Advertisement

ವನಿತಾ ತ್ರಿಕೋನ ಟಿ20 ಸರಣಿ: ಭಾರತ-ಇಂಗ್ಲೆಂಡ್‌ ದ್ವಿತೀಯ ಸುತ್ತಿನ ಸೆಣಸಾಟ

11:13 PM Feb 06, 2020 | Sriram |

ಮೆಲ್ಬರ್ನ್: ವನಿತಾ ತ್ರಿಕೋನ ಟಿ20 ಸರಣಿಯ ದ್ವಿತೀಯ ಸುತ್ತಿನ ಹಣಾಹಣಿ ಶುಕ್ರವಾರ ಆರಂಭವಾಗಲಿದೆ. ಮೊದಲ ಸುತ್ತಿನಲ್ಲಿ ಮೂರೂ ತಂಡಗಳು ಸಮಬಲ ಸಾಧಿಸಿದ್ದರಿಂದ ಮುಂದಿನ 3 ಪಂದ್ಯಗಳೂ ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಗೋಚರಿಸುತ್ತದೆ.

Advertisement

ಮೂರೂ ತಂಡಗಳು ತಲಾ 2 ಪಂದ್ಯಗಳನ್ನಾಡಿವೆ. ಒಂದನ್ನು ಗೆದ್ದು, ಇನ್ನೊಂದರಲ್ಲಿ ಸೋಲನುಭವಿಸಿವೆ. ಎಲ್ಲ ತಂಡಗಳು 2 ಅಂಕ ಹೊಂದಿವೆ. ಆದರೆ ರನ್‌ರೇಟ್‌ನಲ್ಲಿ ಮುಂದಿರುವ ಆತಿಥೇಯ ಆಸ್ಟ್ರೇಲಿಯ ಅಗ್ರಸ್ಥಾನಿಯಾಗಿದೆ (+0.220). ಭಾರತ ದ್ವಿತೀಯ (-0.058) ಮತ್ತು ಇಂಗ್ಲೆಂಡ್‌ ತೃತೀಯ ಸ್ಥಾನದಲ್ಲಿದೆ (-0.172).

ಮೊದಲ ಸುತ್ತಿನ ಪಂದ್ಯಗಳು ಕ್ಯಾನ್‌ಬೆರಾದಲ್ಲಿ ನಡೆದರೆ, ದ್ವಿತೀಯ ಸುತ್ತಿನ ಎಲ್ಲ ಸ್ಪರ್ಧೆ ಹಾಗೂ ಫೈನಲ್‌ ಪಂದ್ಯ ಮೆಲ್ಬರ್ನ್ನ “ಜಂಕ್ಷನ್‌ ಓವಲ್‌’ ನಲ್ಲಿ ಸಾಗಲಿದೆ.

ಸೇಡಿಗೆ ಕಾದಿದೆ ಇಂಗ್ಲೆಂಡ್‌
ಕೂಟದ ಆರಂಭಿಕ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಇಂಗ್ಲೆಂಡನ್ನು ಪರಾಭವಗೊಳಿಸಿತ್ತು. ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವಿನ ಪಂದ್ಯ ಟೈ ಆಯಿತು; ಸೂಪರ್‌ ಓವರಿನಲ್ಲಿ ಇಂಗ್ಲೆಂಡ್‌ ಜಯ ಸಾಧಿಸಿತು. ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯ 4 ವಿಕೆಟ್‌ಗಳಿಂದ ಭಾರತವನ್ನು ಮಣಿಸಿತು. ಅಂಕಪಟ್ಟಿಯಲ್ಲಿ ತಳ ತಲುಪಿರುವ ಹೀತರ್‌ ನೈಟ್‌ ಬಳಗವೀಗ ಸೇಡಿಗೆ ಕಾದು ಕುಳಿತಿದೆ.

ಇಂಗ್ಲೆಂಡ್‌ ಎದುರಿನ ಆರಂಭಿಕ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಕ್ಲಿಕ್‌ ಆಗಿತ್ತು. 16ರ ಹರೆಯದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ, ಮತ್ತೋರ್ವ ತಾರೆ ಜೆಮಿಮಾ ರೋಡ್ರಿಗಸ್‌, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಚೇಸಿಂಗ್‌ ವೇಳೆ ಉತ್ತಮ ಪ್ರದರ್ಶನ ನೀಡಿದ್ದರು. ಸ್ಮತಿ ಮಂಧನಾ ಕೂಡ ಸಿಡಿದಿದ್ದರು.

Advertisement

ಆದರೆ ಆಸ್ಟ್ರೇಲಿಯ ವಿರುದ್ಧ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದರೂ ಭಾರತದ ಬ್ಯಾಟಿಂಗ್‌ ಶೋಚನೀಯ ವೈಫ‌ಲ್ಯ ಕಂಡಿತು. ಮಂಧನಾ, ಹರ್ಮನ್‌ಪ್ರೀತ್‌ ಹೊರತುಪಡಿಸಿದರೆ ಉಳಿದವರ್ಯಾರೂ ಎರಡಂಕೆಯ ಮೊತ್ತ ದಾಖಲಿಸಲಿಲ್ಲ. 9 ವಿಕೆಟಿಗೆ ಕೇವಲ 103 ರನ್‌ ಗಳಿಸಿದ ಭಾರತ ಈ ಪಂದ್ಯವನ್ನು 4 ವಿಕೆಟ್‌ಗಳಿಂದ ಕಳೆದುಕೊಳ್ಳಬೇಕಾಯಿತು.

ಇಂಗ್ಲೆಂಡನ್ನು ಮತ್ತೆ ಮಣಿಸಬೇಕಾದರೆ ಭಾರತದ ಬ್ಯಾಟಿಂಗ್‌ ಸರದಿ ಮಿಂಚಬೇಕಾದುದು ಅನಿವಾರ್ಯ. ಅದರಲ್ಲೂ ಎರಡೂ ಪಂದ್ಯಗಳಲ್ಲಿ ವಿಫ‌ಲರಾದ ಕರ್ನಾಟಕದ ವೇದಾ ಕೃಷ್ಣಮೂರ್ತಿ ರನ್‌ ಬರಗಾಲದಿಂದ ಹೊರಬರಬೇಕಿದೆ. ಆಗ ಭಾರತದ ಕೆಳ ಕ್ರಮಾಂಕದ ಬ್ಯಾಟಿಂಗಿಗೆ ಹೆಚ್ಚಿನ ಬಲ ಲಭಿಸುವುದರಲ್ಲಿ ಅನುಮಾನವಿಲ್ಲ.

ಬೌಲಿಂಗ್‌ ಹೆಚ್ಚು ಬಲಿಷ್ಠ
ಭಾರತದ ಬೌಲಿಂಗ್‌ ವಿಭಾಗ ಹೆಚ್ಚು ಬಲಿಷ್ಠ ಹಾಗೂ ವೈವಿಧ್ಯಮಯವಾಗಿದೆ. ಆಸೀಸ್‌ ವಿರುದ್ಧ ಸಣ್ಣ ಮೊತ್ತ ದಾಖಲಿಸಿದರೂ ಪಂದ್ಯವನ್ನು 19ನೇ ಓವರ್‌ ತನಕ ಕೊಂಡೊಯ್ದದ್ದು ಇದಕ್ಕೆ ಸಾಕ್ಷಿ. ದೀಪ್ತಿ ಶರ್ಮ, ರಾಜೇಶ್ವರಿ ಗಾಯಕ್ವಾಡ್‌, ಶಿಖಾ ಪಂಡೆ, ರಾಧಾ ಯಾದವ್‌ ಮತ್ತೂಮ್ಮೆ ವಿಕೆಟ್‌ ಬೇಟೆಯಾಡುವ ವಿಶ್ವಾಸವಿದೆ.

ಪ್ರಚಂಡ ಫಾರ್ಮ್ನಲ್ಲಿರುವ ಇಂಗ್ಲೆಂಡ್‌ ನಾಯಕಿ ಹೀತರ್‌ ನೈಟ್‌ ಬಗ್ಗೆ ಭಾರತ ಹೆಚ್ಚು ಎಚ್ಚರಿಕೆಯಿಂದ ಇರಬೇಕಿದೆ. ನೈಟ್‌ ಎರಡೂ ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ.

ಭಾರತ: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಶಫಾಲಿ ವರ್ಮ, ಸ್ಮತಿ ಮಂಧನಾ, ಜೆಮಿಮಾ ರೋಡ್ರಿ ಗಸ್‌, ವೇದಾ ಕೃಷ್ಣ ಮೂರ್ತಿ, ತನಿಯಾ ಭಾಟಿಯ, ದೀಪ್ತಿ ಶರ್ಮ, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್‌, ರಾಜೇಶ್ವರಿ ಗಾಯಕ್ವಾಡ್‌, ರಾಧಾ ಯಾದವ್‌, ರಿಚಾ ಘೋಷ್‌, ಅರುಂಧತಿ ರೆಡ್ಡಿ, ಹಲೀìನ್‌ ದೇವಲ್‌, ನುಜತ್‌ ಪರ್ವೀನ್‌, ಪೂನಂ ಯಾದ್‌.

ಇಂಗ್ಲೆಂಡ್‌: ಹೀತರ್‌ ನೈಟ್‌ (ನಾಯಕಿ), ಆ್ಯಮಿ ಎಲೆನ್‌ ಜೋನ್ಸ್‌, ಡೇನಿಯಲ್‌ ವ್ಯಾಟ್‌, ನಥಾಲಿ ಶೀವರ್‌, ಫ್ರಾನ್‌ ವಿಲ್ಸನ್‌, ಕ್ಯಾಥರಿನ್‌ ಬ್ರಂಟ್‌, ಟಾಮಿ ಬೇಮಂಟ್‌, ಲಾರೆನ್‌ ವಿನ್‌ಫೀಲ್ಡ್‌, ಫ್ರೆàಯ ಡೇವಿಸ್‌, ಸೋಫಿ ಎಕಲ್‌ಸ್ಟೋನ್‌, ಸಾರಾ ಗ್ಲೆನ್‌, ಅನ್ಯಾ ಶ್ರಬೊÕàಲ್‌, ಜಾರ್ಜ್‌ ಎಲ್ವಿಸ್‌, ಕೇಟ್‌ ಕ್ರಾಸ್‌, ಮ್ಯಾಡಿ ವಿಲಿಯರ್.

ಆರಂಭ: ಬೆಳಗ್ಗೆ 8.40
ಪ್ರಸಾರ: ಸೋನಿ ನೆಟ್‌ವರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next