ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕರ್ ಹೆಣ್ಣು ಮಕ್ಕಳು ಬಿಯರ್ ಕುಡಿಯುವ ಕುರಿತು ನೀಡಿರುವ ಹೇಳಿಕೆ ಈಗ ಭಾರೀ ಟೀಕೆಗೆ ಗುರಿಯಾಗಿದೆ. ಅವರ ಹೇಳಿಕೆಯನ್ನು ಮಹಿಳಾ ವಿರೋಧಿ, ಲಿಂಗ ತಾರತಮ್ಯ ಎಂದೆಲ್ಲ ಖಂಡಿಸಲಾಗಿದೆ. ವಿಧಾನಸಭೆಯ ವತಿಯಿಂದ ಏರ್ಪಡಿಸಿದ್ದ ಯುವ ಸಂಸತ್‌ನಲ್ಲಿ ಯುವ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ಪಾರಿಕರ್ ಯುವತಿಯರು ಗಂಡು ಹುಡುಗರ ಜತೆಗೆ ಸೇರಿ ಮದ್ಯಪಾನ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಈ ಮಾತು ಹೇಳಿದ್ದರು. ಗೋವಾದಲ್ಲಿ ಮದ್ಯ ಮತ್ತು ಡ್ರಗ್ಸ್ ಮಾಫಿಯಾ ಆಳವಾಗಿ ಬೇರೂರಿರುವ ವಿಚಾರದಲ್ಲಿ ಈ ಅವರು ಈ ಮಾತನ್ನು ಹೇಳಿದ್ದಾರೆ. ಆದರೆ ಯಥಾಪ್ರಕಾರ ಪ್ರತಿ ನಡೆಯಲ್ಲೂ ವಿವಾದವನ್ನು ಹುಡುಕುವವರಿಗೆ ಪಾರಿಕರ್ ಇಡೀ ಮಹಿಳಾ ಸಮುದಾಯವನ್ನು ಅವಮಾನಿಸಲು ಈ ಹೇಳಿಕೆ ನೀಡಿದ್ದಾರೆಂದು ನಂಬಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪಾರಿಕರ್ ಅವರನ್ನು ಮಹಿಳಾ ವಿರೋಧಿ ಬೆಂಬಲಿಸುವ ನೂರಾರು ಸಂದೇಶಗಳು ಹರಿದಾಡುತ್ತಿವೆ. ಹೆಣ್ಮಕ್ಕಳು ಮದ್ಯಪಾನ ಮಾಡುವ ಬಗ್ಗೆ ಮುಖ್ಯಮಂತ್ರಿಯೊಬ್ಬರು ಭಯ ಪಡುವ ಅಗತ್ಯವಿಲ್ಲ ದಿದ್ದರೂ, ಅದು ಕಳವಳಕಾರಿ ಸಂಗತಿ ಎನ್ನುವುದು ನಿಜವಲ್ಲವೆ?
ಇತ್ತೀಚೆಗೆ ನಡೆಸಿದ ಅಧ್ಯಯನವೊಂದು ಭಾರತೀಯ ಮಹಿಳೆಯರಲ್ಲಿ ಮದ್ಯಪಾನ ಚಟ ತೀವ್ರವಾಗಿ ಹೆಚ್ಚುತ್ತಿರುವ ಕುರಿತು ಬೆಳಕು ಚೆಲ್ಲಿದೆ. ಪ್ರಸ್ತುತ ಶೇ. 5ರಷ್ಟು ಮಹಿಳೆಯರು ಮದ್ಯದ ದಾಸರಾಗಿದ್ದರೂ ಇನ್ನು ಐದಾರು ವರ್ಷಗಳಲ್ಲಿ ಅವರ ಸಂಖ್ಯೆ ಶೇ. 25 ಆಗಬಹುದು ಎಂದು ಈ ಸಮೀಕ್ಷೆ ಎಚ್ಚರಿಸಿದೆ. ಇದು ಭಯವುಂಟು ಮಾಡುವುದಿಲ್ಲವೆ? ಹಾಗೆಂದು ಮಹಿಳೆಯರು ಮದ್ಯಪಾನ ಮಾಡಬಾರದು ಅಥವಾ ಮಾಡುತ್ತಿರಲಿಲ್ಲವೇ ಎನ್ನುವುದು ಪ್ರಶ್ನೆಯಲ್ಲ. ಆದರೆ ಮಹಿಳೆಯರು ಬಹಿರಂಗವಾಗಿ ಮದ್ಯಪಾನ ಮಾಡುವುದು ಮತ್ತು ಅದು ಸಾಮಾಜಿಕ ಪ್ರತಿಷ್ಠೆ ಎಂದು ಭಾವಿಸುವ ಪ್ರವೃತ್ತಿ ಪ್ರಾರಂಭವಾಗಿರುವುದು ಸುಮಾರು ಒಂದೂವರೆ ದಶಕದಿಂದೀಚೆಗಿನ ಬೆಳವಣಿಗೆ. ನಿರ್ದಿಷ್ಟವಾಗಿ ಕಾರ್ಪೋರೇಟ್ ಸಂಸ್ಕೃತಿಕ ದೇಶಕ್ಕೆ ಕಾಲಿಟ್ಟ ಬಳಿಕದ ಪಿಡುಗು ಇದು. ಕಾರ್ಪೋರೇಟ್ ಸಂಸ್ಥೆಗಳ ಪಾರ್ಟಿಗಳಲ್ಲಿ ಮದ್ಯ ಹೊಳೆಯಾಗಿ ಹರಿಯು ವುದು ಹೊಸತೇನಲ್ಲ. ಈ ಹೊಳೆಯಲ್ಲಿ ಮಿಂದೇಳಲು ಪುರುಷರಷ್ಟೇ ಮಹಿಳೆಯರು ಕೂಡ ಹಾತೊರೆಯುತ್ತಿರುವುದು ಈಗಿನ ಫ್ಯಾಷನ್.
ಹಿಂದೆ ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಈ ಫ್ಯಾಷನ್ ಈಗ ಚಿಕ್ಕಪುಟ್ಟ ನಗರ ಮತ್ತು ಹಳ್ಳಿಗಳಿಗೂ ಹರಡಿದೆ. ಹೈಫೈ ಪರಿವಾರಗಳಲ್ಲಿ ಗಂಡ ಹೆಂಡತಿ ಇಬ್ಬರೂ ಜತೆಗೆ ಕುಳಿತು ಕುಡಿಯುವುದು ಆಧುನಿಕತೆ. ಇಂತಹ ಪರಿವಾರಗಳ ಮಕ್ಕಳು ಕೂಡ ಕುಡಿಯುವುದು ತಪ್ಪು ಅಲ್ಲ ಎಂದು ಭಾವಿಸಿಕೊಂಡರೆ ಅದು ಅವರ ತಪ್ಪಲ್ಲ.
ಮಹಿಳೆಯರು ಪುರುಷರಿಗಿಂತ ಕಡಿಮೆ ಕುಡಿಯುತ್ತಾರೆ, ಕುಡಿದರೂ ಮಿತಿ ತಪ್ಪುವುದಿಲ್ಲ ಎಂದೆಲ್ಲ ವಾದಿಸುವವರಿದ್ದಾರೆ. ಇವೆಲ್ಲ ಬರೀ ಭ್ರಮೆ ಮಾತ್ರ. ಪುರುಷರಿಗಿಂತ ಹೆಚ್ಚು ಕುಡಿಯುವವ ಮಹಿಳೆಯರಿದ್ದಾರೆ ಮತ್ತು ಕುಡಿದರೆ ಅವರು ಪುರುಷರಿಗಿಂತಲೂ ಹೆಚ್ಚು ಕೆಟ್ಟವರಾಗುತ್ತಾರೆ ಎನ್ನುವುದಕ್ಕೆ ಹತ್ತಾರು ಉದಾಹರಣೆಗಳು ಸಿಗುತ್ತಿವೆ. ಮುಂಬಯಿ, ಬೆಂಗಳೂರಿನಂತಹ ನಗರಗಳ ರಾತ್ರಿ ಪಾಳಿಯ ಟ್ರಾಫಿಕ್ ಪೊಲೀಸರ ಬಳಿ ಕೇಳಿದರೆ ಮಹಿಳೆಯರು ಕುಡಿದ ಮತ್ತಿನಲ್ಲಿ ಮಾಡಿದ ಎಡವಟ್ಟುಗಳ ನೂರಾರು ಘಟನೆಗಳು ಸಿಗುತ್ತವೆ.
ಮದ್ಯ ಪುರುಷ ಮತ್ತು ಮಹಿಳೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿಯೇ ಬೀರುತ್ತದೆ. ಆದರೆ ಮದ್ಯ, ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚು ಅಪಾಯಕಾರಿ ಎನ್ನುವುದು ವೈದ್ಯರ ಅಭಿಮತ. ಮದ್ಯದ ದೈಹಿಕ ಮತ್ತು ಮಾನಸಿಕ ಪರಿಣಾಮಗಳು ಮಹಿಳೆಯರ ಮೇಲೆ ಹೆಚ್ಚು ಇರುತ್ತದೆ. ಮಹಿಳೆಯರ ಯಕೃತ್ತುಗಳು ಪುರುಷರಿಗಿಂತ ಚಿಕ್ಕದಿರುತ್ತದೆ. ಕೊಬ್ಬು ಮತ್ತು ನೀರು ಅನುಪಾತ ಮಹಿಳೆಯರಲ್ಲಿ ಹೆಚ್ಚಿರುತ್ತದೆ. ಅಂದರೆ ನೀರಿನ ಪ್ರಮಾಣ ಕಡಿಮೆ ಮತ್ತು ಕೊಬ್ಬಿನ ಪ್ರಮಾಣ ಹೆಚ್ಚು ಇರುತ್ತದೆ. ಇಂತಹ ದೈಹಿಕ ರಚನೆ ಹೊಂದಿರುವುದರಿಂದ ಮಹಿಳೆ ಯರಲ್ಲಿ ಮದ್ಯ ಜೀರ್ಣವಾಗಲು ಹೆಚ್ಚು ಸಮಯ ಹಿಡಿಯುತ್ತದೆ. ನಿಯಮಿತವಾಗಿ ಮದ್ಯಪಾನ ಮಾಡುವ ಮಹಿಳೆಯರು ಕ್ರಮೇಣ ಖನ್ನತೆ ಹಾಗೂ ಇತರ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಬಲಿಯಾಗಳು ಇದು ಕಾರಣವಾಗುತ್ತದೆ. ಈ ಕಾರಣಕ್ಕಾದರೂ ಪಾರಿಕರ್ ಹೇಳಿದ ಮಾತನ್ನು ಒಪ್ಪಬಹುದಲ್ಲವೆ?