Advertisement

ಮಹಿಳಾ ಸ್ವಾತಂತ್ರ್ಯ ಸಂರಕ್ಷಕ ವ್ಯಕ್ತಿ ನಿಮ್ಮ ಪ್ರತಿನಿಧಿಯಾಗಲಿ

01:03 PM Sep 17, 2017 | |

ವಿಜಯಪುರ: ಮಹಿಳಾ ಸ್ವಾತಂತ್ರ್ಯ ರಕ್ಷಣೆ ಮಾಡುವ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಮಾತ್ರವೇ ಮಹಿಳೆಯರು ಮತದಾನ
ಮಾಡಬೇಕು. ಬದಲಾಗಿ ಆಮಿಷ ಹಾಗೂ ಪೂರ್ವಾಗ್ರಹಗಳಿಗೆ ಬಲಿಯಾಗಬಾರದು ಎಂದು ರಾಜ್ಯ ಹಿಂದುಳಿದ ವರ್ಗಗಳ
ಆಯೋಗದ ಮಾಜಿ ಅಧ್ಯಕ್ಷ ರವಿವರ್ಮ ಕುಮಾರ ಹೇಳಿದರು.

Advertisement

ಶನಿವಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಜ್ಞಾನಶಕ್ತಿ ಆವರಣದ ಡಾ| ಬಿ.ಆರ್‌. ಅಂಬೇಡ್ಕರ್‌ ಅಧ್ಯಯನ
ಕೇಂದ್ರದಲ್ಲಿ ಪ.ಜಾ.-ಪ.ಪಂ. ಘಟಕ, ಸಮಾನ ಅವಕಾಶ ಕೋಶ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಇವರ ಸಂಯುಕ್ತಾಶ್ರಯದಲ್ಲಿ ಡಿ.ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ಮತ್ತು ಮಹಿಳೆಯರ ಸಬಲೀಕರಣ ವಿಶೇಷ ಉಪನ್ಯಾಸ ಮತ್ತು ಪ.ಜಾ-ಪ.ಪಂ. ಸಂಶೋಧನಾ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಅನಾದಿ ಕಾಲದಿಂದಲೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಮಹಿಳೆಯರು ಸಂವಿಧಾನ ನೀಡಿರುವ ಕಾನೂನು, ಹಕ್ಕು-ಕರ್ತವ್ಯಗಳ ಮೂಲಕ ಮಹಿಳಾ ಸಬಲೀಕರಣ ಹೊಂದಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಭಾರತದಲ್ಲಿ 29 ಸಾವಿರ ಹಳ್ಳಿಗಳಿವೆ. ಆದರೆ ಯಾವ ಒಂದು ಹಳ್ಳಿಯಲ್ಲಿಯೂ ಸಹ ನಾವು ದಲಿತರನ್ನು ಕಂಡು ಬರುವುದಿಲ್ಲ. ದಲಿತರನ್ನು ಇಂದಿಗೂ ಊರ ಹೊರಗೆಯೇ ಇಟ್ಟಿರುವುದು ದುರ್ದೈವದ ಸಂಗತಿ ಎಂದು ಅವರು ವಿಷಾದಿಸಿದರು.

ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಅಕ್ಕಮಹಾದೇವಿಯ ಹಾಗೆ ಪ್ರಬಲರಾಗಿ, ಪ್ರಬುದ್ಧರಾಗಿ, ಪ್ರತಿಭಾವಂತರಾಗಿ, ನಿರ್ಭಿತಿಯಿಂದ ಕೆಲಸ ಮಾಡಬೇಕು. ಸಮಾಜದಲ್ಲಿ ಸಮಾನ ಸ್ಥಾನಮಾನ ಪಡೆದು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಸಬಿಹಾ ಮಾತನಾಡಿ, ದೇವರಾಜ ಅರಸು ಅವರು ಜಾತಿ ಮತ್ತು ವರ್ಗ ಅಸಮಾನತೆ ಹೊಗಲಾಡಿಸುವಲ್ಲಿ ಹಗಲಿರುಳು ಶ್ರಮಿಸಿದವರು. ಈ ನಿಟ್ಟಿನಲ್ಲಿ ರವಿವರ್ಮ ಕುಮಾರ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು. 

ಕುಲಸಚಿವ ಕೆ.ಪಿ. ಶ್ರೀನಾಥ, ಸಮಾನ ಅವಕಾಶ ಘಟಕದ ಸಂಯೋಜಕ ಡಾ|ಶ್ರೀನಿವಾಸ ವೇದಿಕೆಯಲ್ಲಿದ್ದರು. ಈ ವೇಳೆ ಪ.ಜಾ-ಪ.ಪಂ. ಸಂಶೋಧನಾ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಮತ್ತು ಕ್ರಾಂತಿ ಗೀತೆ ಹಾಡಿದರು. ಪ.ಜಾ.-ಪ.ಪಂ. ಘಟಕದ ನಿರ್ದೇಶಕ ಡಾ|ಸಕ್ಪಾಲ್‌ ಹೂವಣ್ಣ ಸ್ವಾಗತಿಸಿದರು.

ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಓಂಕಾರ ಕಾಕಡೆ ಪರಿಚಯಿಸಿದರು. ಸಹಾಯಕ ನಿರ್ದೇಶಕ ಡಾ| ಹನುಮಂತಯ್ಯ ಪೂಜಾರಿ ನಿರೂಪಿಸಿದರು. ಸಂಶೋಧನಾ ವಿದ್ಯಾರ್ಥಿನಿ ಪ್ರತಿಭಾ ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next