ಕೋಲಾರ: ಮೀಸಲಾತಿಗಾಗಿ ಹೋರಾಟ ನಡೆಸುವ ಮಹಿಳೆಯರು ಸಿಕ್ಕ ಅಧಿಕಾರದ ಜವಾಬ್ದಾರಿಯನ್ನು ಪುರುಷರಿಗೆ ವಹಿಸದೇ ಸವಾಲಾಗಿ ಸ್ವೀಕರಿಸಿ ಆಡಳಿತ ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಹರಿಸಿನ, ಕುಂಕುಮ, ಹೂವಿನೊಂದಿಗೆ “ಕಿಸಾನ್ ಶ್ರೀಲಕ್ಷ್ಮೀ’ ಠೇವಣಿ ಬಾಂಡ್ ವಿತರಿಸಿ ಅವರು ಮಾತನಾಡಿ, ಈಗಾಗಲೇ ಗ್ರಾಪಂ, ತಾಪಂ, ಜಿಪಂಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಇದೆ. ವಿಧಾನಸಭೆ, ಲೋಕಸಭೆಯಲ್ಲೂ ಶೇ.33 ಮೀಸಲಾತಿಗೆ ಒತ್ತಾಯ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಹಲವು ಮಹಿಳೆಯರು ಸಿಕ್ಕ ಅವಕಾಶವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಇಡೀಸಮಾಜವೇ ಒಪ್ಪುವಂತಹ ಜನಪರ ಆಡಳಿತ ನೀಡಿರುವ ಉದಾಹರಣೆಗಳೂ ಇವೆ ಎಂದರು.
ಸ್ಥಾನಮಾನ: ಸಂವಿಧಾನದಡಿ ಪುರುಷರಷ್ಟೇ ಮಹಿಳೆಯರಿಗೂ ಪ್ರತಿ ಕ್ಷೇತ್ರದಲ್ಲೂ ಸ್ಥಾನಮಾನ ಕಲ್ಪಿಸಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಪುರುಷರಷ್ಟೇ ಮಹಿಳೆಯರು ಇರುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಪುರುಷರಿಗೆ ಅಧಿಕಾರದ ಜವಾಬ್ದಾರಿ ವಹಿಸುವುದು ಸರಿಯಲ್ಲ ಎಂದರು.
ನಿಮ್ಮ ಅಧಿಕಾರ ನೀವೇ ಚಲಾಯಿಸಿ: ಸಂವಿಧಾನದಲ್ಲಿ ಮಹಿಳೆಯರಿಗೆ ನೀಡುವ ಮೀಸಲಾತಿ ಸದ್ಬಳಕೆ ಮಾಡಿಕೊಳ್ಳುವಂತಾಗ ಬೇಕು, ರಾಜಕಾರಣದಲ್ಲಿನ ನಿಮಗೆ ಸಿಕ್ಕ ಅಧಿಕಾರವನ್ನು ಪುರುಷ ರಿಗೆ ನೀಡಿ, ಸಂವಿಧಾನಕ್ಕೆ ದ್ರೋಹ ಬಗೆಯಬೇಡಿ. ನಿಮ್ಮ ಅಧಿಕಾರ ನೀವೆ ಚಲಾಯಿಸುವಂತಾದಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ತ್ಯಾಗಮಯಿ ಹೆಣ್ಣು ಸಕಲವೂ ಸ್ತ್ರೀಮಯ: ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಭಾರತದಲ್ಲಿ ಹೆಣ್ಣನ್ನು ಆದಿಪರಾಶಕ್ತಿ ಎನ್ನುತ್ತಾರೆ. ಭಾರತಾಂಬೆ,ಕನ್ನಡಾಂಬೆ, ನದಿಗಳು, ಭೂಮಿ ಎಲ್ಲವೂ ಸ್ತ್ರೀಮಯವಾಗಿದೆ. ಅಕ್ಕ, ತಂಗಿ, ತಾಯಿಯಾಗಿ ಕುಟುಂಬವನ್ನು ಕಾಪಾಡುವ ಹೆಣ್ಣಿಗೆ ಬದುಕು ರೂಪಿಸಿಕೊಳ್ಳುವ ಶಕ್ತಿ ಇದೆ ಎಂದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣಮಾತನಾಡಿ, ಮಹಿಳೆಯರಿಗೆ ಜವಾಬ್ದಾರಿ ವಹಿಸಿದರೆ ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ಬ್ಯಾಂಕ್‌ನಿಂದ ಪಡೆದಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಮಹಿಳೆಯರೆಂದರೆ ಸಾಧಕಿಯರು: ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕಇತರರಿಗೆ ಮಾದರಿಯಾಗಿದ್ದಾರೆ. ಸಾಧಕ ಮಹಿಳೆಯರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.
ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್, ಮುದುವಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ರಾಜಮ್ಮ, ಮುಖಂಡ ರಾಮಣ್ಣ, ಎಸ್.ವಿ. ಸುಧಾಕರ್, ಬ್ಯಾಂಕ್ ವ್ಯವಸ್ಥಾಪಕ ಅಂಬರೀಶ್ ಮತ್ತಿತರರಿದ್ದರು.