Advertisement

ಬಜೆಟ್‌ ತಾರತಮ್ಯ: ಮಹಿಳಾ ಮೀನು ಮಾರಾಟಗಾರರ ಪ್ರತಿಭಟನೆ 

06:00 AM Jul 14, 2018 | Team Udayavani |

ಉಡುಪಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಮೀನುಗಾರರನ್ನು ಕಡೆಗಣಿಸಲಾಗಿದೆ. ಸಾಲಮನ್ನಾ, ಬಡ್ಡಿ ರಹಿತ ಸಾಲ ಸೇರಿದಂತೆ ಯಾವುದೇ ಪ್ರಯೋಜನ ದೊರೆತಿಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿ ಉಡುಪಿಯಲ್ಲಿ  ಮೀನು ಮಾರಾಟಗಾರ ಮಹಿಳೆಯರು ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

Advertisement

ಬೆಳಗ್ಗಿನಿಂದ ಸಂಜೆವರೆಗೂ ರಾಜ್ಯ ಸರಕಾರ, ಮುಖ್ಯಮಂತ್ರಿ ವಿರುದ್ಧದ ಘೋಷ ವಾಕ್ಯಗಳನ್ನು ಹೊಂದಿದ್ದ ಫ‌ಲಕಗಳನ್ನು ತಮ್ಮ ಮೀನಿನ ಬುಟ್ಟಿಗಳ ಪಕ್ಕ ಇಟ್ಟು ನೂರಕ್ಕೂ ಅಧಿಕ ಮಹಿಳೆಯರು ಪ್ರತಿಭಟನೆ ಸಲ್ಲಿಸಿದರು.
 
ಸಾಲಮನ್ನಾ ಮಾಡಿ 
ಮಾಧ್ಯಮದವರ ಜತೆ ಮಾತನಾಡಿದ ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್‌ ಅವರು “ಈ ಬಾರಿಯ ಬಜೆಟ್‌ನಲ್ಲಿ ಮೀನುಗಾರರಿಗೆ ಯಾವುದೇ ಯೋಜನೆ, ಅನುದಾನ 
ಘೋಷಿಸಿಲ್ಲ. 

ರೈತರ ಸಾಲಮನ್ನಾ ಮಾಡಿರುವಂತೆ ಮೀನುಗಾರರ ಸಾಲಮನ್ನಾ ಮಾಡಬೇಕು. ಈ ಹಿಂದೆ ಘೋಷಿಸಿದಂತೆ ಶೇ.3ರ ಬಡ್ಡಿದರದಲ್ಲಿ ಸಾಲ ನೀಡಬೇಕು. ಬಡ್ಡಿರಹಿತ ಸಾಲ ನೀಡಲು ಕ್ರಮ ಕೈಗೊಳ್ಳಬೇಕು. ಸಮುದ್ರ ಕೊರೆತ ತಡೆಗಟ್ಟಬೇಕು’ ಎಂದು ಹೇಳಿದರು.

ಕಡಲ ಮಕ್ಕಳ ಒಡಲು ಬಗೆದ ಸರಕಾರ
“ಕರಾವಳಿಗರ ಜತೆ ತಾರತಮ್ಯ ನಿಲ್ಲಲಿ’, “ಕಡಲ ಮಕ್ಕಳ ಒಡಲು ಬಗೆದ ಸರಕಾರ’, “ಮೂರು ಜಿಲ್ಲೆಗಳ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಧಿಕ್ಕಾರ’,”ಮೀನುಗಾರರ ಸಮಸ್ಯೆಗೆ ಸ್ಪಂದಿಸದ, ಸಬ್ಸಿಡಿ ದರದಲ್ಲಿ ಡೀಸೆಲ್‌ ನೀಡದೇ, ಡೀಸೆಲ್‌ ಬೆಲೆ ಏರಿಸಿದ ಬಜೆಟ್‌ ನಮಗೆ ಬೇಕಿಲ್ಲ’, “ಕರಾವಳಿಯ ದೇವಸ್ಥಾನಗಳ ದುಡ್ಡು ಬೇಕು ಜನರು ಬೇಡವೆ?’, “ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಒದಗಿಸಿ’, “ಮೀನುಗಾರ ಮಹಿಳೆಯರ ಸಾಲ ಮನ್ನಾ ಯಾಕೆ ಮಾಡುತ್ತಿಲ್ಲ?’,”ನಾವು ಕರ್ನಾಟಕ ರಾಜ್ಯದಲ್ಲಿ ಇಲ್ಲವೆ? ಮೊದಲಾದ ಘೋಷವಾಕ್ಯಗಳಿದ್ದ ಫ‌ಲಕಗಳನ್ನು ಮೀನುಗಾರ ಮಹಿಳೆಯರು ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.