ದಾವಣಗೆರೆ: ಒಂದನೇ ವಾರ್ಡ್ ವ್ಯಾಪ್ತಿಯ ಅಶೋಕ ನಗರ, ನೇಕಾರ ಕಾಲೋನಿ, ಶ್ರೀರಾಮ ಬಡಾವಣೆಯಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಮಹಾನಗರಪಾಲಿಕೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಗುರುವಾರ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರಪಾಲಿಕೆ ಎದುರು ಪ್ರತಿಭಟಿಸಿದರು.
1ನೇ ವಾರ್ಡ್ ವ್ಯಾಪ್ತಿಯ ಬಡಾವಣೆಯಲ್ಲಿ ನಾಗರಿಕರು ಹಲವು ವರ್ಷದಿಂದಲೂ ಕುಡಿಯುವ ನೀರು, ಒಳ ಚರಂಡಿ, ಬೀದಿದೀಪ ಒಳಗೊಂಡಂತೆ ಅಗತ್ಯ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಿತರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ದಾವಣಗೆರೆ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿ ಒಂದು ವರ್ಷ ಕಳೆದರೂ ಅಶೋಕ ನಗರ, ನೇಕಾರ ಕಾಲೋನಿ, ಶ್ರೀರಾಮ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಬಯಲು ಶೌಚಾಲಯವೇ ಅನಿವಾರ್ಯವಾಗಿದೆ. ಮಹಿಳೆಯರು, ವಯೋವೃದ್ಧರ ಪಾಡಂತೂ ಹೇಳ ತೀರದು. ಸ್ವತ್ಛ ಭಾರತ ಕಲ್ಪನೆ ಈ ಭಾಗದಲ್ಲಿ ಹಾಸ್ಯಾಸ್ಪದಂತಾಗಿದೆ. ಮಹಾನಗರಪಾಲಿಕೆಯ ಮೊದಲ ವಾರ್ಡ್‌ನಲ್ಲಿನ ದುಸ್ಥಿತಿ ನಾಚಿಕೆಗೇಡಿನ ಸಂಗತಿ ಎಂದು ಪ್ರತಿಭಟನಾಕಾರರು ದೂರಿದರು.
ಸಂಬಂಧಿತ ಜನಪ್ರತಿನಿಧಿಗಳು, ಆಯುಕ್ತರು, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಗತ್ಯ ಸೌಲಭ್ಯ ಒದಗಿಸಬೇಕು. ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ನಿವಾರಿಸಬೇಕು. ಇಲ್ಲದೇ ಹೋದಲ್ಲಿ ಕರ ನಿರಾಕರಣೆ ಒಳಗೊಂಡಂತೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್, ವಿ.ಎಸ್. ನರಸಿಂಹಮೂರ್ತಿ, ರಾಜನಹಳ್ಳಿ ಶಿವಕುಮಾರ್, ಎನ್. ರಾಜಶೇಖರ್, ಶಿವನಗೌಡ ಪಾಟೀಲ್, ಶಿವಪ್ರಕಾಶ್ ಅಣಬೇರು, ವಿಜಯಲಕ್ಷ್ಮಿ, ಪಾರ್ವತಮ್ಮ, ಜ್ಯೋತಿ, ಪಾರ್ವತಮ್ಮ, ದಾಕ್ಷಾಯಣಮ್ಮ ಇತರರು ಇದ್ದರು.