ರಾಯಚೂರು: ಮಹಿಳೆಯರು ತಮ್ಮ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಸಹಿಸಿಕೊಳ್ಳುತ್ತಿರುವ ಕಾರಣ ಆಯೋಗಕ್ಕೆ ಸಲ್ಲಿಕೆಯಾಗುವ ದೂರುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಜಲನಿರ್ಮಲ ಸಭಾಂಗಣದಲ್ಲಿ ಬುಧವಾರ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯಕ್ಕೆ ಹೋಲಿಸಿದರೆ ಮಹಿಳಾ ಪ್ರಕರಣಗಳ ಸಂಖ್ಯೆ ರಾಯಚೂರು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಇದೆ. ಅದರರ್ಥ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆ ಇದೆಯಂತಲ್ಲ. ಮಹಿಳೆಯರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಜಿಲ್ಲೆಯಿಂದ ಕೇವಲ ಒಬ್ಬ ಮಹಿಳೆ ಮಾತ್ರ ದೂರು ಸಲ್ಲಿಸಿದ್ದಾರೆ. ಹಲವು ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯಗಳನ್ನು ಸಹಿಸಿಕೊಂಡೇ ಹೋಗುತ್ತಿದ್ದಾರೆ. ಈ ಕುರಿತು ಅವರಿಗೆ ಜಾಗೃತಿ ಮೂಡಿಸಬೇಕು. ಮಹಿಳೆಯರು ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಬೇಕು. ಠಾಣೆಗೆ ಬಂದು ದೂರು ಸಲ್ಲಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಆಯೋಗ, ಮಹಿಳಾ ಠಾಣೆಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ದೌರ್ಜನ್ಯ ಇನ್ನೂ ಜೀವಂತವಾಗಿದೆ ಎಂದು ವಿಷಾದಿಸಿದರು.
ಸಾಮಾನ್ಯವಾಗಿ ಬಾಲ್ಯ ವಿವಾಹ ಪ್ರಕರಣಗಳು ದೇವಸ್ಥಾನ, ಮನೆ ಹಾಗೂ ಅರ್ಚಕರಿಂದಲೇ ನಡೆಯುತ್ತವೆ. ಇವುಗಳ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದರು. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸ್ವತ್ಛತೆ ಮರೆಯಾಗಿದೆ. ರೋಗಿಗಳು, ಅವರನ್ನು ನೋಡಲಿಕ್ಕೆ ಬಂದವರು ಕೆಳಗೆ ಕೂಡುತ್ತಾರೆ. ಇದರಿಂದ ರೋಗಿಗಳ್ಯಾರು ಅವರೊಟ್ಟಿಗೆ ಬಂದವರ್ಯಾರು ಎಂಬುದೇ ತಿಳಿಯುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮುತುವರ್ಜಿ ವಹಿಸಬೇಕು ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಸತಿ ನಿಲಯಗಳಿಗೆ ಭೇಟಿ ನೀಡಿದ್ದು, ಅಲ್ಲೆಲ್ಲ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ಹೀಗಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ಜಿಪಂ ಸಿಇಒ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಎಂ.ಕೆ.ಎಸ್.ನಸೀರ್, ನಗರಸಭೆ ಪೌರಾಯುಕ್ತ ರಮೇಶ ನಾಯಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು. ಸಂಘಟನೆಗಳ ಮುಖಂಡರು
ಉಪಸ್ಥಿತರಿದ್ದರು.