Advertisement

ಮಹಿಳೆಯರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ: ಸರಿತಾ

06:40 PM Mar 15, 2020 | Suhan S |

ಮುಂಬಯಿ, ಮಾ. 14: ಮಹಿಳೆಯರು ಹಕ್ಕು ಮತ್ತು ಸಮಾನತೆಯನ್ನು ಸಮಾಜದಲ್ಲಿ ಪ್ರತಿಷ್ಠಾಪಿಸುವಂತಹ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ನಿರಂತರವಾಗಿ ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ದುಡಿಯಬೇಕು. ಆಗ ಮಾತ್ರ ಸುಸಂಸ್ಕೃತ ಮತ್ತು ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯಎಂದು ಮಣಿಪಾಲದ ಸಾಮಾಜಿಕ ಕಾರ್ಯಕರ್ತೆ, ಉದ್ಯಮಿ ಸರಿತಾ ಸಂತೋಷ್‌ ನುಡಿದರು.

Advertisement

ಮಾ. 8ರಂದು ಅಂಧೇರಿಯ ಮೊಗವೀರ ಭವನದಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿರುವ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಹಿಳಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮಹಿಳೆಯರು ಅನಾದಿ ಕಾಲದಿಂದಲೂ ಕುಟುಂಬದ ಶ್ರೇಯಸ್ಸಿಗೆ ತಮ್ಮ ಜೀವನವನ್ನೆಲ್ಲಾ ಧಾರೆ ಎರೆಯುತ್ತಾ ಬಂದವರು. ತ್ಯಾಗಮಯಿಯಾಗಿ ಸಾಂಸಾರಿಕ ಪರಿವರ್ತನೆಯ ಸಂದರ್ಭದಲ್ಲೂ ಎಲ್ಲವನ್ನೂ ಸುಧಾರಿಸಿಕೊಂಡು ಬರುವ ಸ್ತ್ರೀ ಶಕ್ತಿಯಾಗಿದ್ದಾಳೆ. ಆದರೆ ಈಗಲೂ ಆಕೆಗೆ ಸಮಾನತೆಯ ಭಾಗ್ಯ ದೊರೆತಿಲ್ಲ. ಈ ಬಗ್ಗೆ ಮಹಿಳಾ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರೇಮಲತಾ ಜಿ. ಪುತ್ರನ್‌ ಅವರು ಸ್ವಾಗತಿಸಿ ಮಾತನಾಡಿ ಮಹಿಳಾ ದಿನವನ್ನು ಆಚರಿಸುವುದರಿಂದ ಮಹಿಳೆಯರಿಗೆ ತಮ್ಮ ಪ್ರಾಮುಖ್ಯದ ಅರಿವು ಹಾಗೂ ವಿಶ್ವದಲ್ಲಿನ ಪರಿ ವರ್ತನೆಯ ಬಗ್ಗೆ ತಿಳಿಯುತ್ತದೆ. ವಿಶ್ವವೇ ಒಂದು ಕುಟುಂಬ ಎಂದು ಭಾವಿಸುವ ಮೂಲ ತತ್ವದ ಈ ಮಹಿಳಾ ದಿನಾಚರಣೆಯು ವಿಶೇಷತೆಯನ್ನು ಹೊಂದಿದೆ ಎಂದರು.

ಗೌರವ ಅತಿಥಿಯಾಗಿ ಆಗಮಿಸಿದ ಠಾಕೂರ್‌ ಪಬ್ಲಿಕ್‌ ಸ್ಕೂಲ್‌ನ ಪ್ರಾಂಶುಪಾಲೆ ಯೋಗಿನಿ ಸುವರ್ಣ ಅವರು ಮಾತನಾಡಿ, ಮಕ್ಕಳ ಶಿಕ್ಷಣ, ಗುಣನಡತೆ, ಸಂಸ್ಕೃತಿ ಹಾಗೂ ವ್ಯವಹಾರಗಳಿಗೆ ಸೂಕ್ತ ಮಾರ್ಗ ದರ್ಶನವನ್ನು ಮಕ್ಕಳಿಗೆ ಶಿಕ್ಷಣ ದೊಂದಿಗೆ ಉತ್ತಮ ಸಂಸ್ಕಾರವನ್ನು ಕಲಿಸುವುದು ಇಂದಿನ ಆಗತ್ಯ ವಾಗಿದೆ. ಬರೇ ಉದ್ಯೋಗಕ್ಕೆ ಪದವಿಪಡೆಯುವುದು ಮುಖ್ಯವಲ್ಲ. ಸಮಾಜದಲ್ಲಿ ಗೌರವ ದೊರೆಯ ಬೇಕಾದರೆ ಉತ್ತಮ ಸಂಸ್ಕಾರವೂ ಹಣ್ಮಕ್ಕಳಿಗೆ ಬೇಕು. ಆದ್ದರಿಂದ ಹೆಣ್ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ತಿಳಿಯಪಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಮೊಗವೀರ ಮಂಡಳಿಯ ಅಧ್ಯಕ್ಷ ಕೃಷ್ಣ ಕುಮಾರ್‌ ಎಲ್‌. ಬಂಗೇರ ಅವರುಮಾತನಾಡಿ, ಒಟ್ಟು ತನ್ನ ಬದುಕಿನಲ್ಲಿ ಹೆಣ್ಣು ತಂಗಿಯಾಗಿ, ಮಗಳಾಗಿ, ತಾಯಿಯಾಗಿ, ಸೊಸೆಯಾಗಿ, ಅಜ್ಜಿಯಾಗಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಇಂತಹ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಳೇ ಸಮಾಜಕ್ಕೆ ಆದರ್ಶ ಮಹಿಳೆಯಾಗಿ, ಮಾತೆಯಾಗಿ ಗೌರವಿಸಲ್ಪಡು ತ್ತಾಳೆ. ಜಾಗತಿಕ ಮಹಿಳಾ ದಿನಾಚರಣೆಯ ಸಂದರ್ಭ ಎಲ್ಲ ಮಹಿಳೆಯರಿಗೆ ಶುಭ ಕೋರುತ್ತಾ, ಮಹಿಳೆಯರು ಎದುರಿಸುವ ಸಂಕಷ್ಟಗಳು ದೂರವಾಗಲಿ ಎಂದು ಹಾರೈಸಿದರು.

Advertisement

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಗರ ಸೇವಕಿ ನಯನಾ ಆರ್‌. ಶೆಟ್ಟಿ, ಖ್ಯಾತ ನೃತ್ಯ ಕಲಾವಿದೆ ಮತ್ತು ಸಿನೆಮಾ ತಾರೆ ಕಾಜಲ್‌ ಕುಂದರ್‌, ಭರತನಾಟ್ಯ ಪ್ರವೀಣೆ ಮಾಹಿಮಾ ಪುತ್ರನ್‌ ಅವರನ್ನು ಗೌರವಿಸಲಾಯಿತು. ಸಮ್ಮಾನಿತರು ಸಂದರ್ಬೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಜತೆ ಕಾರ್ಯದರ್ಶಿ ಸುರೇಖಾ ಎಸ್‌. ಪುತ್ರನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಮೊಗವೀರ ಮಂಡಳಿಯ ಉಪಾಧ್ಯಕ್ಷ ಹರೀಶ್‌ ಪುತ್ರನ್‌, ಟ್ರಸ್ಟಿ ವಿಕಾಸ್‌ ಪುತ್ರನ್‌, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುಮತಿ ತಿಂಗಳಾಯ, ಕಾರ್ಯದರ್ಶಿ ಸುರೇಖಾ ಸುವರ್ಣ, ಕೋಶಾಧಿಕಾರಿ ಸುಮನ್‌ ಶ್ರೀಯಾನ್‌, ಮೀರಾ-ಭಾಯಂದರ್‌ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸೂರ್ಯಕಲಾ ಸುವರ್ಣ, ಡೊಂಬಿವಲಿ ಶಾಖೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಮೆಂಡನ್‌ ಉಪಸ್ಥಿತರಿದ್ದರು. ಸುಮತಿ ತಿಂಗಳಾಯ ವಂದಿಸಿದರು. ಮೀರಾ-ಭಾಯಂದರ್‌, ನವಿ ಮುಂಬಯಿ ಶಾಖೆಗಳ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಮಾಜ ಬಾಂಧವರು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next