Advertisement
ರಾಜ್ಯದಲ್ಲಿ ಈವರೆಗೆ 15 ಸಾರ್ವತ್ರಿಕ ವಿಧಾನಸಭೆ ಚುನಾವಣೆಗಳು ನಡೆದಿವೆ. 1967ರಿಂದ 2018ರ ಚುನಾವಣೆವರೆಗೆ ಒಟ್ಟು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಅದರಲ್ಲಿ ಗೆದ್ದಿದ್ದು ಮಾತ್ರ ಅಂದಾಜು 100-120 ಜನ. ಈಗಲೂ ಗೆಲುವು ಸಾಧಿಸುತ್ತಿರುವುದು ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ. ಇನ್ನು ಪ್ರಮುಖ ರಾಜಕೀಯ ಪಕ್ಷಗಳಿಂದ ಟಿಕೆಟ್ ಗಿಟ್ಟಿಸಿಕೊಂಡು, ಅಖಾಡಕ್ಕಿಳಿದವರು ತುಂಬಾ ಕಡಿಮೆ. ಸ್ವತಂತ್ರ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗಿಳಿದವರೇ ಹೆಚ್ಚು ಎನ್ನುವುದನ್ನು ಕಾಣಬಹುದು.
ರಾಜಕೀಯ ಪಕ್ಷಗಳ ಲೆಕ್ಕಾಚಾರ ನೋಡಿದರೆ, ಆರಂಭದಿಂದ ಈವರೆಗೆ ಒಂದಕ್ಕಿಂತ ಹೆಚ್ಚು ಬಾರಿ ಗೆದ್ದಿರುವುದು ಸೇರಿದಂತೆ ಕಾಂಗ್ರೆಸ್‌ನಿಂದ ಅತಿ ಹೆಚ್ಚು 70ಕ್ಕೂ ಅಧಿಕ ಮಹಿಳೆಯರು ಗೆಲುವು ಸಾಧಿಸಿದ್ದಾರೆ. ಜನತಾ ಪರಿವಾರ (ಜನತಾ ಪಕ್ಷ, ಜನತಾದಳ, ಜೆಡಿಎಸ್, ಜೆಡಿಯು)ದಿಂದ 17, ಬಿಜೆಪಿಯಿಂದ 10 ಹಾಗೂ ಇತರೆ ನಾಲ್ವರು ಗೆದ್ದಿದ್ದಾರೆ. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್‌ನಿಂದ 6, ಬಿಜೆಪಿಯಿಂದ ಮೂವರು ಹಾಗೂ ಜೆಡಿಎಸ್‌ನ ಒಬ್ಬರು ಸೇರಿ ಒಟ್ಟು 10 ಮಂದಿ ಶಾಸಕಿಯರಿದ್ದಾರೆ. ಇನ್ನೂ ಸಾಧ್ಯವಾಗುತ್ತಿಲ್ಲ
ರಾಜ್ಯದ ಈವರೆಗಿನ ಚುನಾವಣ ರಾಜಕಾರಣದ ಇತಿಹಾಸ ಗಮನಿಸಿದರೆ ಶೇ. 33ರಷ್ಟು ಮೀಸಲಾತಿ ಮಾತಂತೂ ದೂರ ಉಳಿಯಿತು. ಮಹಿಳಾ ಪ್ರಾತಿನಿಧ್ಯ ಮೂರು ಮತ್ತೂಂದು ಎಂಬತಿದೆ. ಮಹಿಳಾ ಸಬಲೀಕರಣದ ಬಗ್ಗೆ ದೊಡ್ಡದಾಗಿ ಪ್ರತಿಪಾದಿಸುವ ಎಲ್ಲ ಪಕ್ಷಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಾತಿನಿಧ್ಯ ಪಡೆದುಕೊಳ್ಳುವಲ್ಲಿ ಮಹಿಳೆಯರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ಕೊಡುವುದರಲ್ಲಿ ಜಿಪುಣತನ ತೋರಿಸುತ್ತವೆ. ಕೊಟ್ಟರೂ ಅವರನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಅಷ್ಟಕ್ಕಷ್ಟೇ, ಗೆದ್ದರೆ ಅದೃಷ್ಟ. ರಾಜಕೀಯ ಪಕ್ಷಗಳ ಗೆಲುವಿನ ಮಾನದಂಡಗಳಿಂದ ಮಹಿಳೆ ಇನ್ನೂ ದೂರ ಇರುವುದನ್ನು ಕಾಣಬಹುದು.
Related Articles
ಪ್ರಸ್ತುತ ಕಾಂಗ್ರೆಸ್‌ನಿಂದ ಆಯ್ಕೆಯಾದ 6 ಜನ ಶಾಸಕಿಯರಿದ್ದು, ಈ ಬಾರಿ 11 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರಲ್ಲಿ ಮಾಜಿ ಶಾಸಕಿಯರೂ ಇದ್ದಾರೆ. ಅದೇ ರೀತಿ, ಬಿಜೆಪಿಯಲ್ಲಿ ಮೂವರು ಶಾಸಕಿಯರಿದ್ದು, ವಿಧಾನಸಭಾ ಚುನಾವಣೆಯಲ್ಲಿ 12 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಈ ಮಧ್ಯೆ ಜೆಡಿಎಸ್‌ನಿಂದ ಒಬ್ಬ ಶಾಸಕಿ ಇದ್ದು, ಪ್ರಸಕ್ತ ಚುನಾವಣೆಯಲ್ಲಿ 12 ಜನ ಮಹಿಳಾ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ.
Advertisement
– ವಿಜಯಕುಮಾರ ಚಂದರಗಿ