ಮಂಗಳೂರು: ಮಹಿಳೆಯ ಸಾಧನೆಯನ್ನು ಮನೆಯಿಂದ ಗುರುತಿಸಬೇಕು. ತಾಯಿಯ ಮೂಲಕ ಇದು ಆರಂಭವಾಗುತ್ತದೆ. ಮಗು ಜನಿಸುವುದಕ್ಕಿಂತಲೂ ಮೊದಲೇ ಆಕೆಯ ಕೆಲಸ ಆರಂಭವಾಗುತ್ತದೆ. ತಂದೆಯದ್ದು ಜವಾಬ್ದಾರಿಯ ಪಾತ್ರವಾದರೆ, ಸಂಸ್ಕಾರ, ಪಾಲನೆ ತಾಯಿ ಮಾಡುತ್ತಾಳೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ವತಿಯಿಂದ ಬುಧವಾರ ಪುರಭವನದಲ್ಲಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆ ಮತ್ತು ಮಹಿಳಾ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಸರಕಾರದ ಯೋಜನೆಗಳನ್ನು ಯಶಸ್ವಿಯಾಗಿ ಮಹಿಳೆಯರಿಗೆ ತಲುಪಿಸುವಲ್ಲಿ ಒಕ್ಕೂಟ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದು, ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು.
ಒಕ್ಕೂಟದ 35 ವರ್ಷಗಳ ಇತಿಹಾಸವನ್ನು ತಿಳಿಸುವ ಯಶೋನಿಧಿ ಸ್ಮರಣ ಸಂಚಿಕೆಯನ್ನು ಬ್ಯಾಂಕ್ ಆಫ್ ಬರೋಡ ಜನರಲ್ ಮ್ಯಾನೇಜರ್ ಮತ್ತು ವಲಯ ಹೆಡ್ ಗಾಯತ್ರಿ ಆರ್. ಬಿಡುಗಡೆಗೊಳಿಸಿದರು. ಉಪಮೇಯರ್ ಪೂರ್ಣಿಮಾ ಸಾಧಕರನ್ನು ಸಮ್ಮಾನಿಸಿದರು. ಶ್ರೀ ಗುರು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಒಕ್ಕೂಟದ ಲೋಗೋ ಅನಾವರಣ ಮಾಡಿದರು. ಪ್ರಾಂಶುಪಾಲೆ ಡಾ| ಜ್ಯೋತಿ ಚೇಳಾÂರು ದಿಕ್ಸೂಚಿ ಭಾಷಣ ಮಾಡಿದರು.
ಉಪಾಧ್ಯಕ್ಷೆ ಉಷಾ ನಾಯಕ್, ಗೌರವ ಸಲಹೆಗಾರರಾದ ಪ್ರೇಮಲತಾ ರಾವ್, ವಿಜಯಲಕ್ಷ್ಮೀ ಬಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮನೋರಮಾ ರಮೇಶನ್, ಕಾರ್ಯದರ್ಶಿ ಶಾಂತಾ ಬಂಗೇರ, ಜತೆ ಕಾರ್ಯದರ್ಶಿ ರೇಣುಕಾ ಚಂದ್ರಶೇಖರ್, ಖಂಜಾಂಚಿ ಚಂದ್ರಾಕ್ಷಿ ರೈ, ಸಾಂಸ್ಕೃತಿಕ ಕಾರ್ಯದರ್ಶಿ ರೇಖಾ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಶುಭಾ ರೈ ಮೊದಲಾದವರಿದ್ದರು.
ಗೌರವಾಧ್ಯಕ್ಷೆ ಹರಿಣಿ ಸದಾಶಿವ ಪ್ರಸ್ತಾವಿಸಿದರು. ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ ಸ್ವಾಗತಿಸಿದರು.