Advertisement

Womens Asia Cup;ಯುಎಇ ವಿರುದ್ಧ ದಾಖಲೆ ಮೊತ್ತ ; ಸೆಮಿ ಬಾಗಿಲಲ್ಲಿ ಭಾರತದ ವನಿತೆಯರು

11:38 PM Jul 21, 2024 | Team Udayavani |

ಡಂಬುಲ: ಯುಎಇ ವಿರುದ್ಧ ದಾಖಲೆ ಮೊತ್ತ ಪೇರಿಸಿ 78 ರನ್ನುಗಳಿಂದ ಗೆದ್ದುಬಂದ ಹಾಲಿ ಚಾಂಪಿಯನ್‌ ಭಾರತ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ವನಿತಾ ಏಷ್ಯಾ ಕಪ್‌ ಪಂದ್ಯಾವಳಿಯ ಸೆಮಿಫೈನಲ್‌ ಖಚಿತಪಡಿಸಿದೆ.
ಭಾರತ ಮೊದಲ ಮುಖಾಮುಖೀಯಲ್ಲಿ ಪಾಕಿಸ್ಥಾನವನ್ನು 7 ವಿಕೆಟ್‌ಗಳಿಂದ ಮಣಿಸಿತ್ತು. ಇದರೊಂದಿಗೆ “ಎ’ ವಿಭಾಗದ ಎರಡೂ ಪಂದ್ಯಗಳನ್ನು ಜಯಿಸಿತು. 3.298ರಷ್ಟು ಉತ್ಕೃಷ್ಟ ರನ್‌ರೇಟ್‌ ಹೊಂದಿರುವ ಕೌರ್‌ ಬಳಗ, ಮಂಗಳವಾರ ನೇಪಾಲ ವಿರುದ್ಧ ಕೊನೆಯ ಲೀಗ್‌ ಪಂದ್ಯ ಆಡಲಿದೆ.

Advertisement

ರವಿವಾರದ ಮುಖಾಮುಖೀಯಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 5 ವಿಕೆಟಿಗೆ 201 ರನ್‌ ಪೇರಿಸಿತು. ಜವಾಬಿತ್ತ ಯುಎಇ 7 ವಿಕೆಟಿಗೆ 123 ರನ್‌ ಮಾಡಿ ಸತತ ಎರಡನೇ ಸೋಲನ್ನು ಹೊತ್ತುಕೊಂಡಿತು.

ಮೊದಲ ಸಲ 200 ರನ್‌
ಭಾರತದ ವನಿತೆಯರು ಮೊದಲ ಸಲ ಟಿ20 ಕ್ರಿಕೆಟ್‌ನಲ್ಲಿ ಇನ್ನೂರರ ಗಡಿ ದಾಟಿದರು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮತ್ತು ಕೀಪರ್‌ ರಿಚಾ ಘೋಷ್‌ ಅವರ ಬಿರುಸಿನ ಅರ್ಧ ಶತಕದಿಂದ ಇದು ಸಾಧ್ಯವಾಯಿತು. ಓಪನರ್‌ ಶಫಾಲಿ ವರ್ಮ ಕೂಡ ಸಿಡಿದು ನಿಂತರು. ಆದರೆ ಸ್ಮತಿ ಮಂಧನಾ (13), ದಯಾಳನ್‌ ಹೇಮಲತಾ (2) ಮತ್ತು ಜೆಮಿಮಾ ರೋಡ್ರಿಗಸ್‌ (14) ಅವರಿಂದ ಹೆಚ್ಚಿನ ಕೊಡುಗೆ ಸಂದಾಯವಾಗಲಿಲ್ಲ. ಮಂಧನಾ ಒಂದು ಸಿಕ್ಸರ್‌, ಒಂದು ಬೌಂಡರಿ ಬಾರಿಸಿ ಅಬ್ಬರಿಸಿದರೂ ಇನ್ನಿಂಗ್ಸ್‌ ಬೆಳೆಸುವಲ್ಲಿ ವಿಫ‌ಲರಾದರು. 52 ರನ್ನಿಗೆ ಭಾರತದ 3 ವಿಕೆಟ್‌ ಬಿತ್ತು.

ಹರ್ಮನ್‌ಪ್ರೀತ್‌ ಕೌರ್‌ 47 ಎಸೆತಗಳಿಂದ 66 ರನ್‌ ಬಾರಿಸಿದರು. ಇದರಲ್ಲಿ 7 ಫೋರ್‌, ಒಂದು ಸಿಕ್ಸರ್‌ ಸೇರಿತ್ತು. ಸಮೈರಾ ಅವರೆಸೆದ 19ನೇ ಓವರ್‌ನಲ್ಲಿ ಸತತ 2 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸುವ ಮೂಲಕ ಕೌರ್‌ 12ನೇ ಅರ್ಧ ಶತಕದ ಸಂಭ್ರಮ ಆಚರಿಸಿದರು. ಅಂತಿಮವಾಗಿ ರನೌಟ್‌ ಆಗಿ ವಾಪಸಾದರು.
ಕೌರ್‌ 2 ಉಪಯುಕ್ತ ಜತೆಯಾಟಗಳಲ್ಲಿ ಭಾಗಿಯಾದರು. ಮೊದಲು ಜೆಮಿಮಾ ಜತೆಗೂಡಿ 4ನೇ ವಿಕೆಟಿಗೆ 54 ರನ್‌ ಒಟ್ಟುಗೂಡಿಸಿದರು. ಬಳಿಕ ರಿಚಾ ಘೋಷ್‌ ಜತೆಗೂಡಿ 5ನೇ ವಿಕೆಟಿಗೆ 75 ರನ್‌ ರಾಶಿ ಹಾಕಿದರು.

Advertisement

ರಿಚಾ ಘೋಷ್‌ ಬ್ಯಾಟಿಂಗ್‌ ಅತ್ಯಂತ ಸ್ಫೋಟಕವಾಗಿತ್ತು. ಇವರ ಗಳಿಕೆ 29 ಎಸೆತಗಳಿಂದ ಅಜೇಯ 64 ರನ್‌ (12 ಬೌಂಡರಿ, ಒಂದು ಸಿಕ್ಸರ್‌). ಇದು ರಿಚಾ ಅವರ ಮೊದಲ ಟಿ20 ಅರ್ಧ ಶತಕ. ಹೀನಾ ಹೊಚಾಂದನಿ ಪಾಲಾದ ಅಂತಿಮ ಓವರ್‌ ಕೊನೆಯ 5 ಎಸೆತಗಳನ್ನು ಬೌಂಡರಿಗೆ ಬಡಿದಟ್ಟುವ ಮೂಲಕ ರಿಚಾ ಅಬ್ಬರಿಸಿದರು. ಇದರಿಂದ ಅವರ ಅರ್ಧ ಶತಕ ಹಾಗೂ ತಂಡದ ದ್ವಿಶತಕವೆರಡೂ ಪೂರ್ತಿಗೊಂಡಿತು.

ಯುಎಇ ವೈಫ‌ಲ್ಯ
ಚೇಸಿಂಗ್‌ ವೇಳೆ ನಾಯಕಿ ಇಶಾ ರೋಹಿತ್‌ ಓಜಾ (38) ಮತ್ತು ಮಧ್ಯಮ ಕ್ರಮಾಂಕದ ಆಟಗಾರ್ತಿ ಕವಿಶಾ (ಔಟಾಗದೆ 40) ಮಾತ್ರ ಒಂದಿಷ್ಟು ಹೋರಾಟ ತೋರಿದರು. ಭಾರತದ ಐವರು ಬೌಲರ್ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು. ದೀಪ್ತಿಗೆ ಹೆಚ್ಚಿನ ಯಶಸ್ಸು ಸಿಕ್ಕಿತು. ಶ್ರೇಯಾಂಕಾ ಸ್ಥಾನ ತುಂಬಿದ ತನುಜಾ ಅತ್ಯಂತ ಮಿತವ್ಯಯಿಯಾಗಿದ್ದರು (4-0-14-1).

ಸಂಕ್ಷಿಪ್ತ ಸ್ಕೋರ್‌
ಭಾರತ-5 ವಿಕೆಟಿಗೆ 201 (ಕೌರ್‌ 66, ರಿಚಾ ಔಟಾಗದೆ 64, ಶಫಾಲಿ 37, ಕವಿಶಾ 36ಕ್ಕೆ 2). ಯುಎಇ-7 ವಿಕೆಟಿಗೆ 123 (ಕವಿಶಾ ಔಟಾಗದೆ 40, ಇಶಾ 38, ದೀಪ್ತಿ 23ಕ್ಕೆ 2, ತನುಜಾ 14ಕ್ಕೆ 1, ಪೂಜಾ 27ಕ್ಕೆ 1, ರಾಧಾ 29ಕ್ಕೆ 1, ರೇಣುಕಾ 30ಕ್ಕೆ 1).
ಪಂದ್ಯಶ್ರೇಷ್ಠ: ರಿಚಾ ಘೋಷ್‌.

ಪಾಕಿಸ್ಥಾನಕ್ಕೆ ಗೆಲುವು
ದಿನದ ದ್ವಿತೀಯ ಪಂದ್ಯದಲ್ಲಿ ಪಾಕಿಸ್ಥಾನ 9 ವಿಕೆಟ್‌ಗಳಿಂದ ನೇಪಾಲವನ್ನು ಮಣಿಸಿ ಅಂಕದ ಖಾತೆ ತೆರೆಯಿತು. ನೇಪಾಲ 6 ವಿಕೆಟಿಗೆ ಕೇವಲ 108 ರನ್‌ ಗಳಿಸಿದರೆ, ಪಾಕಿಸ್ಥಾನ 11.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 110 ರನ್‌ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next