ಚಿಂತಾಮಣಿ: ನಾಲ್ಕು ತಿಂಗಳುಗಳಿಂದ ಗ್ರಾಮದಲ್ಲಿ ಕುಡಿಯುವ ನೀರು ಇಲ್ಲವೆಂದು ಉಪ್ಪರಪೇಟೆ ಗ್ರಾಪಂ ವ್ಯಾಪ್ತಿಯ ಬೊಮ್ಮೆಕಲ್ಲು ಗ್ರಾಮದ ಮಹಿಳೆಯರು ಬೀದಿಗೀಳಿದು ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ನಡೆಯಿತು.
ಅಧಿಕಾರಿಗಳ ನಿರ್ಲಕ್ಷ್ಯ: ಗ್ರಾಮದಲ್ಲಿ ಕಳೆದ 4 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಬಂದೊದಗಿದ್ದು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ವತಿಯಿಂದ ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 40 ಲೀ. ನೀರು ಸರಬರಾಜು ಮಾಡಬೇಕು. ಆದರೆ ಗ್ರಾಪಂ ವತಿಯಿಂದ ಕನಿಷ್ಟ 5 ಲೀ. ನೀರು ಸಹ ಸರಬರಾಜು ಮಾಡುತ್ತಿಲ್ಲ ಎಂದು ದೂರಿದರು.
ಟ್ಯಾಂಕರ್ ನೀರು ಸರಬರಾಜು ಇಲ್ಲ: ಕಳೆದ ನಾಲ್ಕು ತಿಂಗಳ ಹಿಂದೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರೂ ಈಗ ಅದು ಸಹ ಇಲ್ಲ. ನಲ್ಲಿಗಳಿಂದಲೂ ನೀರು ಬರುತ್ತಿಲ್ಲ. ನೀರಿಗಾಗಿ ಖಾಸಗಿ ಕೊಳವೆ ಬಾವಿಗಳ ಬಳಿ ಹೋದರೆ ಮಾಲೀಕರು ಮನಬಂದಂತೆ ಬೈದು ಕಳುಹಿಸುತ್ತಾರೆ. ಸಾರ್ವಜನಿಕ ಕೊಳವೆ ಬಾವಿಯಲ್ಲಿ ನಿತ್ಯ ಬಳಕೆಗೆ ಫ್ಲೋರೈಡ್ ಮಿಶ್ರಿತ ನೀರು ಬರುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಆ ನೀರು ಸಹ ಇಲ್ಲ. ಕುಡಿಯಲು ಮತ್ತು ಬಳಕೆಗೆ ನೀರಿಲ್ಲದೇ ಪರದಾಡುವಂತಾಗಿದೆ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.
ಗ್ರಾಮಕ್ಕೆ ಪಿಡಿಒ ಭೇಟಿ, ಭರವಸೆ: ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಉಪ್ಪರಪೇಟೆ ಗ್ರಾಪಂ ಪಿಡಿಒ ಶ್ರೀನಾಥ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಶೀಘ್ರವೇ ನೀರಿನ ಸಮಸ್ಯೆ ನೀಗಿಸುತ್ತೆವೆ ಎಂದು ಭರವಸೆ ನೀಡಿದ ನಂತರ ಮಹಿಳೆಯರು ಪ್ರತಿಭಟನೆ ಕೈಬಿಟ್ಟರು.
500 ರೂ. ಕೊಟ್ಟರು ಟ್ಯಾಂಕರ್ ಬರುತ್ತಿಲ್ಲ: ಇನ್ನೂ ಈಕುರಿತು ಪಿಡಿಒ ಶ್ರೀನಾಥ್ ಅವರನ್ನು ಸಂಪರ್ಕಿಸಿದಾಗ, ಬೊಮ್ಮೆಕಲ್ಲು ಗ್ರಾಮದಲ್ಲಿನ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಆದ್ದರಿಂದ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕೆಂದರೆ ಒಂದು ಟ್ಯಾಂಕರ್ ನೀರಿಗೆ 600 ರಿಂದ 700 ರೂ. ಕೇಳುತ್ತಾರೆ ಆದರೆ ಸರ್ಕಾರದಿಂದ ನಮಗೆ ನೀಡುವುದು ಕೇವಲ 500 ರೂ. ಮಾತ್ರ. ಹಾಗಾಗಿ ಟ್ಯಾಂಕರ್ ನೀರು ಸರಬರಾಜು ಮಾಡಲು ಕಷ್ಟವಾಗಿದೆ ಎಂದರು.
ಬೊಮ್ಮೆಕಲ್ಲು ಗ್ರಾಮದಲ್ಲಿರುವ ಎರಡು ಕೊಳವೆ ಬಾವಿಗಳ ಪೈಕಿ ಒಂದರಲ್ಲಿ ಫ್ಲೋರೈಡ್ ನೀರು ಹೆಚ್ಚಾಗಿ ಬರುತ್ತಿರುವುದರಿಂದ ಬಳಕೆ ಸಾಧ್ಯವಾಗುತ್ತಿಲ್ಲ. ಶುದ್ಧೀಕರಣ ಮಾಡೋಣ ಎಂದರೆ ಶೇ.60 ರಷ್ಟು ನೀರು ಪೋಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೀರು ಸರಬರಾಜು ನಿಲ್ಲಿಸಿದ್ದೇವೆ. ಉಳಿದ ಶುದ್ಧ ನೀರಿನ ಕೊಳವೆ ಬಾವಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ನೂತನ ಕೊಳವೆ ಬಾವಿ ಕೊರೆಸಬೇಕು, ಇಲ್ಲವಾದರೆ ಮಳೆ ಬರುವವರೆಗೂ ನೀರಿನ ಸಮಸ್ಯೆ ನೀಗಿಸಲು ಕಷ್ಟ.
-ಶ್ರೀನಾಥ, ಪಿಡಿಒ ಉಪ್ಪರಪೇಟೆ ಗ್ರಾಪಂ