Advertisement

ಉಸ್ತುವಾರಿ ವಿರುದ್ಧ ಸಿಡಿದೆದ್ದ ಮಹಿಳಾ ಮೋರ್ಚಾ

12:38 PM Dec 06, 2017 | |

ಬೆಂಗಳೂರು: ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಉಸ್ತುವಾರಿಯಾಗಿ ಮುಂದುವರಿಯಬಾರದು ಮತ್ತು ಅವರನ್ನು ಕೂಡಲೇ ಎಐಸಿಸಿಯು ರಾಜ್ಯದಿಂದ ವಾಪಸ್‌ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಎದುರು ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಮಹಿಳಾ ಮೋರ್ಚಾ ಬೆಂಗಳೂರು ನಗರ ಅಧ್ಯಕ್ಷೆ ಶಾರದಾ ನಾಯಕ್‌ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು ವೇಣುಗೋಪಾಲ್‌ ಅವರು ಸಭೆ ನಡೆಸುತ್ತಿದ್ದ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಪಾದಯಾತ್ರೆ ಮೂಲಕ ಹೊರಟರು. ಆದರೆ, ಅದಕ್ಕೆ ಅವಕಾಶ ನೀಡದ ಪೊಲೀಸರು ಆನಂದರಾವ್‌ ವೃತ್ತದ ಬಳಿಯೇ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ವೇಣುಗೋಪಾಲ್‌ ಮೂರು ದಿನಗಳ ಕಾಲ ಕಾಂಗ್ರೆಸ್‌ನ ಸಭೆಗಳನ್ನು ನಡೆಸುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ರಾಜ್ಯದ ಕಾಂಗ್ರೆಸ್‌ ಜವಾಬ್ದಾರಿಯಿಂದ ಮುಕ್ತಗೊಳಿಸಿ ವಾಪಸ್‌ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ಈ ಪ್ರತಿಭಟನೆ ನಡೆಸಲಾಯಿತು. ಸೋಲಾರ್‌ ಹಗರಣದ ಪ್ರಮುಖ ಆರೋಪಿ, ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ವೇಣುಗೋಪಾಲ್‌ ಕರ್ನಾಟಕ ಬಿಟ್ಟು ತೊಲಗಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಉಸ್ತುವಾರಿ ಮಾಡಿದ್ದೇಕೆ: ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಒಬ್ಬ ಭ್ರಷ್ಟ, ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ರಾಜ್ಯದ ಕಾಂಗ್ರೆಸ್‌ ಉಸ್ತುವಾರಿ ಮಾಡಿದ್ದೇಕೆ? ಕಾಂಗ್ರೆಸ್‌ ಅಷ್ಟೊಂದು ದಿವಾಳಿಯಾಗಿದೆಯೇ ಎಂಬುದನ್ನು ರಾಹುಲ್‌ ಗಾಂಧಿ ಅವರು ಹೇಳಬೇಕು ಎಂದು ಆಗ್ರಹಿಸಿದರು.

ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ವೇಣುಗೋಪಾಲ್‌ ಅವರನ್ನು ಒಂದು ರಾಜ್ಯಕ್ಕೆ ಪಕ್ಷದ ಉಸ್ತುವಾರಿಯಾಗಿ ನೇಮಕಗೊಳಿಸಬಾರದಿತ್ತು. ಅಷ್ಟೇ ಅಲ್ಲ, ಅವರನ್ನು ಸಂಸದ ಸ್ಥಾನದಿಂದ ಕೆಳಗಿಳಿಸಬೇಕಿತ್ತು. ಆದರೆ, ಕಾಂಗ್ರೆಸ್‌ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ನಿಮಗೆ ಮರ್ಯಾದೆ ಇದ್ದಿದ್ದರೆ ವೇಣುಗೋಪಾಲ್‌ ಅವರನ್ನು ರಾಜ್ಯ ಉಸ್ತುವಾರಿ ಸ್ಥಾನದಿಂದ ವಾಪಸ್‌ ಕರೆಸಿಕೊಳ್ಳುವಂತೆ ಏಕೆ ಹೈಕಮಾಂಡನ್ನು ಒತ್ತಾಯಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

Advertisement

ದೆಹಲಿಯಲ್ಲಿ ಪ್ರತಿಭಟನೆಯ ಎಚ್ಚರಿಕೆ: ಮಹಿಳೆ ಮೇಲೆ ಲೈಂಗಿಕ ದೌಜ್ಯನ್ಯ ಎಸಗಿದ ವ್ಯಕ್ತಿ ಪಕ್ಷದ ಉಸ್ತುವಾರಿಯಾಗಿರುವ ಬಗ್ಗೆ ಮಹಿಳಾ ಕಾಂಗ್ರೆಸ್‌ ಏನು ಹೇಳುತ್ತದೆ? ವೇಣುಗೋಪಾಲ್‌ ಅವರಿಂದ ಮಹಿಳಾ ಕಾಂಗ್ರೆಸ್‌ ಘಟಕ ಏನು ಸಲಹೆ ಕೇಳುತ್ತದೆ ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ, ರಾಹುಲ… ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ವೇಣುಗೋಪಾಲ್‌ ಅವರನ್ನು ರಾಜ್ಯದಿಂದ ವಾಪಸ್‌ ಕರೆಸಿಕೊಳ್ಳಬೇಕು. ಇಲ್ಲವಾದರೆ ದೆಹಲಿಯ ಎಐಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಡಿಮೆ ಸಂಖ್ಯೆಯ ಮಹಿಳಾ ಪೊಲೀಸರ ಪರದಾಟ: ವೇಣುಗೋಪಾಲ್‌ ವಿರುದ್ಧ ಧರಣಿ ನಡೆಸಿ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಆನಂದರಾವ್‌ ಮೃತ್ತದಿಂದ ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತೆಯರು ಹೊರಟಾಗ ಕೆಲವೆ ಕೆಲವು ಮಹಿಳಾ ಪೊಲೀಸರು ಇದ್ದುದರಿಂದ  ಪ್ರತಿಭಟನಾಕಾರನ್ನು ನಿಯಂತ್ರಿಸಲು ಪರದಾಡುವಂತಾಯಿತು.

ವೇಣುಗೋಪಾಲ್‌ ವಿರುದ್ಧ ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲು ಮಾತ್ರ ಅನುಮತಿ ಪಡೆಯಲಾಗಿತ್ತು. ಹೀಗಾಗಿ ಪ್ರತಿಭಟನೆ ನಡೆಸಿ ವಾಪಸಾಗುತ್ತಾರೆ ಎಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಿರಲಿಲ್ಲ. ಆದರೆ, ವೇಣುಗೋಪಾಲ್‌ ಕಾಂಗ್ರೆಸ್‌ ಸಭೆ ನಡೆಸಲು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪ್ರತಿಭಟನಾಕಾರರು ಅಲ್ಲಿಂದ ಪಾದಯಾತ್ರೆ ಮೂಲಕ ತೆರಳಿ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದರು.

ಏಕಾಏಕಿ ಪ್ರತಿಭಟನಾಕಾರರು ಮೆರವಣಿಗೆ ಹೊರಟಿದ್ದರಿಂದ ಅಲ್ಲಿದ್ದ ಕೆಲವೇ ಮಹಿಳಾ ಪೊಲೀಸ್‌ ಸಿಬ್ಬಂದಿ ಅವರನ್ನು ನಿಯಂತ್ರಿಸಲು ಪರದಾಡಿದರು. ಕೊನೆಗೆ ಅವರನ್ನು ದಾರಿಮಧ್ಯೆ ತಡೆದು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next