ಲೋಕಾಪುರ: ಮೂರು ತಿಂಗಳಿಂದ ಕುಡಿಯುವ ನೀರಿನ ಸರಬರಾಜು ಇಲ್ಲದ್ದನ್ನು ಖಂಡಿಸಿ ಚೌಡಾಪುರ ಗ್ರಾಮದ ಎಸ್.ಸಿ ಕಾಲೋನಿ ನಿವಾಸಿಗಳು ಹಾಗೂ ಮಹಿಳೆಯರು ಮಂಗಳವಾರ ಖಾಲಿ ಕೊಡಗಳೊಂದಿಗೆ ಲಕ್ಷಾನಟ್ಟಿ ಗ್ರಾಪಂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಳೆದ 3 ತಿಂಗಳಿಂದ ಚೌಡಾಪುರ ಎಸ್.ಸಿ ಕಾಲೋನಿಯ ಗ್ರಾಮಸ್ಥರು ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದು, ಗ್ರಾಮ ಪಂಚಾಯತಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಿತ್ಯದ ಕೆಲಸ ಬಿಟ್ಟು ನೀರು ತರುವುದೇ ಒಂದು ಉದ್ಯೋಗವಾಗಿದೆ. ಕೊಡ ನೀರಿಗಾಗಿ 2-3 ಕಿ.ಮೀ ದೂರ ಸಾಗುವ ಅನಿವಾರ್ಯತೆ ಎದುರಾಗಿದ್ದು, ಪಕ್ಕದ ಗ್ರಾಮದಿಂದ ನೀರು ತರಬೇಕಾದ ಅನಿವಾರ್ಯತೆ ಎದುರಾಗಿದೆ. ಕೂಡಲೇ ಸಮರ್ಪಕ ನೀರು ಪೂರೈಸುವಂತೆ ಆಗ್ರಹಿಸಿದರು.
ಕುಡಿಯುವ ನೀರಿನ ಯೋಜನೆ ಮತ್ತು ಕೊಳವೆ ಬಾವಿಗಳಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿರುವ ಕಾರಣ ನೀರಿನ ಪೂರೈಕೆ ಬಂದ್ ಆಗಿದೆ. ಇದರಿಂದ ಗ್ರಾಮದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಸಂಬಂಧ ಅಧಿಕಾರಿಗಳು ಕ್ರಮ ವಹಿಸಬೇಕು ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ಕುಡಿಯುವ ನೀರಿಗೆ ಅಭಾವ ಉಂಟಾಗಿತ್ತು. ಈ ಬಗ್ಗೆ ಗ್ರಾಪಂಗೆ ಮನವಿ ಮಾಡಿದರೂ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಲ್ಲಿ ಗಂಭೀರ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ನೀರಿನ ಕೊರತೆಯಿಂದ ಬಳಲುತ್ತಿದ್ದು, ತಮ್ಮ ಮನೆಯಿಂದ ಕುಡಿಯಲು ದಿನಾಲು ನೀರಿನ ಬಾಟಲಿಗಳನ್ನು ತೆಗೆದುಕೊಂಡು ಬರುವಂತಾಗಿದೆ. ಇದರಿಂದ ಈ ಶಾಲೆಯಲ್ಲಿ ಅಡುಗೆ ಮಾಡಲು ನೀರಿನ ಕೊರತೆ ಇರುವುದರಿಂದ ಬೇರೆ ಕಡೆಯಿಂದ ನೀರು ತಂದು ಮಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುತ್ತಪ್ಪ ಮಾಳಿ ಮತ್ತು ಈರಪ್ಪ ದೊಡಮನಿ, ಹನಮವ್ವ ಈರಣ್ಣ ಮಾದರ, ಯಲ್ಲವ್ವ ದೊಡಮನಿ, ಗಂಗವ್ವ ಮಾದರ, ಯಮನವ್ವ ದೊಡಮನಿ, ಸುಸಲವ್ವ ದೊಡಮನಿ, ಮಹಾದೇವಿ ಮಾದರ, ಬಸವ್ವ ಮಾದರ, ಹನಮವ್ವ ದೊಡಮನಿ, ರಾಮಣ್ಣ ದೊಡಮನಿ ವೆಂಕಣ್ಣ ದೊಡಮನಿ, ಶಂಕರ ದೊಡಮನಿ, ಹನಮಂತ ದೊಡಮನಿ, ಮಹಾದೇವ ನರಸಾಪುರ, ಪ್ರಜ್ವಲ್ ದೊಡಮನಿ, ಕಾಶಿನಾಥ ದೊಡಮನಿ, ಪುಂಡಲಿಕ ದೊಡಮನಿ, ಮಲ್ಲಪ್ಪ ದೊಡಮನಿ, ಇತರರು ಇದ್ದರು.