Advertisement

ರಾಜಕೀಯ ಮೀಸಲಾತಿಗಾಗಿ ಮಹಿಳೆಯರು ಹೋರಾಟ ನಡೆಸಬೇಕು: ಸಿಎಂ

06:35 AM Mar 03, 2018 | |

ಬೆಂಗಳೂರು: ಸಂಸತ್‌ ಮತ್ತು  ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿಗಾಗಿ ಮಹಿಳೆಯರು ಹೊರಾಟ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Advertisement

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ “ವುಮೆನ್‌ ಆಫ್ ವರ್ತ್‌ ಕರ್ನಾಟಕ’ ಮಹಿಳಾ ಉದ್ಯಮಿಗಳ ಸಮಾವೇಶ ಉದ್ಘಾಟಿಸಿ, ಹಾರೋಹಳ್ಳಿ, ಇಮ್ಮಾವು, ಕುಡಿತಿನಿ ಕೈಗಾರಿಕಾ ಪ್ರದೇಶಗಳಲ್ಲಿ ಮಹಿಳಾ ಉದ್ಯಮಿಗಳ ಪಾರ್ಕ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸಂಸತ್‌ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸಂಬಂಧದ ಮಸೂದೆ ಸಂಸತ್‌ನಲ್ಲಿ  1996ರಲ್ಲಿ ಮಂಡನೆಯಾದರೂ ಅಂಗೀಕಾರಗೊಂಡಿಲ್ಲ.  ನಾವು ಎಷ್ಟೇ ಪ್ರಯತ್ನಿಸಿದರೂ ಮಹಿಳೆಯರಿಗೆ ಶೇ.5-6ರಷ್ಟು ಮೀಸಲಾತಿಯನ್ನಷ್ಟೇ ಕೊಡಲು ಸಾಧ್ಯವಾಗುತ್ತಿದೆ. ಶೇ.10ರಷ್ಟು ಅವಕಾಶ ನೀಡಲು ಸಾಧ್ಯವಾಗದ ಸ್ಥಿತಿ ಇದೆ. ಮೀಸಲಾತಿ ಇದ್ದರಷ್ಟೇ ಅವಕಾಶ ಸಿಗಲಿದ್ದು, ರಾಜಕೀಯ ಅಧಿಕಾರಕ್ಕಾಗಿ ಮಹಿಳೆಯರು ಹೋರಾಟ ನಡೆಸಬೇಕು ಎಂದು ಹೇಳಿದರು.

ಮಹಿಳಾ ಸಮಾವೇಶ ನಡೆಯುತ್ತಿರುವ ಈ ದಿನವನ್ನು ರಾಜ್ಯದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಮಹಿಳೆಯರ ಬಾಳಲ್ಲಿ ಬೆಳಕು ಮೂಡಿಸಲು ಈ ಸಮಾವೇಶ ನಾಂದಿ ಹಾಡಲಿ. ಬಸವೇಶ್ವರರು 12ನೇ ಶತಮಾನದಲ್ಲೇ ಮಹಿಳೆಯರಿಗೆ ಸಮಾನ ಅವಕಾಶ ನೀಡಿ ಅನುಭವ ಮಂಟಪದಲ್ಲಿ ಸ್ಥಾನಮಾನ ನೀಡಿದ್ದರು. ಅದರಂತೆ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೆ ಅವಕಾಶ ನೀಡಬೇಕು. ಅಧಿಕಾರ, ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು ಎಂದು ತಿಳಿಸಿದರು.

1,000 ಪುರುಷರಿಗೆ 947 ಮಹಿಳೆಯರಷ್ಟೇ ಇದ್ದು, ಕೆಲ ಸ್ವಾರ್ಥಿಗಳು ಹಾಗೂ ಭ್ರೂಣಹತ್ಯೆ ಯಿಂದಾಗಿ ಅಸಮತೋಲನ ಉಂಟಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮ ಕ್ಷೇತ್ರಕ್ಕೆ ಬರುತ್ತಿರುವುದು ಸ್ವಾಗತಾರ್ಹ. ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

Advertisement

34,388 ಕೋಟಿ ರೂ. ಅನುದಾನ: ಮಹಿಳೆಯರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಬಜೆಟ್‌ ಮಂಡಿಸುವ ಚಿಂತನೆಯಿತ್ತು. ಮಹಿಳೆಯರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ನಾನಾ ಇಲಾಖೆಗಳಡಿ ಒಟ್ಟು 34,388 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುದಾನ ಮೂರು ಪಟ್ಟು ಹೆಚ್ಚಿಸಿರುವುದು ಇತಿಹಾಸ. ಮಹಿಳಾ ಉದ್ಯಮಿಗಳಿಗೂ ಕೈಗಾರಿಕಾ ಪ್ರದೇಶ ಕಾಯ್ದಿರಿಸುವ ಕಾರ್ಯಕ್ಕೂ ಒತ್ತು ನೀಡಲಾಗಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದ್ದು, ಶಾಲೆಯಿಂದ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಬಸ್‌ ಪ್ರಯಾಣ ಉಚಿತಗೊಳಿಸಲಾಗಿದೆ ಎಂದು ಹೇಳಿದರು.

ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪಾಲುದಾರರಾಗಿದ್ದು, ಅವರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಗುಣಮಟ್ಟದ ಸೇವೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ 11ನೇ ಮಹಿಳಾ ಸಮ್ಮೇಳನ ನಡೆಯುತ್ತಿದೆ. ಮಹಿಳಾ ಉದ್ಯಮಶೀಲತೆಗೆ ಆದ್ಯತೆ ನೀಡಲಾಗುತ್ತಿದ್ದು, ಇದು ಸರಕಾರದ ಜವಾಬ್ದಾರಿ ಎಂದು ಭಾವಿಸಲಾಗಿದೆ ಎಂದು ತಿಳಿಸಿದರು.

ದೇಶದಲ್ಲೇ ಪ್ರಥಮ
ಮಹಿಳೆಯರಿಗೆಂದೇ ಪ್ರತ್ಯೇಕ ಕೈಗಾರಿಕಾ ಪ್ರದೇಶ ನಿರ್ಮಿಸುತ್ತಿರುವುದು ದೇಶದಲ್ಲೇ ಪ್ರಥಮ. ಕಲಬುರಗಿ, ಗಾಮನಗಟ್ಟಿಯಲ್ಲಿ ಈಗಾಗಲೇ ಮಹಿಳಾ ಪಾರ್ಕ್‌ ನಿರ್ಮಾಣ ಕಾರ್ಯ ಆರಂಭವಾಗಿದೆ. ಅಗತ್ಯಬಿದ್ದರೆ ಪ್ರತಿ ಜಿಲ್ಲೆಯಲ್ಲೂ ಪ್ರತ್ಯೇಕ ಮಹಿಳಾ ಕೈಗಾರಿಕಾ ಪಾರ್ಕ್‌ ಸೌಲಭ್ಯ ಕಲ್ಪಿಸಲಾಗುವುದು. ಮಹಿಳೆಯರಿಗೆ ಅವಕಾಶ ನೀಡಿದರೆ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸುತ್ತಾರೆ. ಕೆಲ ಪಂಚಾಯತ್‌ಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮಹಿಳಾ ಸದಸ್ಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next