Advertisement

ಮಹಿಳಾ ಸಶಕ್ತೀಕರಣ ಬಿಜೆಪಿಯಿಂದ ಮಾತ್ರ ಸಾಧ್ಯ: ಸುಲೋಚನಾ ಭಟ್‌

01:48 AM Apr 15, 2019 | sudhir |

ಮಂಗಳೂರು: ಅರುವತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‌ ಪಕ್ಷಕ್ಕೆ ಮಹಿಳೆಯ ಪ್ರಗತಿ ಎಂದೂ ಆದ್ಯತೆಯಾಗಿರಲಿಲ್ಲ. ಮಹಿಳೆಯರಿಗೆ ಮೂಲ ಸೌಕರ್ಯವನ್ನೂ ಒದಗಿಸುವ ಬಗ್ಗೆ ಎಂದೂ ಚಿಂತಿಸಲಿಲ್ಲ. ಹೆಣ್ಣು ಮಗುವಿನ ಬಗ್ಗೆ ಇದ್ದ ತಾತ್ಸರ ಭಾವನೆಯನ್ನು ಐದು ವರ್ಷಗಳ ಮೋದಿ ಆಡಳಿತದಲ್ಲಿ ದೂರ ಮಾಡಿ ಮಹಿಳಾ ಸಶಕ್ತೀಕರಣದ ದಿಕ್ಕಿನಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದೆ ಎಂದು ಬಿಜೆಪಿ ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್‌ ಹೇಳಿದರು.

Advertisement

ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿ ಯಲ್ಲಿ ರವಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ನೇತೃತ್ವಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಈ ದೇಶದ ಅತ್ಯಂತ ಗೌರವದ ವಿದೇಶಾಂಗ ಮತ್ತು ರಾಷ್ಟ್ರದ ರಕ್ಷಣಾ ಸಚಿವಾಲಯ ಎರಡನ್ನೂ ಮಹಿಳೆಯರಿಗೆ ನೀಡಿದ ಏಕಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರು. ಬೇಟಿ ಬಚಾವೋ – ಬೇಟಿ ಪಡಾವೋ ಯೋಜನೆ ಮೂಲಕ ಹೆಣ್ಣು ಶಿಶುಗಳ ಹತ್ಯೆಯನ್ನು ತಡೆಯುವ ಕಾರ್ಯ ಮಾಡಿದ್ದಾರೆ.

ಹೆಣ್ಣು ಮಕ್ಕಳನ್ನು ಸುಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿ ಇದುವರೆಗೆ 1.26 ಕೋಟಿ ಖಾತೆ ತೆರೆಯಲಾಗಿದೆ. 20,000 ಕೋಟಿ ರೂ.ಗಿಂತಲೂ ಹೆಚ್ಚು ಠೇವಣಿ ಇಡಲಾಗಿದೆ ಎಂದರು.

ಮಹಿಳೆಯರ ಸಶಕ್ತೀಕರಣಕ್ಕೆ ಅವರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿ ಸುವ ನಿಟ್ಟಿನಲ್ಲಿ ತರಬೇತಿಗೊಳಿಸುವ ಸ್ಟೆಪ್‌ ಯೋಜನೆ ಮಹಿಳೆ ತನ್ನ ಕಾಲಮೇಲೆ ತಾನೇ ನಿಲ್ಲಲು ಸಹಕಾರಿಯಾಗಿದೆ. ಉಜ್ವಲಾ ಯೋಜನೆಯ ಮೂಲಕ ಹೊಗೆ ಮುಕ್ತ ಅಡಿಗೆ ಕೋಣೆಗೆ ನಾಂದಿ ಹಾಡಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು. 6.8 ಕೋಟಿ ಮಹಿಳೆೆಯರಿಗೆ‌ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಗರಿಷ್ಠ 43,878 ಸಾವಿರ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಇದು ನಮ್ಮ ಸಂಸದ ನಳಿನ್‌ ಕುಮಾರ್‌ ಅವರ ಸಾಧನೆ. ಪ್ರಧಾನಮಂತ್ರಿ ಮಾತೃವಂದನ ಯೋಜನೆಯಡಿ ಗರ್ಭಿಣಿಯರಿಗೆ 6,000 ರೂ. ಉತ್ತೇಜಕ ಧನ ನೀಡಿದರೆ, ಇಂದ್ರ ಧನುಷ್‌ ಮಿಶನ್‌ ಅಡಿಯಲ್ಲಿ 80 ಲಕ್ಷ ಗರ್ಭಿಣಿಯರಿಗೆ ರೋಗ ನಿರೋಧಕ ಔಷಧ ನೀಡಲಾಗಿದೆ. ತಾಯ್ತನದ ರಜೆಯನ್ನು ಉದ್ಯೋಗದಲ್ಲಿರುವ ತಾಯಂದಿರಿಗೆ 2 ವಾರದಿಂದ 26 ವಾರಕ್ಕೆ ಏರಿಸಲಾಗಿದೆ ಎಂದರು.

ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಸಾಂತ್ವನ, ಆಪ್ತ ಸಲಹೆ ಪುರ್ನವಸತಿ ಕಲ್ಪಿಸುವ ಸಖೀ ಯೋಜನೆಯೂ ಮೊದಲನೆಯ ಕೇಂದ್ರ ಉಡುಪಿಯಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಮಹಿಳಾ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ದೇಶದ 8 ದೊಡ್ಡ ದೊಡ್ಡ ನಗರಗಳಲ್ಲಿ ನಿರ್ಭಯ ನಿಧಿಯ ಮೂಲಕ ಸೇಫ್‌ ಸಿಟಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. 12 ವರ್ಷದ ಒಳಗಿನ ಹೆಣ್ಣು ಮಗುವಿನ ಅತ್ಯಾಚಾರಿಗೆ ಮರಣದಂಡನೆ, 16 ವರ್ಷದ ಒಳಗಿನ ಹೆಣ್ಣು ಮಗುವಿನ ಅತ್ಯಾಚಾರಿಗೆ ನೀಡುವ ಜೈಲು ಶಿಕ್ಷೆಯನ್ನು 10ರಿಂದ 20ವರ್ಷಕ್ಕೆ ಏರಿಸುವ ಕಠಿನ ಕ್ರಮಗಳ ಮೂಲಕ ಮಹಿಳಾ ಪರ ಆಡಳಿತವನ್ನು ಮೋದಿ ಅವರು ನೀಡಿದ್ದಾರೆ ಎಂದರು.

Advertisement

ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಶೇ.50 ಸಂಬಳ ಏರಿಕೆಯ ಜತೆಗೆ ಅವರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಮತ್ತು ಸುರಕ್ಷಾ ಭೀಮಾ ಯೋಜನೆಯ ವ್ಯಾಪ್ತಿಗೆ ತಂದಿರುವುದು ಪ್ರಧಾನಿ ಮೋದಿಯವರಿಗೆ ಮಹಿಳಾ ಕಾರ್ಯಕರ್ತರ ಬಗೆಗಿನ ಕಾಳಜಿಯನ್ನು ಎತ್ತಿತೋರಿಸುತ್ತದೆ. ತ್ರಿವಳಿ ತಲಾಕ್‌ ಪದ್ಧತಿ ನಿಷೇಧ, ಸ್ವಂತ ಹಣದಲ್ಲೇ ಹಜ್‌ ಯಾತ್ರೆ ಮಾಡಬೇಕೆಂಬ ಮುಸ್ಲಿಂ ಬಂಧುಗಳ ಇಚ್ಛೆಯನ್ನು ಪುರಸ್ಕರಿಸಿ ಈ ಅನುದಾನವನ್ನು ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಿದ ಕ್ರಮ, 45 ವರ್ಷದ ಮುಸ್ಲಿಂ ಮಹಿಳೆಯರು ಪುರುಷರ ಸಹಾಯವಿಲ್ಲದೆ ಸ್ವತಂತ್ರವಾಗಿ ಹಜ್‌ ಯಾತ್ರೆಗೆ ಅವಕಾಶ ನೀಡಿರುವುದು ಸಾಮಾಜಿಕ ಸಶಕ್ತೀಕರಣಕ್ಕೆ ಮೋದಿಯವರು ನೀಡಿರುವ ಉತ್ತೇಜನ ಎಂದರು.

ಎ.18ರಂದು ನಡೆಯುವ ಚುನಾವಣೆಯಲ್ಲಿ ಈ ಅಂಶಗಳನ್ನು ಮನ‌ಗಂಡು ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಖಂಡಿತ ಅತ್ಯಧಿಕ ಬಹುಮತಗಳಿಂದ ನಳಿನ್‌ ಕುಮಾರ್‌ ಕಟೀಲ್‌ ಅವರು ಗೆಲ್ಲುವ ಭರವಸೆ ಇದೆ ಎಂದರು.

ದ.ಕ. ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ರೂಪಾ ಡಿ. ಬಂಗೇರ ಉಪಸ್ಥಿತರಿದ್ದರು.

ಉಸ್ತುವಾರಿ ಸಚಿವರ ಮೌನಕ್ಕೆ ಖಂಡನೆ
ಮೋದಿ ರ್ಯಾಲಿ ಮುಗಿಸಿ ಸಾಗುತ್ತಿದ್ದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ವಾಹನಗಳ ಮೇಲೆ ಕುತ್ತಾರು ಮದನಿ ನಗರದಲ್ಲಿ ಅಪರಿಚಿತರು ಕಲ್ಲು ತೂರಾಟ ನಡೆಸಿ ಹಲ್ಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದನ್ನು ನಾವು ಖಂಡಿಸುತ್ತೇವೆ. ಸ್ವ ಕ್ಷೇತ್ರದಲ್ಲೇ ಇಂತಹ ಘಟನೆ ನಡೆದರೂ ಘಟನೆಯನ್ನು ಖಂಡಿಸದೆ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next