ಇಳಕಲ್ಲ: ಹೆಣ್ಣು ಜಾನಪದದಲ್ಲಿ ಹಾಸು ಹೊಕ್ಕಾಗಿದ್ದು, ಹೆಣ್ಣಿಲ್ಲದ ಜಾನಪದ ಊಹಿಸಲು ಸಾಧ್ಯವಿಲ್ಲ ಎಂದು ಖ್ಯಾತ ಜಾನಪದ ಸಾಹಿತಿ ಸಿದ್ದಪ್ಪ ಬಿದರಿ ಹೇಳಿದರು.
ನಗರದ ಎಸ್. ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇಳಕಲ್ಲ ತಾಲೂಕು ಘಟಕದಿಂದ ಮಹಿಳಾ ದಿನಾಚರಣೆ ಅಂಗವಾಗಿ ಸರಕಾರಿ ಮಹಿಳಾ ನೌಕರರಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜ, ಮನೆಯ ಕಣ್ಣಾಗಿ ಬಾಳು ಬೆಳಗುವ ಹೆಣ್ಣು ಕುಲದ ಬಗ್ಗೆ ಜಾನಪದ ಸೊಗಡಿನೊಂದಿಗೆ ರಸವತ್ತಾಗಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಜಯಶ್ರೀ ಎಮ್ಮಿ ಮಾತನಾಡಿ, ಸರಕಾರಿ ಮಹಿಳಾ ನೌಕರರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಇಳಕಲ್ಲ ನೂತನ ತಾಲೂಕಾಗಿದ್ದರೂ ಇಲ್ಲಿಯ ತಾಲೂಕು ಸಂಘವು ನವೀನ, ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸುವುದರೊಂದಿಗೆ ನೌಕರರೊಂದಿಗೆ ಸತತ ನಿಕಟ ಸಂಪರ್ಕ ಹೊಂದುವ ಮೂಲಕ ಕ್ರಿಯಾಶೀಲವಾಗಿದೆ. ಅಧ್ಯಕ್ಷರ ಹಾಗೂ ತಂಡದ ಕಾರ್ಯ ಅಭಿನಂದನೀಯವಾಗಿದೆ ಎಂದು ಹೇಳಿದರು.
ಮಹಾದೇವ ಬೆಳವಣ್ಣವರ, ಸಂಗಣ್ಣ ಹಂಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿಜೇತರಿಗೆ ಮೆಡಲ್‌ನೊಂದಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಇಳಕಲ್ಲ ತಾಲೂಕ ಘಟಕದ ಅಧ್ಯಕ್ಷ ಪರಶುರಾಮ ಪಮ್ಮಾರಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎನ್. ಗಡೇದ, ವಿಜಯಲಕ್ಷ್ಮೀ ಹಿರೇಮಠ ಉಪಸ್ಥಿತರಿದ್ದರು.