇಕಡಾ 21 ಪ್ರತಿಶತ ಅಂತರಗಳಿವೆ.

Advertisement

ಗ್ರಾಮೀಣ ಮಹಿಳೆಯ ಸಾಕ್ಷರತೆ 61.5 ಪ್ರತಿಶತವಿದ್ದರೆ, ಪುರುಷರ ಪ್ರಮಾಣ 82.6ರಷ್ಟಿದೆ. 18 ವರ್ಷ ವಯೋಮಿತಿಯೊಳಗೆ ಮದುವೆಯಾದವರ ಪ್ರಮಾಣ 26 ಪ್ರತಿಶತದಷ್ಟಿದೆ. ಶಿಶು ಮರಣ ಪ್ರಮಾಣ ದೇಶವ್ಯಾಪಿ 1000ಕ್ಕೆ 41ರಷ್ಟಿದೆ. ರಾಜ್ಯದಲ್ಲಿ ಆ ಪ್ರಮಾಣ 28ರಷ್ಟಿದೆ. ಈಗಲೂ ಸುಮಾರು 3 ಪ್ರತಿಶತದಷ್ಟು ಮಹಿಳೆಯರು ಮನೆಯಲ್ಲಿಯೇ ಸೂಲಗಿತ್ತಿಯರ ನೆರವಿನಿಂದ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಸುಮಾರು 8 ಪ್ರತಿಶತ ಮಹಿಳೆಯರು 15-19 ವರ್ಷ ವಯೋಮಿತಿಯೊಳಗಡೆ ತಾಯಂದಿರಾಗುತ್ತಿದ್ದಾರೆ. ರಾಜ್ಯದ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಸಾಂಕ್ರಾಮಿಕ ಲೈಂಗಿಕ ರೋಗಗಳಾದ ಎಚ್‌.ಐ.ವಿ, ಏಡ್ಸ್‌ ಬಗ್ಗೆ ಸರಿಯಾಗಿ ತಿಳಿದಿರುವವರ ಪ್ರಮಾಣ ಕೇವಲ 9 ಪ್ರತಿಶತದಷ್ಟಿದೆ. ಇನ್ನು ದೇಶದಲ್ಲಿ 51 ಪ್ರತಿಶತ ಗ್ರಾಮೀಣ ಮಹಿಳೆಯರು ಮತ್ತು 57 ಪ್ರತಿಶತ ನಗರ ಮಹಿಳೆಯರು ಜನನ ನಿಯಂತ್ರಣ ವಿಧಾನಗಳನ್ನು ಬಳಸುವ ಬಗ್ಗೆ ಈ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 

ಒಂದು ವಿಶಿಷ್ಟ ಸಂಗತಿಯೆಂದರೆ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಜನನ ನಿಯಂತ್ರಣ ವಿಧಾನಗಳನ್ನು ಬಳಸುವವರ ಪ್ರಮಾಣ ನಗರ ಪ್ರಮಾಣಕ್ಕಿಂತಲೂ ಹೆಚ್ಚಿಗೆ ಇರುವ ಬಗ್ಗೆ ಸಮೀಕ್ಷೆಯಲ್ಲಿ ಬಯಲಾಗಿದೆ. ರಾಜ್ಯದ ಗ್ರಾಮೀಣ ಭಾಗದ 54.5 ಪ್ರತಿಶತ ಮಹಿಳೆಯರು ಜನನ ನಿಯಂತ್ರಣ ವಿಧಾನಗಳನ್ನು ಬಳಸಿದರೆ, ನಗರವಾಸಿಗಳು 48 ಪ್ರತಿಶತದಷ್ಟು ಜನನ ನಿಯಂತ್ರಣ ವಿಧಾನಗಳನ್ನು ಬಳಸುವದಿದೆ. ಮಹಿಳೆಯರ ಪಾಲಿಗೆ ರಕ್ತಹೀನತೆ ಎನ್ನುವುದು ಒಂದು ಸಾಮಾನ್ಯ ಸ್ಥಿತಿ ಎನ್ನುವಂತಾಗಿದೆ. ರಾಜ್ಯದಲ್ಲಿ ಬಹುತೇಕವಾಗಿ ನಮ್ಮ ಮಹಿಳೆಯರು 44 ಪ್ರತಿಶತದಷ್ಟು ರಕ್ತ ಹೀನತೆಯಿಂದ ಬಳಲುವ ಸ್ಥಿತಿಯಲ್ಲಿದ್ದಾರೆ. 6 ತಿಂಗಳಿಂದ 5 ವರ್ಷದವರೆಗಿನ ಮಕ್ಕಳಲ್ಲಿಯೂ ಈ ರಕ್ತಹೀನತೆಯ ಸಮಸ್ಯೆಯಿದೆ. ಸುಮಾರು 60.9 ಪ್ರತಿಶತ ಮಕ್ಕಳು ರಕ್ತಹೀನತೆಯಿಂದ ಬಳಲುವ ಬಗ್ಗೆ 2015-16ರ ಸಮೀಕ್ಷೆ ವರದಿ ಮಾಡಿದೆ. ಈ ಸಮೀಕ್ಷೆಯ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದಾಗ ನಮ್ಮ ಮಹಿಳೆಯ ಆರೋಗ್ಯದ ಸ್ಥಿತಿಗತಿಗಳು ನಿರೀಕ್ಷಿತ ಮಟ್ಟದಲ್ಲಿಲ್ಲ. 2005-06ರಲ್ಲಿ ಮಾಡಲಾದ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯನ್ನು ಗಮನಿಸಿ ಈಗ 2015-16ರ ಅಂಕಿ-ಅಂಶಗಳನ್ನು ನೋಡಿದರೆ, ಮಹತ್ತರವಾದ ಬದಲಾವಣೆಗಳು ಮಹಿಳೆಯರ ಆರೋಗ್ಯದ ಕ್ಷೇತ್ರದಲ್ಲಿ ಆಗಿಲ್ಲ. ಆಗಬೇಕಾದದ್ದು ಇನ್ನೂ ಬಹಳಷ್ಟಿದೆ. ಮಹಿಳಾ ಆರೋಗ್ಯ ಎನ್ನುವುದು ಮಹಿಳಾ ಸಬಲೀಕರಣದ ಮೊದಲ ಆದ್ಯತೆಯಾಗಬೇಕಿದೆ.

– ಡಾ| ಎಸ್‌.ಬಿ.ಜೋಗುರ

Advertisement

Udayavani is now on Telegram. Click here to join our channel and stay updated with the latest news.

Next