Advertisement

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಅಭಿವೃದ್ಧಿ ಸಾಧಿಸಲಿ

11:58 AM Mar 14, 2019 | |

ವಿಜಯಪುರ: ಅಭಿವೃದ್ಧಿ ಎನ್ನುವುದು ಒಂದೇ ಕ್ಷೇತ್ರದಲ್ಲಿ ಆಗುವುದಲ್ಲ. ಅದು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಂಪ್ರದಾಯಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ| ಸುಧೇಷ್ಣಾ ಮುಖರ್ಜಿ ಅಭಿಪ್ರಾಯಪಟ್ಟರು.

Advertisement

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಮತ್ತು ಸಮಾನತೆ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ಗೋಷ್ಠಿಯಲ್ಲಿ ಅಭಿವೃದ್ಧಿಯಲ್ಲಿ ಲಿಂಗತ್ವದ ದೃಷ್ಟಿಕೋನಗಳ ವಿಷಯದ ಕುರಿತು ಅವರು ಮಾತನಾಡಿದರು. 

ಸಮಾಜದಲ್ಲಿರುವ ಪ್ರತಿಯೊಬ್ಬ ಮಹಿಳೆಯೂ ಕೆಲಸ ಮಾಡುತ್ತಾಳೆ. ಆದರೆ ಕೆಲವು ಜನ ಮಾತ್ರ ಸಂಬಳ ಪಡೆದುಕೊಳ್ಳುತ್ತಾರೆ. ಗೃಹಿಣಿಯಾಗಿ ಮಾಡುವ ಕೆಲಸವನ್ನು ಕೆಲಸ ಎಂದು ಭಾವಿಸುವ ಮಾತಿರಲಿ, ಮನೆಯಲ್ಲಿ ನಿರಂತರ ದುಡಿಯುವ ಮಹಿಳೆಯನ್ನು ನಿರುದ್ಯೋಗಿ ಎಂತಲೂ ಭಾವಿಸಲಾಗುತ್ತಿರುವುದು ವಿಷಾದನೀಯ ಎಂದರು.

ಆಧುನಿಕ ದಿನಗಳಲ್ಲೂ ಮಹಿಳೆ ಸಹ ಶಿಕ್ಷಣ, ಆರೋಗ್ಯ, ಉದ್ಯೋಗ ಇತರ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಪ್ರತಿಭೆ ಸಮರ್ಥಿಸುತ್ತಿದ್ದರೂ ಲಿಂಗ ಸಮಾನತೆ ಅಂತರ ಹೆಚ್ಚಾಗುತ್ತಿದೆ. ಮತ್ತೂಂದೆಡೆ ಮಹಿಳಾ ಸಬಲೀಕರಣಕ್ಕಾಗಿ ಕೇವಲ ಯೋಜನೆಗಳನ್ನು ರೂಪಿಸಿದರೆ ಅದರಿಂದ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಬದಲಾಗಿ ಅವರಿಗೆ ಸರಿಯಾದ ಸಮಯದಲ್ಲಿ ಅವಕಾಶಗಳನ್ನು ನೀಡಿದರೆ ಅವರು ಸಹ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

ಮಹಿಳೆಯನ್ನು ಕೇವಲ ಒಂದೇ ಕೆಲಸಕ್ಕೆ ಮಾತ್ರ ಸೀಮಿತವಾಗಿಸದೇ ಅವಳಲ್ಲಿರುವ ವಿಶಿಷ್ಟ ಆಲೋಚನೆಗಳನ್ನು ಹೊರ ತಂದು ಅಭಿವೃದ್ಧಿ ಸಾಧಿಸಬಹುದು. ಅಂದಾಗ ಮಾತ್ರ ಲಿಂಗ ಅಸಮಾನತೆಯನ್ನು ಹೋಗಲಾಡಿಸಬಹುದು ಎಂದು ಹೇಳಿದರು.  

Advertisement

ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರು ಹೆಚ್ಚಾಗಿ ಭಾಗವಹಿಸುತ್ತಾರೆ. ಪ್ರಸ್ತುತ ದಿನಗಳಲ್ಲಿ ಆಧುನಿಕ ಕೃಷಿಯಲ್ಲಿ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಕುಟುಂಬದ ಆರ್ಥಿಕತೆ ಹೆಚ್ಚಾಗುತ್ತಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

ಚುನಾವಣಾ ಪ್ರಣಾಳಿಕೆ ಜನಹಿತ ಹೊಂದಿರಲಿ 
ವಿಜಯಪುರ: ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಜನತೆಗೆ ನೀಡುವ ಭರವಸೆಗಳ ಪ್ರಣಾಳಿಕೆಗಳು ಜನ ಸಮುದಾಯಕ್ಕೆ ಉಪಯುಕ್ತ ಆಗುವಂತರಿಬೇಕು. ಸಾರ್ವಜನಿಕ ಹಿತಾಸಕ್ತಿಗಳನ್ನು ಒಳಗೊಂಡಿರಬೇಕು ಎಂದು ಕೆನಡಾದ ಇಂಡಿಯಾ ಆಬ್ಸರ್ವರ್‌ ಪತ್ರಿಕೆ ಸಂಪಾದಕ ಬಿ.ವಿ. ನಾಗರಾಜು ಹೇಳಿದರು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಮತ್ತು ಸಮಾನತೆ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ಗೋಷ್ಠಿಯಲ್ಲಿ ಅಭಿವೃದ್ಧಿ ದೃಷ್ಟಿಕೋನದಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆ ಕುರಿತು ವಿಷಯ ಮಂಡಿಸಿದ ಅವರು, ಪ್ರತಿಯೊಬ್ಬ ಮತದಾರ ವಿವೇಚನೆಯಿಂದ ಮತದಾನ ಮಾಡಿ ಉತ್ತಮ, ದಕ್ಷ ಆಡಳಿತಗಾರನ್ನು ಆಯ್ಕೆ ಮಾಡಬೇಕು. 

ಇದರಿಂದ ಸಮಾಜದಲ್ಲಿ ಸಮಾನತೆ ತಂದು ಅಭಿವೃದ್ಧಿ ಸಾಧಿಸಬಹುದು ಎಂದರು. ಪ್ರತಿಯೊಬ್ಬರಿಗೂ ಚುನಾವಣೆ ಬಗ್ಗೆ ಅರಿವು ಇರುವುದಿಲ್ಲ. ಅಂತವರಿಗೆ ಅಕ್ಷರಸ್ಥರು ತಮ್ಮ ಸುತ್ತಮುತ್ತ ಇರುವವರಿಗೆ ಚುನಾವಣೆ ಬಗ್ಗೆ ಅರಿವು ಮೂಡಿಸಬೇಕು. ಆಡಂಬರದ ಚುನಾವಣೆ ಪ್ರಚಾರ ಈ ದೇಶದಲ್ಲಿ ಹೆಚ್ಚು ಇರುತ್ತದೆ. ಈ ಪ್ರಚಾರಕ್ಕೆಂದೇ ಎಷ್ಟೋ ಹಣವನ್ನು ಖರ್ಚು ಮಾಡುತ್ತಾರೆ. ಇದೇ ಹಣವನ್ನು ಜನರ ಒಳಿತಿಗಾಗಿ ಬಳಸಿದ್ದರೆ ಇಷ್ಟೊತ್ತಿಗೆ ಎಷ್ಟೋ ಅಭಿವೃದ್ಧಿ ಸಾಧಿಸಬಹುದಿತ್ತು. ಕೇವಲ ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಾರೆ‌ ಎಂದು ವಿಷಾದಿಸಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ ನಾಯಕ ನಿರೂಪಿಸಿದರು. ಸುವರ್ಣಾ ಕಂಬಿ ಸ್ವಾಗತಿಸಿದರು. ಗೀತಮ್ಮ ಅಂಗಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next