Advertisement

ಮಹಿಳಾ ಕಾಲೇಜು ಕಟ್ಟಡ: ಹೊಸ ಜಾಗ ಶೋಧಕ್ಕೆ ಚಿತ್ತ

09:38 AM May 30, 2022 | Team Udayavani |

ಪುತ್ತೂರು: ಅನುದಾನ ಮಂಜೂರಾತಿಗೊಂಡು ನಾಲ್ಕು ವರ್ಷ ಕಳೆದರೂ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಗುರುತಿಸಿರುವ ಜಾಗದ ಹಕ್ಕಿನ ವಿವಾದ ಇತ್ಯರ್ಥಗೊಂಡಿಲ್ಲದ ಕಾರಣ ಹೊಸ ಜಾಗ ಶೋಧಿಸುವತ್ತ ಚಿತ್ತ ಹರಿಸಲಾಗಿದೆ.

Advertisement

ಎಂಟು ವರ್ಷಗಳ ಹಿಂದೆ ಆರಂಭಗೊಂಡ ಪುತ್ತೂರಿನ ಏಕೈಕ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಈ ಬಾರಿಯೂ ಅದೇ ಹಳೆ ಜೈಲು ಕಟ್ಟಡದಲ್ಲಿಯೇ ಮುಂದುವರಿಯಬೇಕಿದೆ.

ಅನುದಾನ ಇದ್ದರೂ ಜಾಗದ ಸಮಸ್ಯೆ

ಐದು ವರ್ಷಗಳ ಹಿಂದೆ ಪುತ್ತೂರು ಕಾಲೇಜಿಗೆ ಮಂಜೂರಾದ 4.72 ಎಕರೆ ಜಾಗ ಇನ್ನೂ ಕಾಲೇಜಿನ ಹೆಸರಿಗೆ ಆಗಿಲ್ಲ. ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ಹಣ ಮಂಜೂರಾಗಿ 4 ವರ್ಷ ಕಳೆದಿದ್ದರೂ ಖರ್ಚು ಮಾಡಲು ಸಾಧ್ಯ ವಾಗಿಲ್ಲ. ಹೀಗಾಗಿ 600ಕ್ಕೂ ಅಧಿಕ ವಿದ್ಯಾರ್ಥಿನಿಯರನ್ನು ಹೊಂದಿರುವ ಮಹಿಳಾ ಕಾಲೇಜು ಸ್ವಂತ ಕಟ್ಟಡ ಇಲ್ಲದೆ ವರ್ಷಂಪ್ರತಿ ಪರದಾಡುತ್ತಿದೆ.

ಏನಿದು ಸಮಸ್ಯೆ?

Advertisement

ಕೇಪುಳು ಸಮೀಪದ ಆನೆಮಜಲು ಎಂಬಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಿರ್ಮಾಣಕ್ಕಾಗಿ 5 ವರ್ಷಗಳ ಹಿಂದೆ 4.72 ಜಾಗ ಮಂಜೂರಾಗಿತ್ತು. ಕರ್ನಾಟಕ ಗೃಹ ಮಂಡಳಿ ನೇತೃತ್ವದಲ್ಲಿ 3 ಮಹಡಿಗಳ ಕಟ್ಟಡಕ್ಕಾಗಿ 8 ಕೋಟಿ ರೂ. ಗಳ ನೀಲನಕಾಶೆ ಸಿದ್ಧಪಡಿಸಲಾಯಿತು. ಮೊದಲ ಹಂತದಲ್ಲಿ 4.80 ಕೋಟಿ ರೂ. ಮಂಜೂರಾಗಿದ್ದರೆ, 2ನೇ ಹಂತದಲ್ಲಿ 1 ಕೋಟಿ ರೂ. ಮಂಜೂರಾಗಿದೆ. ಆಡಳಿ ತಾತ್ಮಕ ಮಂಜೂರಾತಿ ಸಿಕ್ಕಿ ಕಾರ್ಯಾ ದೇಶ ನೀಡಿ ಇನ್ನೇನು ಕಟ್ಟಡ ಕೆಲಸ ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಜಾಗದ ಹಕ್ಕಿನ ಕುರಿತು ಖಾಸಗಿಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕುಮ್ಕಿ ಜಮೀನಿನ ವಿಚಾರದ ಆಧಾರದಲ್ಲಿ ಕರ್ನಾಟಕ ಎಪಿಲೇಟ್‌ ಟ್ರಿಬ್ಯೂನಲ್‌ (ಕೆಎಟಿ)ನಲ್ಲಿ ತಡೆಯಾಜ್ಞೆ ಸಿಕ್ಕಿತು. ವಿಚಾರಣ ಪ್ರಕ್ರಿಯೆ ನಡೆದು ಮುಂದಿನ ಹಂತದಲ್ಲಿ ಪ್ರಕರಣವನ್ನು ಮಂಗಳೂರಿನ ಪೀಠಕ್ಕೆ ವರ್ಗಾಯಿಸಲಾಯಿತು. ಅಲ್ಲಿ ವಿಚಾರಣೆ ಆರಂಭವಾಗಬೇಕು ಎನ್ನುವಷ್ಟರಲ್ಲಿ 2020ರ ಮಾರ್ಚ್‌ನಲ್ಲಿ ಲಾಕ್‌ಡೌನ್‌ ವಿಧಿಸಿದ ಕಾರಣ ವಿಚಾರಣೆ ಸ್ಥಗಿತಗೊಂಡಿತು.

ಹೊಸ ಜಾಗಕ್ಕೆ ಶೋಧ

ಸರಕಾರದ ನಿಯಮದ ಪ್ರಕಾರ ನಗರ ಸಭೆ ವ್ಯಾಪ್ತಿಯಲ್ಲಿ ಸರಕಾರಿ ಕಾಲೇಜು ಗಳಿಗೆ ಕನಿಷ್ಠ 1.5 ಎಕರೆ ಜಮೀನು ಅಗತ್ಯ ವಿದೆ. ಗುರುತಿಸಲಾದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಶಾಸಕರು, ನಗರಸಭೆ ಅಧ್ಯಕ್ಷರು ಸೇರಿ ಹಲವರ ನೇತೃತ್ವದಲ್ಲಿ ಸಂಧಾನ ನಡೆದಿದ್ದರೂ ಇತ್ಯರ್ಥವಾಗಿಲ್ಲ. ನ್ಯಾಯಾಲಯ ತೀರ್ಪು ಇನ್ನಷ್ಟು ವಿಳಂಬ ವಾಗುವ ಸಾಧ್ಯತೆ ಇದೆ. ಹೀಗಾಗಿ ಹೊಸ ಜಾಗ ಹುಡುಕಲು ಚಿಂತನೆ ನಡೆದಿದೆ.

ಕಾಲೇಜಿಗೆ ಎಂಟರ ಹರೆಯ

ಹಿಂದಿನ ಶಾಸಕಿ ಶಕುಂತಳಾ ಶೆಟ್ಟಿ ಅವಧಿಯಲ್ಲಿ 2013ರಲ್ಲಿ ಪುತ್ತೂರಿಗೆ ಮಹಿಳಾ ಕಾಲೇಜು ಮಂಜೂರು ಮಾಡಲಾಗಿತ್ತು. 2014ರಲ್ಲಿ ನೆಲ್ಲಿಕಟ್ಟೆ ಸ. ಪ್ರಾ. ಶಾಲೆಯ ಹಳೆಯ ಕಟ್ಟಡದಲ್ಲಿ ಕಾಲೇಜು ಆರಂಭಗೊಂಡಿತು. 2015ರಲ್ಲಿ ಪುತ್ತೂರಿನ ಹೊಸ ಮಿನಿ ವಿಧಾನಸೌಧ ಉದ್ಘಾಟನೆಗೊಂಡ ಬಳಿಕ ತಾಲೂಕು ಕಚೇರಿ (ಹಳೆ ಜೈಲು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡಿತ್ತು. ಹೀಗಾಗಿ ಕಾಲೇಜನ್ನು ಹಳೆ ತಾಲೂಕು ಕಚೇರಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ಸ್ಥಳಾವಕಾಶದ ಕೊರತೆ ಉಂಟಾದಾಗ ವಠಾರದಲ್ಲೇ ತಾತ್ಕಾಲಿಕ ಕೊಠಡಿಗಳನ್ನು ನಿರ್ಮಿಸಲಾಯಿತು. ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದಂತೆಲ್ಲ ಹಳೆ ಪುರಸಭೆ ಕಟ್ಟಡದ ಕೋಣೆಗಳನ್ನು ಬಳಸಿಕೊಳ್ಳಲಾಯಿತು. ಆ ಕಟ್ಟಡವನ್ನು ಕಳೆದ ವರ್ಷ ಕೆಡವಿದ ಕಾರಣ ಕೊಠಡಿ ಕೊರತೆ ಉಂಟಾಗಿದೆ. ಪ್ರಸ್ತುತ 656 ವಿದ್ಯಾರ್ಥಿನಿಯರಿದ್ದಾರೆ. ಪ್ರಥಮ ಪದವಿ ಆರಂಭಗೊಂಡಾಗ 750 ದಾಟುವ ನಿರೀಕ್ಷೆ ಇದೆ.

ಜಮೀನು ಒದಗಿಸಲು ಪ್ರಯತ್ನ

ಕಾಲೇಜಿಗೆ ಮಂಜೂರಾದ 4.72 ಎಕರೆ ಜಾಗದ ವಿಚಾರದ ನ್ಯಾಯಾಲಯ ದಲ್ಲಿದೆ. ಅದಿನ್ನೂ ಇತ್ಯರ್ಥ ಆಗಿಲ್ಲ. ಮಹಿಳಾ ಕಾಲೇಜಿಗೆ ಜಮೀನು ಒದಗಿಸುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ನಡೆದಿದೆ. -ಸಂಜೀವ ಮಠಂದೂರು ಶಾಸಕರು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next