“ ಚಂದಾ ಕೇಳಲು ಹೋದ ಮನೆಯಲಿ ಚಂದಾಮಾಮನ ತಂಗಿ ಸಿಕ್ಕಿಬಿಟ್ಟಳು” ಬೆಳ್ಳಿಗೆ ಮನೆಯವರು ಟಿವಿ ಹಾಕಿದಾಗ ಈ ಹಾಡು ನುಸುಳಿಕೊಂಡು ಅಡುಗೆ ಮನೆಯವರೆಗೂ ಕೇಳಿಸುತಿತ್ತು. ಅರೇ ಎಷ್ಟು ಚಂದದ ಸಾಲನ್ನು ಬರೆದಿದ್ದಾರೆ. ಯಾರಪ್ಪ ಈ ಸಾಲನ್ನು ಬರೆದಿರುವುದು ಅಂದುಕೊಳ್ಳುತ್ತಾ ಹಾಲ್ ಗೆ ಹೋಗುವಷ್ಟರಲ್ಲಿ ಟಿವಿ ಚಾನೆಲ್ ಬದಲಾಗಿತ್ತು. ಹಾಡಿನ ಬದಲು ಕೊರೊನ ವೈರಸ್ ಬಗ್ಗೆ ವಾರ್ತೆ ನೋಡುತ್ತಾ ಕುಳಿತಿದ್ದರು, ನನ್ನ ಮನೆಯವರು . ಹಾಗೆ ಅಡುಗೆ ಮನೆಗೆ ಬಂದು ಯೂಟ್ಯೂಬ್ ನಲ್ಲಿ ಆ ಹಾಡನ್ನು ಹುಡುಕಿ ಎರಡು ಸಲ ಕೇಳಿದೆ. ಯಾಕೋ ಆ ಒಂದು ಸಾಲು ತುಂಬಾ ಇಷ್ಟವಾಗಿ ಬಿಟ್ಟಿತು.
ಒಂದು ಹೆಣ್ಣನ್ನು ಚಂದಾಮಾಮನ ತಂಗಿಗೆ ಹೋಲಿಸಿರುವುದು ತುಂಬಾ ಖುಷಿ ಕೊಡುವ ಸಂಗತಿ . ಚಂದಮಾಮನೇ ನೋಡಲು ಚಂದ. ಇನ್ನು ಆತನ ತಂಗಿ ಇನ್ನು ಚಂದ. ಒಂದು ಹೆಣ್ಣನ್ನು ಹೂವಿಗೆ ಹೋಲಿಸುತ್ತಾರೆ ಯಾಕಂದರೆ ಅದು ತುಂಬಾ ಮೃದು ಅಂತ. ಅದೇ ಹೆಣ್ಣನ್ನುಕಲ್ಲಿಗೆ ಹೋಲಿಸುತ್ತಾರೆ ಯಾಕಂದರೆ ಅವಳು ಗಟ್ಟಿಗಿತ್ತಿ ಅಂತ. ಅದೇ ಹೆಣ್ಣನ್ನು ಮಂಜುಗಡ್ಡೆಗೆ ಹೋಲಿಸುತ್ತಾರೆ. ಯಾಕಂದರೆ ಅವಳ ಮನಸ್ಸು ಬೇಗ ಕರಗುತ್ತೆ ಅಂತ .ಅದೇ ಹೆಣ್ಣನ್ನು ಬಜಾರಿ ಅಂತ ಕರೆಯುತ್ತಾರೆ. ಯಾಕಂದರೆ ಅವಳು ತನ್ನ ಮನೆಗೆ, ಮನೆತನಕ್ಕೆ, ತನ್ನ ಸ್ವಾಭಿಮಾನದ ವಿಷಯ ಬಂದರೆ ಬಜಾರಿನೇ ಆಗುತ್ತಾಳೆ. ಮಹಿಳೆಯರಲ್ಲಿ ಈ ಎಲ್ಲ ಗುಣಗಳು ಇರುತ್ತವೆ .ಇದೆಲ್ಲಾ ನೋಡುವವರ ಕಣ್ಣಲ್ಲಿ,ಮನಸಲ್ಲಿ ಇರುವಂತದ್ದು.
ಒಂದು ಹೆಣ್ಣು ಅಲಂಕಾರ ಸಾಮಗ್ರಿಗಳಿಂದ ತನನ್ನು ತಾನು ಅಲಂಕಾರ ಮಾಡಿಕೊಳ್ಳಬಹುದು.ಅದೇ ಅವಳನ್ನು ಶಬ್ದಗಳ ಉಪಮೇಯ , ಅಲಂಕಾರ ಬಳಸಿ ಅಲಂಕರಿಸುವುದು ನಮ್ಮ ಕರ್ತವ್ಯವಾಗಿದೆ .ಈ ಕರ್ತವ್ಯವನ್ನು ನಾವು ಪ್ರಾರಂಭಿಸೋಣ ಅಂತ ಹೇಳುತ್ತಾ ಎಲ್ಲ ಮಹಿಳೆಯರಿಗೂ “ಮಹಿಳಾ ದಿನಾಚರಣೆ”ಯ ಶುಭಾಶಯಗಳು.
-ಶೈಲಾ ರಾಘವೇಂದ್ರ, ಶಿಕ್ಷಕಿ