Advertisement

Women empowerment: ಕಾಯಿ ಸುಲಿದಂತೆಲ್ಲ ಕಷ್ಟವೂ ಕಳೆಯಿತು!

12:51 PM Oct 15, 2023 | Team Udayavani |

ಶ್ರಮ -ಕೌಶಲ್ಯ ಆಧಾರಿತ ತೆಂಗಿನ ಮರವೇರುವ ದುಡಿಮೆಯಲ್ಲಿ ಮಹಿಳೆಯರ ಪಾರುಪತ್ಯದ ಕಥೆಯನ್ನು ನೀವು ಈಗಾಗಲೇ ಕೇಳಿರಬಹುದು. ಕಾಸರಗೋಡು -ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತರಬೇತಿ ಪಡೆದ ನಾಲ್ಕೈದು ಯುವತಿಯರು ಸರಳ ಕೈಯಂತ್ರದ ಮೂಲಕ ತೆಂಗಿನ ಮರವೇರಿ ಕಾಯಿ ಕೀಳುವ ಯಶೋಗಾಥೆ ಈಗಾಗಲೇ ಜನಜನಿತ.

Advertisement

ಹಾಗೆ ನೋಡಿದರೆ ಎಂಬತ್ತು -ನೂರಡಿ ಏರಿ ಕಾಯಿ ಕೀಳುವ ಕೆಲಸ ಭೂಮಿಯ ಮೇಲೆ ನಿಂತು ಅದರ ಸಿಪ್ಪೆ ತೆಗೆಯುವುದಕ್ಕಿಂತ ಕಷ್ಟಕರ. ಈ ಕಾಯಕದಲ್ಲಿ ಕುಶಲಿ ಮಹಿಳೆಯರು ಇಲ್ಲವೇ ಇಲ್ಲ ಎಂಬಷ್ಟು ಕನಿಷ್ಠ. ಅಡಿಕೆ ಸುಲಿಯುವ ಮಹಿಳಾಮಣಿಗಳಾದರೂ ಸಾಕಷ್ಟು ಇದ್ದಾರೆ. ಪುರುಷರಿಗೆ ಸರಿಗಟ್ಟುವಷ್ಟು ಸುಲಿಯುತ್ತಾರೆ.

ಓದಿದ್ದೇ ಒಂದು, ಬದುಕು ಇನ್ನೊಂದು…

ಆದರೆ ಇಲ್ಲೊಬ್ಬರು ದಿನಕ್ಕೆ ಅದರಲ್ಲೂ ಮಧ್ಯಾಹ್ನದವರೆಗೆ ಬರೀ ಅರ್ಧ ದಿನಕ್ಕೆ ಸಾವಿರದ ಇನ್ನೂರರವರೆಗೆ ತೆಂಗಿನಕಾಯಿ ಸುಲಿದು ಕಾಯಿಗೊಂದು ರೂಪಾಯಿ ಮಜೂರಿ ಸಂಪಾದಿಸಿ ಸ್ವಾವಲಂಬಿಯಾಗಿದ್ದಾರೆ.

ಹೆಸರು ಹರಿಣಾಕ್ಷಿ. ವಾಸ ಕೇರಳ- ಕರ್ನಾಟಕದ ಗಡಿ ಪ್ರದೇಶವಾದ ವಾಣಿ ನಗರ. ವಯಸ್ಸು 40. ಕೇರಳದ ಇಡುಕ್ಕಿಯಲ್ಲಿ ಆಯುರ್ವೇದ ಥೆರಪಿ ಓದಿದ ಈಕೆ ಚೆನ್ನೈಯಲ್ಲಿ ಒಂದಷ್ಟು ಸಮಯ ದುಡಿದು, ಮುಂದೆ ಬೆಂಗಳೂರಿಗೆ ಬಂದು ಥೆರಪಿಯದ್ದೇ ಉದ್ಯೋಗ ಪಡೆಯುತ್ತಾರೆ. ಗಂಡ ಹೆಂಡತಿ ಒಂದೇ ಸಂಸ್ಥೆಯಲ್ಲಿ ದುಡಿಯುತ್ತಾರೆ. ತಿಂಗಳಿಗೆ ಹನ್ನೆರಡು ಸಾವಿರ ಪಗಾರ. ಜೊತೆಗೆ ಊಟ, ವಸತಿ ಉಚಿತ.

Advertisement

ಮಧ್ಯಾಹ್ನಕ್ಕೆ ಮುಕ್ತಾಯ!

ಬೆಂಗಳೂರಲ್ಲಿ ಮಗುವನ್ನು ಒಳ್ಳೆಯ ಸ್ಕೂಲಿಗೆ ಸೇರಿಸಲು 30-40 ಸಾವಿರ ಡೊನೇಶನ್‌ ಕೊಡಲಾಗದೆ ಗಂಡ -ಹೆಂಡತಿ ಊರಿಗೆ ವಾಪಸಾಗಿ ಒಂದು ಚಿಕ್ಕ ಮನೆ ಮಾಡಿ ಮಗುವನ್ನು ಇಲ್ಲೇ ಶಾಲೆಗೆ ಸೇರಿಸಿದ್ದಾರೆ. ಗಂಡ ತಿರುಗಿ ಬೆಂಗಳೂರಿಗೆ ಹೋದರೆ ಹೆಂಡತಿ ಊರಲ್ಲೇ ಇದ್ದು ಎರಡು ಮಕ್ಕಳನ್ನ ಸಾಕಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ. ಬರುತ್ತೇನೆ ಎಂದು ಹೋದ ಯಜಮಾನ ಬರದೇ ಇದ್ದಾಗ ಕುಟುಂಬ ಪೊರೆಯುವ ಪೂರ್ತಿ ಜವಾಬ್ದಾರಿ ಇವರದ್ದೇ ಆಗುತ್ತದೆ. ಬದುಕಿಗಾಗಿ ಹೊಸ ದಾರಿ ಹೊಂಚುವಾಗ ಕಾಣಿಸಿದ್ದೇ ಯಾವ ಮಹಿಳೆಯೂ ಮಾಡದಿರುವ ತೆಂಗಿನಕಾಯಿ ಸುಲಿವ ಕಾಯಕ! ಸುಳಿಭರ್ಚಿ­ಯೊಂದನ್ನು ಖರೀದಿಸಿರುವ ಹರಿಣಾಕ್ಷಿ ಅದನ್ನು ಸ್ಕೂಟಿಯ­ಲ್ಲಿಟ್ಟುಕೊಂಡು ರೈತರಲ್ಲಿಗೆ ತೆರಳಿ ಮಧ್ಯಾಹ್ನದವರೆಗೆ ಮಾತ್ರ ದುಡಿಯುತ್ತಾರೆ. ಅಷ್ಟರಲ್ಲಿ ಅವರ ಆದಾಯ ಸಾವಿರದ ಗಡಿಯನ್ನು ದಾಟುತ್ತದೆ.

ಬೇಸಿಗೆಯಲ್ಲಿ ಬಿಡುವಿಲ್ಲದ ದುಡಿಮೆ

ಬೇಸಿಗೆ ತುಂಬಾ ಹರುಣಾಕ್ಷಿಗೆ ಬಿಡುವಿಲ್ಲ. ಖಾಯಂ ತೆಂಗಿನಕಾಯ ಖರೀದಿದಾರರೊಬ್ಬರಲ್ಲಿ ದುಡಿಯುವ ಇವರು,ಅಲ್ಲಿ ರಾಶಿ ರಾಶಿ ಕಾಯಿಯನ್ನು ಸುಲಿದು ಸಿದ್ದಗೊಳಿಸುತ್ತಾರೆ. ಸಿಪ್ಪೆ ಬೇಕೆನ್ನುವರ ಮನೆಗೆ ಹೋಗಿ ಅಲ್ಲೂ ಸುಲಿಯುತ್ತಾರೆ. ಮಳೆಗಾಲದಲ್ಲಿ ದುಡಿಮೆ ಸ್ವಲ್ಪ ಕಡಿಮೆ. ಅದಕ್ಕಾಗಿ ಒಂದು ಹಸು ಕಟ್ಟಿ ಹಾಲು ಮಾರಿ ಆ ಸಮಯದ ಕಷ್ಟವನ್ನು ಸರಿದೂಗಿಸುತ್ತಾರೆ. ವಾಣಿ ನಗರದಿಂದ ಸುಮಾರು 20 -30 ಕಿಲೋ ಮೀಟರ್‌ ಸರಹದ್ದಿನಲ್ಲಿ ಎÇÉೇ ಯಾರೇ ಕರೆದರೂ ಹರಿಣಾಕ್ಷಿ ಹೇಳಿದ ದಿನ ಹಾಜರಿರುತ್ತಾರೆ.

ಮಧ್ಯಾಹ್ನದ ನಂತರ ವಿರಾಮ. ಬಗ್ಗಿಕೊಂಡು ಕೈಯೊತ್ತಿ ದುಡಿಯುವ ಈ ಕಾಯಕದಲ್ಲಿ ಸೊಂಟದ ನೋವು ತುಂಬಾ. ಅದಕ್ಕಾಗಿ ಅರ್ಧ ದಿನದ ದುಡಿತ. ಉಳಿದ ಅವಧಿ ಮಕ್ಕಳ ಆರೈಕೆ, ಹಸುವಿನ ಪೋಷಣೆಯಲ್ಲಿ ವ್ಯಯವಾಗುತ್ತದೆ ಎನ್ನುವ ಹರಿಣಾಕ್ಷಿಯ ಜೀವನದಾರಿ ಬೇರೆಯವರಿಗೂ ಮಾದರಿಯಾಗಲಿ.

ಕಾರ್ಯಾಗಾರ ನಡೆಯಲಿ…:

ದೈಹಿಕ ಕ್ಷಮತೆ ಇರುವ ಗ್ರಾಮೀಣ ಹೆಣ್ಣು ಮಕ್ಕಳಿಗೆ ಇದೊಂದು ವಿಪುಲ ಅವಕಾಶ ಇರುವ ಉದ್ಯೋಗವಾಗಬಹುದು. ಕನಿಷ್ಠ ದಿನಕ್ಕೆ ಒಂದೂವರೆ ಸಾವಿರದಷ್ಟು ತೆಂಗಿನಕಾಯಿ ಸುಲಿದ‌ರೆ ತಿಂಗಳಿಗೆ 30 ಸಾವಿರ ಆದಾಯ ನಿಶ್ಚಿತ. ಇದಕ್ಕಿಂತ ಹೆಚ್ಚು ಆದಾಯ ತರುವ ಬೇರೆ ಉದ್ಯೋಗಗಳು ಹಳ್ಳಿಗಳಲ್ಲಿ ಬಹುಶಃ ಇಲ್ಲ. ಯಾವ ಪದವಿಯ ಅಗತ್ಯವೂ ಇಲ್ಲದ ಕನಿಷ್ಠ ತರಬೇತಿಯಿಂದ ಸಾಧ್ಯವಾಗುವ ಕಾಯಿ ಸುಲಿಯುವ ಈ ಕಾಯಕದ ಕುರಿತು ಗ್ರಾಮ್ಯ ಪರಿಸರದಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರಗಳಾಗಬೇಕು. ಹರಿಣಾಕ್ಷಿಯವರ ಮಾದರಿಯಲ್ಲೇ ಉಳಿದವರು ಕಲಿಯಬೇಕು.

ಲೇಖನ:

ಪವಿತ್ರಾ ರೈ ದೇರ್ಲ

ಫೋಟೋ: 

ಶೈಲಜಾ ಶ್ರೀ ಪಡ್ರೆ

Advertisement

Udayavani is now on Telegram. Click here to join our channel and stay updated with the latest news.

Next