Advertisement

ಮಹಿಳೆಯರಿಗೆ ರಾಜಕೀಯ ಪ್ರಜ್ಞೆ ಅಗತ್ಯ

02:15 PM Mar 29, 2019 | pallavi |
ಚಿತ್ರದುರ್ಗ: ಪ್ರತಿಯೊಬ್ಬ ತೃತೀಯ ಲಿಂಗಿಗಳು ಮತ್ತು ಶೋಷಣೆಗೊಳಗಾದ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಕರೆ ನೀಡಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್‌ ಸಮಿತಿ ಆಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಮಂಗಳಮುಖೀಯರು, ಶೋಷಿತ ಮಹಿಳಾ ಮತದಾರರು ಸಕ್ರಿಯವಾಗಿ ಭಾಗವಹಿಸಬೇಕು. ಮಹಿಳೆಯರಿಗೆ ರಾಜಕೀಯ ಪ್ರಜ್ಞೆ ಇರಬೇಕು. ಚುನಾವಣೆ ಹೇಗೆ ನಡೆಯುತ್ತದೆ, ನಾವು ಯಾವ ರೀತಿ ಮತದಾನ ಮಾಡಬೇಕು., ಯಾರಿಗೆ ಮತದಾನ ಮಾಡಬೇಕು ಎನ್ನುವುದನ್ನು ಅರಿಯಬೇಕು ಎಂದು ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಮಹಿಳೆಯರ ಮತದಾನ ಪ್ರಮಾಣ ಕಡಿಮೆಯಾಗಿತ್ತು. ಅದನ್ನು ಈ ಬಾರಿ ಹೆಚ್ಚಿಸಬೇಕೆಂಬ ಗುರಿ ಹೊಂದಲಾಗಿದೆ.
ಮಹಿಳಾ ಮತದಾರರು ಮತದಾರ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಹೆಚ್ಚು ಮತ ಚಲಾಯಿಸದೇ ಇರುವುದು ಕಂಡುಬಂದಿದೆ. ಆದ್ದರಿಂದ ಚುನಾವಣೆಯಲ್ಲಿ ಮಹಿಳೆಯರು, ಮಂಗಳಮುಖೀಯರು, ಶೋಷಿತ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಮತದಾನದಲ್ಲಿ ಭಾಗವಹಿಸಬೇಕು.
ಮತದಾನ ಮಾಡಿದರೆ ನಮಗೆಷ್ಟು ದುಡ್ಡು ಕೊಡುತ್ತಾರೆನ್ನುವ ಭಾವನೆ ಬೇಡ, ಮತಗಳನ್ನು ಮಾರಿಕೊಳ್ಳಬಾರದು. ನಿಮ್ಮ
ಸಮಸ್ಯೆಗಳೇನಿದ್ದರೂ ಚುನಾವಣೆ ನಂತರ ಬಗೆ ಹರಿಸೋಣ ಎಂದರು.
ನಗರ, ಪಟ್ಟಣ, ಗ್ರಾಮಾಂತರ ಪ್ರದೇಶದಲ್ಲಿನ ಎಲ್ಲಾ ಮಹಿಳೆಯರು ಸ್ವಇಚ್ಚೆಯಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಬೇಕು. ಒಂದೊಂದು ಮತವು ಅಮೂಲ್ಯವಾಗಿದ್ದು, ಮತದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಹೇಳಿದರು.
ಮಂಗಳಮುಖೀ ಚಂದ್ರಕಲಾ, ತಿಪ್ಪಮ್ಮ ಮತ್ತಿತರರು ಮಾತನಾಡಿ, ಮಂಗಳಮುಖೀಯರನ್ನು ಮೊದಲು ಮನುಷ್ಯರಂತೆ ನೋಡಬೇಕು. ಜಿಲ್ಲೆಯಲ್ಲಿ 700 ಮಂದಿ ಮಂಗಳಮುಖೀಯರಿದ್ದು, ನಮ್ಮಂತೆ ಸೀರೆಯನ್ನುಟ್ಟು ಬೀದಿಗೆ ಬರಲು ಹೆದರುತ್ತಿದ್ದಾರೆ. ಪ್ಯಾಂಟ್‌, ಶರ್ಟ್‌ ಹಾಕಿಕೊಂಡು ಮನೆಯಲ್ಲೇ ಇರುತ್ತಾರೆ.
ಬಹುತೇಕ ಮಂಗಳಮುಖೀಯರು ಹಳ್ಳಿಗಳಲ್ಲೇ ಹುಟ್ಟಿದ್ದಾರೆ. ಆದರೆ ಹಳ್ಳಿಗಳಲ್ಲಿದ್ದರೆ ಜೀವನ ಸಾಗಿಸುವುದು ಕಷ್ಟವಾಗುತ್ತದೆ ಎಂದು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಇಂದಿಗೂ ಮಂಗಳಮುಖೀಯರಿಗೆ ಒಂದು ನಿವೇಶನ, ಮನೆ ನೀಡಿಲ್ಲ. ನಮಗೆ ಯಾರೂ ಮನೆ ಬಾಡಿಗೆ ಕೊಡುವುದಿಲ್ಲ. ಹಾಗಾದರೆ ನಾವು ಎಲ್ಲಿ ಇರಬೇಕು, ನಾವು ಕೂಡ ಮನುಷ್ಯರಲ್ಲವೇ, ಯಾಕಿಷ್ಟು ತಾರತಮ್ಯ ಮಾಡುತ್ತೀರಿ, ಕೊನೆ ಪಕ್ಷ ಆಶ್ರಯ ಮನೆಗಳನ್ನಾದರೂ ನೀಡಿ ಎಂದು ಮನವಿ ಮಾಡಿದರು.
ನಗರಸಭೆಗೆ ಹೋಗಿ ಆಶ್ರಯ ಮನೆ ನೀಡಿ ಎಂದರೆ ಶಾಸಕ ತಿಪ್ಪಾರೆಡ್ಡಿ ಅವರು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ
ಎಂಬ ಉತ್ತರ ದೊರೆಯುತ್ತಿದೆ. ಹಿಂದೆ ಸೌಭಾಗ್ಯ ಬಸವರಾಜನ್‌ ಮನೆ ನೀಡುವುದಾಗಿ ನೀಡಿದ್ದ ಭರವಸೆ ಹಾಗೆಯೇ ಇದೆ ಎಂದರು.
ನಾನು ಸೌಭಾಗ್ಯ ಬಸವರಾಜನ್‌ ಸ್ಥಾನಕ್ಕೆ ಬಂದಿಲ್ಲ, ನಾನೊಬ್ಬ ಸರ್ಕಾರಿ ಅಧಿಕಾರಿ. ಸೌಭಾಗ್ಯ ಬಸವರಾಜನ್‌ ಜಿಪಂ ಅಧ್ಯಕ್ಷರಾಗಿದ್ದವರು ಎಂದು ಜಿಪಂ ಸಿಇಒ ಸತ್ಯಭಾಮ ಪರಿಪರಿಯಾಗಿ ಹೇಳಿದರೂ ಮಂಗಳಮುಖೀಯರು ಕೇಳಿಸಿಕೊಳ್ಳಲಿಲ್ಲ. ಕೊನೆಗೆ ಸಭೆ ಮಾಡಿ ನಿಮ್ಮ ಸಮಸ್ಯೆ ನಿವಾರಣೆ ಮಾಡುವುದಾಗಿ ಭರವಸೆ ನೀಡಿದ ಮೇಲೆಯೇ ಮಂಗಳಮುಖೀಯರು ಸುಮ್ಮನಾದರು.
ರಾಜ್ಯ ಚುನಾವಣಾ ಆಯೋಗದ ರಾಜ್ಯ ಮಟ್ಟದ ಮಾಸ್ಟರ್‌ ಚುನಾವಣಾ ಟ್ರೈನಿ ಪ್ರೊ| ಕೆ.ಕೆ. ಕಾಮಾನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜ ನಾಯ್ಕ ಮತ್ತಿತರರು ಇದ್ದರು.
ಜಿಲ್ಲೆಯಲ್ಲಿ 700ಕ್ಕೂ ಹೆಚ್ಚಿನ ತೃತೀಯ ಲಿಂಗಿಗಳಿದ್ದಾರೆ. ಆದರೆ ಕೇವಲ 88 ಮಂಗಳಮುಖೀಯರು ಮಾತ್ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಎಲ್ಲರೂ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ
ನೋಂದಾಯಿಸಿಕೊಳ್ಳುವುದು ಅಗತ್ಯ.
ಸಿ. ಸತ್ಯಭಾಮ, ಜಿಪಂ ಸಿಇಒ.
Advertisement

Udayavani is now on Telegram. Click here to join our channel and stay updated with the latest news.

Next