ದೇವನಹಳ್ಳಿ: ಮಹಿಳೆಯರಿಗಾಗಿ ಹೆಚ್ಚು ಕಾನೂನುಗಳು ರಚನೆಯಾಗಿವೆ. ಹಾಗಾಗಿ, ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂದು 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎನ್.ಸಂಶಿ ಸಲಹೆ ನೀಡಿದರು. ನಗರದ ಸೂಲಿಬೆಲೆ ರಸ್ತೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯಾಂಗ ಇಲಾಖೆ ಹಾಗೂ ವಕೀಲರ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನು ಸೌಲಭ್ಯ: ಯಾವುದೇ ದೇಶದಲ್ಲಿ ಮಹಿಳೆಯರಿಗೆ ನಮ್ಮ ದೇಶದಲ್ಲಿರುವಷ್ಟು ಹಕ್ಕುಗಳು ಮತ್ತು ಕಾನೂನುಗಳಿಲ್ಲ. ನಾವು ಪುರಾತನ ಕಾಲದಿಂದಲೂ ಮಹಿಳೆಯನ್ನು ಪೂಜಿಸುತ್ತ ಬಂದಿದ್ದೇವೆ. ಅಮೆರಿಕಾದಲ್ಲಿ ಮಹಿಳೆಯರಿಗೆ ಸಮಾನ ಹಕ್ಕಿದೆ. ಆದರೆ, ಹೆಚ್ಚು ಕಾನೂನುಗಳಿಲ್ಲ. ಮಹಿಳೆಯರಿಗಾಗಿ ಸಾಕಷ್ಟು ಕಾನೂನುಗಳನ್ನು ತಂದಿದ್ದಾರೆ. ಸುಪ್ರಿಂಕೋರ್ಟ್ ಇತ್ತೀಚೆಗೆ ಐತಿಹಾಸಿಕ ತೀರ್ಪು ನೀಡಿದ್ದು, ಲಿಂಗ ತಾರತಮ್ಯ ಸೇರಿದಂತೆ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಪ್ರತಿ ಮಹಿಳೆಯರು ವಿದ್ಯಾವಂತರಾಗಿದ್ದಾರೆ ಎಂದರು.
ಮಹಿಳೆಯರ ರಕ್ಷಣೆಗೆ ಹೆಚ್ಚಿನ ಒತ್ತು: ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ಸೈನ್ಯಕ್ಕೆ ಸೇರಿ ನಮ್ಮ ದೇಶದ ಗಡಿಗಳನ್ನು ಕಾಯುತ್ತಿದ್ದಾರೆ. ಪೈಲಟ್‌ಗಳಾಗಿ ವಿಮಾನವನ್ನು ಸಹ ಚಲಾಯಿಸುವ ಮಟ್ಟಕ್ಕೆ ಮಹಿಳೆಯರು ಮುಂದುವರಿದಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳೆಯರ ರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕೆಂದು ಹೇಳಿದರು.
ಮಹಿಳೆಯರಿಗೆ ಪೂಜ್ಯ ಸ್ಥಾನ: ಪ್ರಧಾನ ಸಿವಿಲ್ ನ್ಯಾಯಾಧೀಶೆ ಮಂಜುಳಾ ಮಾತನಾಡಿ, ಮಹಿಳೆಯರು ಜಾಗೃತರಾಗಬೇಕು. ಇಂದಿಗೂ ಮಹಿಳಾ ದಿನಾಚರಣೆಗಳನ್ನು ಮಾಡುತ್ತಾ ಬಂದಿದ್ದೇವೆ. ಯಾತಕ್ಕೆ ಮಾಡುತ್ತೇವೆ ಎಂಬುದನ್ನು ತಿಳಿದುಕೊಳ್ಳಬೇಕು. ನಮ್ಮ ಮನೆಯಲ್ಲಿ ಮುಕ್ತ ಅವಕಾಶವನ್ನು ನೀಡಿದ್ದರು. ವೈಜ್ಞಾನಿಕ ಯುಗದಲ್ಲಿ ಮನುಷ್ಯ ಗಗನದಲ್ಲಿ ಹಕ್ಕಿಯಂತೆ ಹಾರುವುದನ್ನು ಕಲಿತ, ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ. ಆದರೆ, ಭೂಮಿಯ ಮೇಲೆ ಮನುಷ್ಯನಂತೆ ಬದುಕಲು ಕಲಿಯದ ಕಾರಣ ಅನೇಕ ಸಮಸ್ಯೆಗಳು ಕಾಡುತ್ತಿವೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನ ಮಾನ ನೀಡಿ ಗೌರವಿಸಲಾಗುತ್ತಿದೆ ಎಂದರು.
ಪುರಷರಿಗೆ ಸಮಾನ ಕೆಲಸ: ವಕೀಲೆ ಸವಿತಾ ಮಾತನಾಡಿ, 1911ರಲ್ಲಿ ಜರ್ಮನಿಯಲ್ಲಿ ಮಹಿಳಾ ದಿನಾಚರಣೆಯ ಘೋಷಣೆಯಾಗಿ ಇಂದಿಗೆ 106 ವರ್ಷದ ಆಚರಣೆ ಮಾಡುತ್ತಿದ್ದೇವೆ. ಮಹಿಳೆಯರಿಗಾಗಿ ವಿಶೇಷ ಕಾನೂನುಗಳನ್ನು ಸರ್ಕಾರ ಜಾರಿಗೆ ತಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಮಹಿಳೆಯರಿಗೆ ಹಲವು ಕಾನೂನುಗಳನ್ನು ರೂಪಿಸಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಪುರಷರ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಭೈರೇಗೌಡ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶ ಬಿ.ದಿಲೀಪ್ ಕುಮಾರ್, ಅಪರ ನ್ಯಾಯಧೀಶ ಅಬ್ದುಲ್ ಸಲೀಂ, ಆದಿತ್ಯ ಆರ್.ಕಲಾಲ್, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಗೋವಿಂದಸ್ವಾಮಿ, ಕಾರ್ಯದರ್ಶಿ ಡಿ.ಎಸ್.ಪ್ರಭಾಕರ್, ಖಜಾಂಚಿ ಎಂ.ಶ್ರೀನಿವಾಸ್, ಮಹಿಳಾ ವಕೀಲರಾದ ರಾಧಾ, ವರಲಕ್ಷ್ಮೀ, ಮತ್ತಿತರರು ಭಾಗವಹಿಸಿದ್ದರು.