ಬೆಳ್ತಂಗಡಿ: ಅನಾದಿ ಕಾಲದಿಂದ ಸೂರ್ಯನನ್ನು ಪೂಜಿಸಿ ಕೊಂಡು ಬಂದ ಪರಂಪರೆ ನಮ್ಮದು. ಇಂದು ಸೂರ್ಯನ ಶಕ್ತಿಯನ್ನು ಅಭಿವೃದ್ಧಿಯಲ್ಲಿ ಬಳಸಿಕೊಳ್ಳಬಹುದಾದ ಅನೇಕ ಸಾಧ್ಯತೆಗಳಿವೆ. ಮಹಿಳೆಯರು ಇದರ ಪ್ರಯೋಜನವನ್ನು ಹೆಚ್ಚಾಗಿ ಪಡೆದುಕೊಳ್ಳುವ ಮೂಲಕ ಸ್ವಾವಲಂಬಿ ಗಳಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಮತ್ತು ಸೆಲ್ಕೋ ಫೌಂಡೇಶನ್ ಆಶ್ರಯದಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಹಮ್ಮಿಕೊಂಡಿದ್ದ “ಸಮೃದ್ಧಿ-ಸಂತೃಪ್ತಿ, ಸಬಲೀಕರಣ’ಎಂಬ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸೌರಶಕ್ತಿ ಚಾಲಿತ ಜೀವನೋಪಾಯ ಪರಿಕರಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೌರಶಕ್ತಿಯ ಸದ್ಬಳಕೆಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟಿರುವ ಡಾ| ಹರೀಶ ಹಂದೆ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸುವ ವ್ಯಕ್ತಿಯಾಗಿ ಬೆಳೆದಿದ್ದಾರೆ ಎಂದು ಶ್ಲಾಫಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಸ್ ಕೆಡಿಆರ್‌ಡಿಪಿಯ ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಡಾ| ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಸೌರ ತಂತ್ರಜ್ಞಾನವನ್ನು ಅಗತ್ಯವಿರುವ ವರಿಗೆ ತಲುಪಿಸುವಲ್ಲಿ ಸೆಲ್ಕೋ ಸಂಸ್ಥೆ ಮಾಡುತ್ತಿರುವ ಕೆಲಸ ಅನನ್ಯವಾದುದು. ಇಂತಹ ಅವಕಾಶವನ್ನು ಮಹಿಳೆಯರು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಸೆಲ್ಕೋ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಹರೀಶ್ ಹಂದೆ ಮಾತನಾಡಿ, ಸೆಲ್ಕೋದ ಪ್ರಯತ್ನದಿಂದ ಈವರೆಗೆ ಜಾಗತಿಕವಾಗಿ 1 ಕೋಟಿ ಜನರು ವಿವಿಧ ರೀತಿಯ ಸೌರಶಕ್ತಿಯ ಪ್ರಯೋಜನಗಳನ್ನು ಪಡೆದಿದ್ದಾರೆ. 2028ರ ಹೊತ್ತಿಗೆ ಇದೇ ರೀತಿಯಲ್ಲಿ ಆಫ್ರಿಕಾ ಮತ್ತು ಏಷ್ಯಾದ ದಕ್ಷಿಣ-ಪೂರ್ವ ದೇಶಗಳ ಒಂದು ಲಕ್ಷ ಮಹಿಳೆಯರೂ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಒಂದು ಕೋಟಿ ಜನರಿಗೆ ಜೀವನೋಪಾಯ ಕ್ಷೇತ್ರದಲ್ಲಿ ಸೌರಶಕ್ತಿಯ ಪ್ರಯೋಜನಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ ಎಂದರು.
25 ವರ್ಷಗಳ ಹಿಂದೆ ಆರಂಭವಾದ ಸೆಲ್ಕೋ ಸಂಸ್ಥೆ ಮತ್ತು ಎಸ್‌ಕೆಡಿಆರ್ ಡಿಪಿಯ ಸಹಯೋಗವನ್ನು ಡಾ| ಹಂದೆ ಸ್ಮರಿಸಿಕೊಂಡರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಿಇಒ ಸವಿತಾ ಸುಳುಗೋಡು ಮಾತನಾಡಿ, ಸೌರಶಕ್ತಿಚಾಲಿತ ಫ್ರಿಜ್ ಜೀವ ಉಳಿಸುವ ಲಸಿಕೆಗಳ ಸಂರಕ್ಷಣೆ ಸೇರಿದಂತೆ ಬುಡಕಟ್ಟು ಜನರ ಜೀವನದಲ್ಲಿ ತಂದ ಬದಲಾವಣೆಯನ್ನು ವಿವರಿಸಿದರು. ಸೆಲ್ಕೋ ಸೋಲಾರ್ ಲೈಟ್ ಪ್ರ„. ಲಿ. ಸಿಇಒ ಮೋಹನ್ ಭಾಸ್ಕರ್ ಹೆಗಡೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಯಶಸ್ವೀ ಮಹಿಳಾ ಉದ್ಯಮಿಗಳಾದ ಧಾರವಾಡದ ರೂಪಾ ರೆಡ್ಡಿ, ಬೆಳಗಾವಿಯ ಶೈಲಾ ಪ್ರಮೋದಾ ದೇವಿ ತಮ್ಮ ಯಶೋಗಾಥೆಯನ್ನು ಹಂಚಿಕೊಂಡರು. ಎಸ್‌ಕೆಡಿಆರ್‌ಡಿಪಿ ಸಿಇಒ ಅನಿಲ್ ಕುಮಾರ್ ಎಸ್.ಎಲ್. ವೇದಿಕೆಯಲ್ಲಿದ್ದರು.