Advertisement

ಮಹಿಳಾ ದಿನಾಚರಣೆ ವಿಶೇಷ : ಸಹಕಾರಿ ಕ್ಷೇತ್ರದ ಮಹಿಳಾ ಸಾಧಕಿ ಶಾಂತಾ ಸೋರಗಾಂವಿ

12:45 PM Mar 08, 2022 | Team Udayavani |

ರಬಕವಿ-ಬನಹಟ್ಟಿ: ಮಹಿಳೆಯರು ಇಂದು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿಯಾಗಿದೆ.

Advertisement

ಅದರಲ್ಲೂ ಮಹಿಳೆಯೊಬ್ಬರು ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಸ್ಥಳೀಯ ಶಾಂತಾ ಸೋರಗಾವಿ ದಾನೇಶ್ವರಿ ಮಹಿಳಾ ವಿದ್ಯುತ್ ಮಗ್ಗಗಳ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷೆಯಾಗಿ ೧೪ ವರ್ಷಗಳಿಂದ ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅವರು ಸಂಘದ ಅಧ್ಯಕ್ಷೆಯೂ ಹೌದು ಜೊತೆಗೆ ಸಂಘದಲ್ಲಿರುವ ಸಿಬ್ಬಂದಿಯವರ ಜೊತೆಗೂಡಿ ಕೆಲಸಗಳನ್ನು ನಿರ್ವಹಣೆ ಮಾಡುತ್ತಾರೆ.

2007-08 ರಲ್ಲಿ ಆರಂಭಗೊಂಡ ಸಂಘದಲ್ಲಿ ಇಂದು 2200 ಸದಸ್ಯೆಯರು ಇದ್ದಾರೆ. ಸಂಘವು ರೂ. 27,45,850 ಷೇರು ಬಂಡವಾಳ, ರೂ. 3,61,12,049 ಠೇವಣಿಯನ್ನು, ರೂ. 2, 84, 37, 198 ಸಾಲವನ್ನು ನೀಡಿದೆ. ಅದೇ ರೀತಿಯಾಗಿ ಅಂದಾಜು ರೂ. ೧೮ ಕೋಟಿಯಷ್ಟು ಹಣವನ್ನು ಹೂಡಿಕೆ ಮಾಡಿದೆ. ಸಂಘವು ಆರಂಭವಾದಾಗಿನಿAದ ಇಲ್ಲಿಯವರಿಗೆ ಸಂಘದ ಷೇರುದಾರರಿಗೆ ಲಾಭಾಂಶವನ್ನು ನೀಡುತ್ತ ಬಂದಿದೆ.

ಈ ಸಂಘವು ಮಹಿಳೆಯರಿಂದ ಮಹಿಳೆಯರಿಗಾಗಿ ಮತ್ತು ಮಹಿಳೆಯರಿಗೊಸ್ಕರ ಇರುವ ಸಂಘವಾಗಿದೆ.

ಸಂಘಕ್ಕೆ ಬಿಡಿಸಿಸಿ ಬ್ಯಾಂಕ್ ನಿಂದ ಜಿಲ್ಲಾ ಮಟ್ಟದ ಹಲವಾರು ಪ್ರಶಸ್ತಿಗಳು ಪಡೆದುಕೊಂಡಿದೆ. 2013-14ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಸಂಘ ಪ್ರಶಸ್ತಿ, 2014-15 ರಲ್ಲಿ ದ್ವಿತೀಯ, 2015-16 ರಲ್ಲಿ ಪ್ರಥಮ, 2017-18ರಲ್ಲಿ ತೃತೀಯ ಮತ್ತು 2018- 19 ರಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡ ಸಂಘವಾಗಿದೆ. ಪ್ರತಿವರ್ಷ ಹೆಚ್ಚಿನ ಲಾಭವನ್ನು ಗಳಿಸುವುದರ ಮೂಲಕ ಷೇರುದಾರರಿಗೆ ಅನುಕೂಲ ಮಾಡಿದೆ. ರಬಕವಿ ಬನಹಟ್ಟಿ ತಾಲ್ಲೂಕು ಗಣರಾಜ್ಯೋತ್ಸವ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ.

Advertisement

ಸಂಘವು ಇಷ್ಟೊಂದು ಯಶಸ್ವಿಯಾಗಿ ಬೆಳೆಯಬೇಕಾದರೆ ಶಾಂತಾ ಸೋರಗಾವಿಯವರ ಪರಿಶ್ರಮ ಬಹಳಷ್ಟಿದೆ. ತಮ್ಮ ಸಂಘದ ಆಡಳಿತ ಮಂಡಳಿಯ ಸದಸ್ಯೆಯರಾದ ರೇಖಾ ಮಂಡಿ, ಕಮಲಾ ಹಾರೂಗೇರಿ, ರಜನಿ ಶೇಠೆ, ಶೈಲಾ ಸವದತ್ತಿ, ಪೂರ್ಣಿಮಾ ಮುಳೆಗಾವಿ, ವಿಜಯಲಕ್ಷ್ಮಿ ಸೋರಗಾವಿ, ವಿದ್ಯಾವತಿ ಜುಂಜಪ್ಪನವರ, ಸುವರ್ಣಾ ಜಾಡಗೌಡ, ಸುಯೇನಾ ಭದ್ರನವರ, ಇಂದಿರಾ ಚಲವಾದಿ, ಪಾರ್ವತಿ ಸವದಿ ಹಾಗೂ ಕಾರ್ಯದರ್ಶಿ ಗೀತಾಂಜಲಿ ಬಾಣಕಾರ ಇವರ ಜೊತೆಗೂಡಿ ಸಂಘವನ್ನು ಬೆಳೆಸುತ್ತಿದ್ದಾರೆ.

ಸಂಘದ ಜೊತೆಗೆ ದಾನೇಶ್ವರಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ ಅಧ್ಯಕ್ಷರಾಗಿ ೧೭ ವರ್ಷಗಳಿಂದ ಸೇವೆ, ಸ್ಫೂರ್ತಿ ನಿರಂತರ ಉಳಿತಾಯ ಸಂಘದ ಅಧ್ಯಕ್ಷೆಯಾಗಿ 15 ವರ್ಷಗಳಿಂದ ಸೇವೆ, ಬೀಳಗಿಯ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ನಿರ್ದೇಶಕರಾಗಿ 23 ವರ್ಷಗಳಿಂದ ಸೇವೆಯ ಜೊತೆಗೆ ಸಮಾಜದಲ್ಲಿಯ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎನ್ನುವ ಉದ್ದೇಶದಿಂದ ಮಹಿಳೆಯರಿಗಾಗಿ ಕರ ಕುಶಲ ವಸ್ತುಗಳ ತರಬೇತಿ, ಹೊಲಿಗೆ ತರಬೇತಿ, ಬ್ಯಾಗ್ ಹೊಲಿಗೆಯ ತರಬೇತಿ, ಕಸೂತಿ ಆರೋಗ್ಯ ಸಲಹಾ ಕಾರ್ಯಕ್ರಮಗಳ ಜೊತೆಗೆ ಜಮಖಂಡಿಯ ಮಹಿಳಾ ಕಾರಾಗೃಹದಲ್ಲಿ 21 ದಿನಗಳ ಕಾಲ ಅಲ್ಲಿರುವ ಮಹಿಳಾ ಖೈದಿಗಳಿಗೆ ಕರ ಕುಶಲ ವಸ್ತುಗಳ ತರಬೇತಿಯನ್ನು ಕೂಡಾ ನೀಡಿದ್ದಾರೆ.

ಆರ್ಥಿಕ ಕ್ಷೇತ್ರ ಸಾಕಷ್ಟು ಕ್ಲಿಷ್ಟಮಯವಾಗಿರುವ ಸಂದರ್ಭದಲ್ಲಿ ಯಾವುದೆ ತೊಂದರೆ ಇಲ್ಲದ ಸಂಘವನ್ನು ಶಾಂತಾ ಸೋರಗಾವಿ ಮುನ್ನಡೆಸಿಕೊಂಡು ಬಂದಿದ್ದಾರೆ.

ಶಾಂತಾ ಸೋರಗಾವಿ ಆರ್ಥಿಕ  ಕ್ಷೇತ್ರದಲ್ಲಿ  ಇಷ್ಟೊಂದು ಸಾಧನೆಯನ್ನು ಮಾಡುವುದರ ಜೊತೆಗೆ ಸಮಾಜ ಮುಖಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಅವರು ಇನ್ನೂಳಿದ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

 

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next