ಆಳಂದ: ಯೌವನದಲ್ಲಿ ಮಾನಸಿಕ ಮತ್ತು ದೈಹಿಕ ಬದಲಾವಣೆ ಸಹಜ. ಈ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ನಂದಿಕೋಲಮಠ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಮಹಿಳಾ ಆರೋಗ್ಯ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿನಿಯರು ತಮ್ಮ ಆರೋಗ್ಯದ ಕುರಿತು ಸದಾ ಕಾಳಜಿ ವಹಿಸಬೇಕು. ಸಮಸ್ಯೆ ನಿರ್ಲಕ್ಷಿಸದೇ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ| ನಿಂಗಪ್ಪ ಪೂಜಾರಿ ಮಾತನಾಡಿ, ಆರೋಗ್ಯ ಸಂರಕ್ಷಣೆ ಮತ್ತು ಕಲಿಕೆ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಎರಡನ್ನು ನಿರ್ಲಕ್ಷಿಸದೆ ಓದು ಮತ್ತು ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಹೇಳಿದರು.
ಘಟಕದ ಸಂಯೋಜಕ ಡಾ| ಪ್ರಮಿಳಾ, ಸಾಂಸ್ಕೃತಿಕ ಕಾರ್ಯದರ್ಶಿ ಡಾ| ಶಾಂತಲಾ ಪಾಟೀಲ, ಉದ್ಯೋಗ ಮಾಹಿತಿ ಘಟಕದ ಸಂಯೋಜಕಿ ಗೀತಾ, ಆಪ್ತ ಸಮಾಲೋಚಕಿ ಸಾವಿತ್ರಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಇದ್ದರು.