Advertisement
2020ರ ಡಿಸೆಂಬರ್‌ನಲ್ಲಿ ನಿರ್ಭಯ ಪೊಲೀಸ್ ಬೈಕನ್ನು ರಾಜ್ಯದಲ್ಲಿ ಆರಂಭಿಸಲಾಗಿತ್ತು. ಮಾನವ ಕಳ್ಳ ಸಾಗಣೆ, ಮಹಿಳಾ ಮತ್ತು ಮಕ್ಕಳ ರಕ್ಷಣೆ ಮಾಡುವ, ಕಾನೂನು ಸುವ್ಯವಸ್ಥೆ ಕರ್ತವ್ಯ ನಿರ್ವಹಿಸಲು, ಅಪಘಾತ ಸಂದರ್ಭದಲ್ಲಿ ಸ್ಥಳಕ್ಕೆ ಕ್ಷಿಪ್ರಗತಿಯಲ್ಲಿ ತಲುಪಲು ಮುಂತಾದ ಹಲವು ಉದ್ದೇಶಗಳಿಗಾಗಿ ಬೈಕನ್ನು ನೀಡಲಾಗಿತ್ತು. ಯೋಜನೆ ಹಲವೆಡೆ ಉತ್ತಮವಾಗಿದ್ದರೆ, ಗ್ರಾಮೀಣ ಭಾಗದಲ್ಲಿ ಹಳಿ ತಪ್ಪಿದೆ ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 36 ನಿರ್ಭಯ ಬೈಕ್‌ಗಳಿವೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ 14 ಠಾಣೆಗಳಿಗೆ ನಿರ್ಭಯ ಬೈಕ್‌ಗಳನ್ನು ನೀಡಲಾಗಿದೆ. ವಿಟ್ಲ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಪುಂಜಾಲಕಟ್ಟೆ, ವೇಣೂರು, ಬೆಳ್ತಂಗಡಿ ನಗರ, ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯ, ಬೆಳ್ಳಾರೆ, ಸುಳ್ಯ, ಪುತ್ತೂರು ಗ್ರಾಮಾಂತರ, ಪುತ್ತೂರು ನಗರ, ಧರ್ಮಸ್ಥಳ ಪೊಲೀಸ್ ಠಾಣೆಗಳಿಗೆ ಒಂದೊಂದು ಬೈಕ್ ಒದಗಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ 22 ಬೈಕ್‌ಗಳನ್ನು ನೀಡಲಾಗಿದೆ. ಉಡುಪಿ ನಗರ ಠಾಣೆ, ಮಲ್ಪೆ, ಮಣಿಪಾಲ, ಮಹಿಳಾ ಠಾಣೆ, ಬ್ರಹ್ಮಾವರ, ಹಿರಿಯಡಕ, ಕೋಟ, ಕುಂದಾಪುರ, ಕುಂದಾಪುರ ಗ್ರಾಮಾಂತರ, ಅಮಾಸೆಬೈಲು, ಶಂಕರನಾರಾಯಣ, ಬೈಂದೂರು, ಗಂಗೊಳ್ಳಿ, ಕೊಲ್ಲೂರು, ಕಾಪು, ಶಿರ್ವ, ಪಡುಬಿದ್ರಿ, ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ, ಅಜೆಕಾರು, ಹೆಬ್ರಿ ಠಾಣೆಗಳಿಗೆ ತಲಾ ಒಂದೊಂದು ಬೈಕ್ ಒದಗಿಸಲಾಗಿತ್ತು. ಮಂಗಳೂರು ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಗೂ ನಿರ್ಭಯ ಬೈಕ್‌ಗಳನ್ನು ಒದಗಿಸಲಾಗಿತ್ತು.
Related Articles
ಶಾಲಾ-ಕಾಲೇಜು ಆರಂಭ ಹಾಗೂ ಮನೆಗೆ ಬಿಡುವ ಸಂದರ್ಭದಲ್ಲಿ ವಿದ್ಯಾಸಂಸ್ಥೆ ವ್ಯಾಪ್ತಿಯಲ್ಲಿ, ಬಸ್ ನಿಲ್ದಾಣಗಳಲ್ಲಿ ನಿರ್ಭಯ ಬೈಕ್ ಮೂಲಕ ಗಸ್ತು ಕೈಗೊಳ್ಳಬೇಕಿದೆ. ಇವುಗಳ ಬಗ್ಗೆ ಜನರಲ್ಲಿ ಮಾಹಿತಿಯೇ ಇಲ್ಲ. ಹಾಗಾಗಿ ಬಹುತೇಕ ಬೈಕ್‌ಗಳು ಠಾಣೆಯ ಶೆಡ್‌ಗಳಲ್ಲೇ ಇವೆ. ಹಾಗಾಗಿ ನೈಜ ಉದ್ದೇಶಕ್ಕೆ ಬೈಕ್‌ಗಳನ್ನು ಬಳಸುವಂತೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.
Advertisement
“ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ದೂರುಗಳು ಬಂದಾಗ ಅಲ್ಲಿಗೆ ತೆರಳಲು, ಶಾಲಾ-ಕಾಲೇಜು ಸಮಯದಲ್ಲಿ ಗಸ್ತು ತಿರುಗಲು ನಿರ್ಭಯ ಬೈಕ್‌ಗಳನ್ನು ಬಳಸಬಹುದು. ನಗರ ಭಾಗದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಶಾಲಾ-ಕಾಲೇಜುಗಳು ದೂರದಲ್ಲಿರುವುದರಿಂದ ಒಂದು ಠಾಣೆಯ ಒಂದು ಬೈಕ್‌ನಲ್ಲಿ ಗಸ್ತು ಕಷ್ಟವಾಗಬಹುದು. ಆ ಬಗ್ಗೆ ಯೋಚಿಸಿ ನಿರ್ಭಯ ಬೈಕ್ ಪರಿಣಾಮಕಾರಿ ಬಳಕೆಗೆ ಆದೇಶಿಸಲಾಗುವುದು.”– ಯತೀಶ್ ಎನ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ದ. ಕ. ಜಿಲ್ಲೆ “ಉಡುಪಿ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ 22 ನಿರ್ಭಯ ಬೈಕ್‌ಗಳನ್ನು ನೀಡಲಾಗಿದೆ. ಮಹಿಳೆ, ಮಕ್ಕಳ ರಕ್ಷಣೆ ಜತೆಗೆ ಕಾನೂನು ಸುವ್ಯವಸ್ಥೆ ಸಂದರ್ಭ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಇನ್ನಷ್ಟು ಪರಿಣಾಮಕಾರಿ ಜಾರಿಗೆ ನಿರ್ದೇಶನ ನೀಡಲಾಗುವುದು.”
– ಡಾ| ಅರುಣ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ ಜಿಲ್ಲೆ