Advertisement

ಸ್ವಾವಲಂಬಿ ಬದುಕಿಗೆ ರಾಜೀವಿಯ ಯಶಸ್ವಿ ಮುನ್ನುಡಿ

11:26 AM Mar 08, 2017 | Team Udayavani |

ಮಹಾನಗರ: ಹೆಸರು ರಾಜೀವಿ ರಾಮಣ್ಣ ನಾಯ್ಕ. ವೃತ್ತಿಯಲ್ಲಿ ಆಶಾ ಕಾರ್ಯಕರ್ತೆ. ಪ್ರವೃತ್ತಿಯಲ್ಲಿ ಆಟೋ ಚಾಲಕಿ. ಜತೆಗೆೆ ಗ್ರಾಮ ಪಂಚಾಯತ್‌ ಸದಸ್ಯೆ. ಒಂದು ಕೆಲಸವನ್ನೇ ಮಾಡಿದರೆ ಸಾಕಪ್ಪಾ ಎನ್ನುವ ದಿನಗಳಲ್ಲಿ ಮೂರು ಮೂರು ಜವಾಬ್ದಾರಿ ಹೆಗಲ ಮೇಲಿದ್ದರೂ ಮುಖದಲ್ಲಿ ಆಯಾಸದ ಛಾಯೆ ಲವಲೇಶವೂ ಇಲ್ಲ. ಮಂಗಳೂರು ತಾಲೂಕಿನ ಗ್ರಾಮಾಂತರ ಪ್ರದೇಶ ಎಡಪದವಿನ ರಾಜೀವಿ ಜೀವನವನ್ನು ಸವಾಲಾಗಿ ಸ್ವೀಕರಿಸಿ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದವರು. ಹತ್ತು ವರ್ಷಗಳಿಂದ ಎಡಪದವು ನಗರದಲ್ಲಿ ಆಟೋ ರಿಕ್ಷಾ ಓಡಿಸುತ್ತಾ ಜೀವನ ಬಂಡಿಯನ್ನು ಸಾಗಿಸುತ್ತಿದ್ದಾರೆ. ಪತಿ, ಮಗ ಮಂಜುನಾಥ ಮತ್ತು ಮಗಳು ಯಶೋದಾ ಅವರೊಂದಿಗೆ ಸುಖೀ ಬದುಕು ಇವರ ಕುಟುಂಬದ್ದು.

Advertisement

ಪತಿಯ ರಿಕ್ಷಾಕ್ಕೆ ಸಾರಥಿ
ಹತ್ತು ವರ್ಷಗಳ ಹಿಂದೆ ಇವರ ಪತಿ ರಾಮಣ್ಣ ನಾಯ್ಕ ರಿಕ್ಷಾ ಖರೀದಿಸಿ, ಓಡಿಸುತ್ತಿದ್ದರು. ಆದರೆ ಅನಾರೋಗ್ಯ ಕಾಡತೊಡಗಿದ ಮೇಲೆ ಬದುಕಿನ ಬಂಡಿಯ ಹೊಣೆಯನ್ನು ರಾಜೀವಿ ಹೊತ್ತರು.  ಆಗ ಅದೇ ಆಟೋ ಇವರಿಗೆ ಸಾಥ್‌ ನೀಡಿತು. ಹಾಗಾಗಿ ಪತಿಯ ಆಟೋಗೆ ಸಾರಥಿಯಾದರು. ರಿಕ್ಷಾ ಚಾಲನೆಯನ್ನು ಪತಿಯ ಸಹಕಾರದಿಂದ ಕಲಿತರು. ಮೊದಮೊದಲು ಸ್ವಲ್ಪ ಸಮಸ್ಯೆಯಾದರೂ ಬಳಿಕ ಅರಗಿಸಿಕೊಂಡೆ ಎನ್ನುತ್ತಾರೆ ರಾಜೀವಿ.

ಸೇವೆಗೆ ಸದಾ ಸಿದ್ಧರು
ಚಾಲಕಿಯಾಗಿ ಯಶಸ್ವಿಯಾದ ರಾಜೀವಿ, ಆಶಾ ಕಾರ್ಯಕರ್ತೆಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಆದ ಕಾರಣ ಮಹಿಳೆಯರ ಬದುಕು- ಬವಣೆಗಳನ್ನು ಹತ್ತಿರದಿಂದ ನೋಡಿದವರು. ಬೆಳಗ್ಗೆ 8.30ಕ್ಕೆ ಆಟೋಸ್ಟಾಂಡ್‌ಗೆ ಬಂದರೆ ಸಂಜೆ 6 ಗಂಟೆವರೆಗೂ ಸೇವೆ ತಪ್ಪುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ, ರಾತ್ರಿ ವೇಳೆಯಲ್ಲೂ ರಿಕ್ಷಾ ಸೇವೆ ನೀಡುತ್ತಾರೆ. ವಿಶೇಷವಾಗಿ ರಾತ್ರಿ ಹೊತ್ತಲ್ಲಿ ಹೆರಿಗೆಯಂತಹ ತುರ್ತು ಸಂದರ್ಭಗಳಿಗೆ ಸೇವೆ ನೀಡಲು ಸದಾ ಸಿದ್ಧ.

ಗ್ರಾಪಂ ಸದಸ್ಯೆಯೀಕೆ!
ರಾಜೀವಿ ಅವರು ಎಡಪದವು ಗ್ರಾ.ಪಂ.ನಲ್ಲಿ ಸದಸ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡು ಬಾರಿ ಪಂಚಾಯತ್‌ಗೆ ಆಯ್ಕೆಯಾದ ಇವರು ಅಲ್ಲೂ ಸೇವಾ ಕೈಂಕರ್ಯದಲ್ಲಿ ಹಿಂದೆ ಬಿದ್ದಿಲ್ಲ. ವಿಶೇಷವೆಂದರೆ ಇವರ ಕ್ಷೇತ್ರ ಬ್ರಿಂದೇಲ್‌ಪದವು. ಆದರೆ ಆಯ್ಕೆಯಾಗಿರುವುದು 5ನೇ ವಾರ್ಡ್‌ನಿಂದ! ಅಂದರೆ ತಮ್ಮ ಕ್ಷೇತ್ರ ಮಾತ್ರವಲ್ಲ, ಇತರ ಕ್ಷೇತ್ರಗಳಲ್ಲೂ ಚುನಾವಣೆಗೆ ನಿಂತು ಗೆಲುವು ಸಾಧಿಸುವಷ್ಟು ಜನಮನ್ನಣೆ ಇವರದ್ದು.

– ಧನ್ಯಾ ಬಾಳೆಕಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next