Advertisement

ಮಧ್ಯರಾತ್ರಿ ಸಿಕ್ಕ ಸ್ವಾತಂತ್ರ್ಯಕ್ಕೆ ಸೌದಿ ಮಹಿಳೆಯರ ಚಿಯರ್ಸ್‌

09:10 AM Jun 25, 2018 | Team Udayavani |

ರಿಯಾದ್‌: ‘ರಾತ್ರಿ 12 ಹೊಡೆಯಲೆಂದು ಗಡಿಯಾರದ ಮುಳ್ಳನ್ನೇ ದಿಟ್ಟಿಸಿಕೊಂಡು ಕುಳಿತಿದ್ದೆ. ಕ್ಷಣ ಕ್ಷಣಕ್ಕೂ ಎದೆಬಡಿತ ಜೋರಾಗುತ್ತಿತ್ತು. 12 ಹೊಡೆದಿದ್ದೇ ತಡ, ಮಹಡಿಯಿಂದ ಇಳಿದು ಬಂದು ಪಾರ್ಕಿಂಗ್‌ ಲಾಟ್‌ ನಲ್ಲಿ ನಿಂತಿದ್ದ ನನ್ನ ಬಿಳಿ ಬಣ್ಣದ ಜಿಎಂಸಿ ಕಾರನ್ನೇರಿ ಹೊರಟೇಬಿಟ್ಟೆ. ಡ್ರೈವರ್‌ ಸೀಟಿನಲ್ಲಿ ಕುಳಿತು ನಾನು ಹುಟ್ಟಿ, ಬೆಳೆದ ನಗರದಲ್ಲೊಂದು ಸುತ್ತು ಹಾಕುವುದು ನನ್ನ ಬಹುವರ್ಷಗಳ ಕನಸಾಗಿತ್ತು. ಆ ಆಸೆ ಇಂದು ಈಡೇರಿತು. ಕಿಂಗ್‌ ಫ‌ಹದ್‌ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಂತೆ ಮೈಯೆಲ್ಲಾ ರೋಮಾಂಚನದ ಅನುಭವ. ಜೀವನದಲ್ಲಿ ಒಮ್ಮೆಯೂ ಈ ರಸ್ತೆಯಲ್ಲಿ ಡ್ರೈವ್‌ ಮಾಡುವ ಅವಕಾಶ ಸಿಗುತ್ತದೆಂದು ಕಲ್ಪಿಸಿಯೂ ಇರಲಿಲ್ಲ’.

Advertisement

ಖಟ್ಟರ್‌ ಸಂಪ್ರದಾಯವಾದಿ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿ ಶನಿವಾರ ಮೊತ್ತಮೊದಲ ಬಾರಿಗೆ ಕಾರು ಚಲಾಯಿಸಿದ ಟಿವಿ ಆ್ಯಂಕರ್‌, ಮೂರು ಮಕ್ಕಳ ತಾಯಿ ಸಮರ್‌ ಅವರ ಸಂತಸದ ನುಡಿಗಳಿವು. ಶನಿವಾರ ಮಧ್ಯರಾತ್ರಿ ಸಿಕ್ಕ ಸ್ವಾತಂತ್ರ್ಯವನ್ನು ಬಳಸಿಕೊಂಡ ಅನೇಕ ಮಹಿಳೆಯರ ಅಭಿಪ್ರಾಯವೂ ಇದೇ ಆಗಿತ್ತು.


ದಿನಸಿ ಅಂಗಡಿಗೆ, ಕಚೇರಿಗೆ, ಸಂಬಂಧಿಗಳು -ಗೆಳೆಯರ ಮನೆಗೆ ಅಥವಾ ಮಕ್ಕಳನ್ನು ಶಾಲೆಗೆ ಬಿಡಲು ಹೋಗುವುದಿದ್ದರೂ ಮಹಿಳೆಯರಿಗೆ ಹಿಂಬದಿ ಸೀಟೇ ಕಾಯಂ ಎಂಬಂತಿದ್ದ ಸೌದಿಯಲ್ಲಿ ಶನಿವಾರದಿಂದ ಮಹಿಳೆಯರಿಗೆ ಚಾಲನಾ ನಿಷೇಧ ತೆರವಾಗಿದೆ. ಬೆರಳೆಣಿಕೆಯಷ್ಟು ಮಹಿಳೆಯರು ಮಧ್ಯರಾತ್ರಿಯೇ ಕಾರು ಚಲಾಯಿಸಿ ಖುಷಿ ಪಟ್ಟಿದ್ದಾರೆ. ವಿಶೇಷವೆಂದರೆ, ಬಹುತೇಕ ಪುರುಷರೂ ಇದನ್ನು ಸ್ವಾಗತಿಸಿದ್ದಾರೆ.

ಹರ್ಷೋದ್ಗಾರ: ಹೆದ್ದಾರಿಯಲ್ಲಿದ್ದ ಕೆಲವು ಯುವಕರು, ಪೊಲೀಸ್‌ ಸಿಬಂದಿ ಕೂಡ ನಮ್ಮನ್ನು ನೋಡಿ ಹರ್ಷೋದ್ಗಾರ ಮಾಡಿದರು. ಥಂಬ್ಸ್ ಅಪ್‌ ಮಾಡಿ ಬೆಂಬಲ ನೀಡಿದರು. ನನಗೆ ಮಾತುಗಳೇ ಹೊರಡುತ್ತಿಲ್ಲ. ಎಷ್ಟು ಖುಷಿಯಾಗುತ್ತಿದೆಯೆಂದರೆ… ಇದು ಕನಸಾ, ನನಸಾ ಎಂದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ತಹ್ಲಿಯಾದ ಬೀದಿಯಲ್ಲಿ ಲೆಕ್ಸಸ್‌ ಕಾರನ್ನು ಚಲಾಯಿಸಿದ ಹೆಸ್ಸಾಹ್‌ ಅಲ್‌-ಅಜಾಜಿ.

ಹೋರಾಟಕ್ಕೆ ಸಿಕ್ಕ ಜಯ: 1990ರಲ್ಲಿ ಕೆಲವು ಸಾಮಾಜಿಕ ಕಾರ್ಯಕರ್ತರು ಮಹಿಳೆಯರಿಗೂ ವಾಹನ ಚಾಲನೆಗೆ ಅವಕಾಶ ನೀಡಬೇಕೆಂದು ಹೋರಾಟ ಆರಂಭಿಸಿದ್ದರು. ಈ ಹೋರಾಟಕ್ಕೆ ಶಿಕ್ಷೆಯಾಗಿ ಹಲವು ಕೆಲಸ ಕಳೆದುಕೊಂಡರು, ನಿಂದನೆಗೆ ಗುರಿಯಾದರು ಮಾತ್ರವಲ್ಲ, ಇವರಿಗೆ ಒಂದು ವರ್ಷ ಕಾಲ ವಿದೇಶ ಪ್ರಯಾಣಕ್ಕೂ ನಿಷೇಧ ಹೇರಲಾಯಿತು. ಕಳೆದ ವರ್ಷ ಭಾವೀ ದೊರೆ ಸಲ್ಮಾನ್‌ ಮಹಿಳೆಯರಿಗೆ ಚಾಲನಾ ಪರವಾನಗಿ ನೀಡುವ ಘೋಷಣೆ ಮಾಡುತ್ತಿದ್ದಂತೆ, ಅದಕ್ಕಿದ್ದ ಎಲ್ಲ ವಿರೋಧಗಳೂ ತಣ್ಣಗಾದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next