ಮಣಿಪಾಲ: ದಾವಣಗೆರೆ ಬಳಿ ಸಂಭವಿಸಿದ ರಸ್ತೆ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮಹಿಳೆಯೊಬ್ಬರ ಅಂಗಾಂಗಳನ್ನು ದಾನ ಮಾಡಿ ಜೀವನದ ಸಾರ್ಥಕತೆ ಮೆರೆದಿದ್ದಾರೆ.
ದಾವಣಗೆರೆ ಬಳಿ ಗುಡಾಲು ಗ್ರಾಮದ ಗುಮ್ಮನೂರು ರಸ್ತೆಯಲ್ಲಿ ಜ. 22ರ ಸಂಜೆ ಅಪಘಾತ ಸಂಭವಿಸಿತ್ತು. ನಂಜುಂಡಪ್ಪ ಎಚ್.ಎನ್. ಅವರ ಪತ್ನಿ ಇಂದ್ರಮ್ಮ ಬಿ.ಎಂ. (57) ಗಂಭೀರ ಗಾಯಗೊಂಡಿದ್ದು, ಜ. 23ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಗಂಭೀರ ಪ್ರಯತ್ನದ ಹೊರತಾಗಿಯೂ ಚೇತರಿಸಿಕೊಳ್ಳದ ಅವರನ್ನು 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದರು.
1994ರ ಮಾನವ ಹಕ್ಕುಗಳ ಕಾಯಿದೆಯ ಪ್ರಕಾರ ನಂಜುಂಡಪ್ಪ ಅವರು ಕಾರ್ಯಸಾಧ್ಯವಾದ ಅಂಗ ಗಳನ್ನು ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ಅದರಂತೆ ಹೃದಯ/ಹೃದಯ ಕವಾಟಗಳು, ಯಕೃತ್ತು, 2 ಮೂತ್ರಪಿಂಡ ಗಳು ಮತ್ತು ಎರಡು ಕಾರ್ನಿಯಾಗಳು / ಕಣ್ಣುಗುಡ್ಡೆಗಳನ್ನು ತೆಗೆದು 6 ಮಂದಿಗೆ ದಾನ ಮಾಡಲಾಯಿತು.
ನೋಂದಾಯಿತ ರೋಗಿಗಳಿಗಾಗಿ 2 ಕಾರ್ನಿಯಾ ಮತ್ತು ಒಂದು ಮೂತ್ರ ಪಿಂಡವನ್ನು ಮಣಿಪಾಲದ ಆಸ್ಪತ್ರೆ ಯಲ್ಲಿ ಬಳಸಿಕೊಂಡರೆ, ಒಂದು ಮೂತ್ರಪಿಂಡವನ್ನು ಮಂಗಳೂರಿನ ಯೇನಪೊಯ ಆಸ್ಪತ್ರೆಗೆ, ಹೃದಯ/ಹೃದಯ ಕವಾಟವನ್ನು ಚೆನ್ನೈಯ ಎಂಜಿಎಂ ಆಸ್ಪತ್ರೆಯ ರೋಗಿಗಳಿಗೆ ಕಳುಹಿಸಿಕೊಡಲಾಯಿತು. ಅಂಗಗಳನ್ನು ಹಸುರು ಪಥ (ಗ್ರೀನ್ ಕಾರಿಡಾರ್)ದಲ್ಲಿ ಮಣಿಪಾಲ ದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಉಡುಪಿಯ ಪೊಲೀಸ್ ಸಹಯೋಗದೊಂದಿಗೆ ಚೆನ್ನೈಗೆ ಕಳುಹಿಸಲಾಯಿತು.
ಅಂಗದಾನ ಒಂದು ಪುಣ್ಯದ ಕೆಲಸ. ನನ್ನ ಪತ್ನಿ ಅಂಗದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.
– ನಂಜುಂಡಪ್ಪ, ಮೃತ ಇಂದ್ರಮ್ಮ ಅವರ ಪತಿ
ಅಂಗದಾನ ಶ್ರೇಷ್ಠ ಕೆಲಸವಾಗಿದ್ದು ಅತ್ಯಂತ ಮಹತ್ವ ಪಡೆದಿದೆ. ಜನರು ಈ ರೀತಿಯ ಉತ್ತಮ ಕಾರ್ಯಗಳನ್ನು ಪ್ರೋತ್ಸಾಹಿಸಬೇಕು.
– ಡಾ| ಅವಿನಾಶ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು, ಮಣಿಪಾಲ ಆಸ್ಪತ್ರೆ