ಮುಂಬಯಿ: ಶನಿವಾರದಿಂದ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಮುಂಬಯಿಲ್ಲಿ ಆರಂಭವಾಗಲಿದೆ. ಭಾರತೀಯ ಮಹಿಳಾ ಕ್ರಿಕೆಟಿಗರು ಈ ಖುಷಿಯಲ್ಲಿರುವಾಗಲೇ, ಮಹಿಳಾ ಕಬಡ್ಡಿ ಆಟಗಾರ್ತಿಯರ ಪಾಲಿಗೂ ಸಂತಸದ ಸುದ್ದಿಯೊಂದು ಕೇಳಿಬಂದಿದೆ. ಈ ವರ್ಷ 10ನೇ ಆವೃತ್ತಿ ಪುರುಷರ ಪ್ರೊ ಕಬಡ್ಡಿ ಲೀಗ್ ಜತೆಗೆ ಮಹಿಳಾ ಲೀಗ್ ಕೂಡ ಆರಂಭವಾಗಲಿದೆ. ಇದನ್ನು ಪ್ರೊ ಕಬಡ್ಡಿ ಸಂಘಟಕರಾದ “ಮಾಷಲ್ ಸ್ಪೋ ರ್ಟ್ಸ್” ಘೋಷಿಸಿದೆ.
ಪುರುಷರ ಪ್ರೊ ಕಬಡ್ಡಿಗೆ ಸಿಕ್ಕಿರುವ ಯಶಸ್ಸಿನಿಂದ ಮಹಿಳಾ ಲೀಗ್ ಆರಂಭಿಸಲು ನಿರ್ಧರಿಸಲಾಗಿದೆ. ಭಾರತದಲ್ಲಿ ಕಬಡ್ಡಿಯನ್ನು ಒಂದು ವಿಶ್ವದರ್ಜೆಯ ಕ್ರೀಡೆಯನ್ನಾಗಿ ಬೆಳೆಸಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿ ನಾವು ಹಲವರೊಂದಿಗೆ ಕೈಜೋಡಿಸಿದ್ದೇವೆ. ಭಾರತದ ಅಮೆಚೂರ್ ಕಬಡ್ಡಿ ಒಕ್ಕೂಟ (ಎಕೆಎಫ್ಐ), ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟಗಳೊಂದಿಗೆ (ಐಕೆಎಫ್) ಸೇರಿಕೊಂಡು ಈ ಕೆಲಸ ಮಾಡಲಿದ್ದೇವೆ ಎಂದು ಪ್ರೊ ಕಬಡ್ಡಿ ಆಯುಕ್ತ ಅನುಪಮ್ ಗೋಸ್ವಾಮಿ ಹೇಳಿದ್ದಾರೆ.
ಈ ಕೂಟದಿಂದ ಭಾರತದ ಮಹಿಳಾ ಕಬಡ್ಡಿ ಎದುರಿಸುತ್ತಿರುವ ಸಮಸ್ಯೆಗಳ ಅರಿವು ಮಾಷಲ್‌ಗೆ ಉಂಟಾಗಲಿದೆ. 2016ರಲ್ಲಿ ಮಾಷಲ್ ಮೂರು ತಂಡಗಳ ಪ್ರಾಯೋಗಿಕ ಕೂಟವನ್ನು ನಡೆಸಿತ್ತು. ಆಗ ಫೈರ್‌ಬರ್ಡ್ಸ್, ಐಸ್ ದಿವಾಸ್, ಸ್ಟಾರ್ಮ್ಕ್ವೀನ್ಸ್ ತಂಡಗಳು ಸೆಣಸಿದ್ದವು.